ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಫೆ. 14 ರಿಂದ 25ರವರೆಗೆ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರಿಗೆ ಸಿಎಂ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟದ ಸಭೆಯ ನಂತರ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಕೋವಿಡ್ ಸ್ಥಿತಿಗತಿ, ಕೋವಿಡ್ ನಿರ್ವಹಣೆ, ಶಾಲಾ-ಕಾಲೇಜು ಹಾಗೂ ಸಂಘ ಸಂಸ್ಥೆಗಳ ಮನವಿಗಳನ್ನು ತಜ್ಞರ ಸಮಿತಿಯ ಮುಂದೆ ಇರಿಸಲಾಗಿದ್ದು, ತಜ್ಞರ ವರದಿ ಬಂದ ನಂತರ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತಿಸುತ್ತೇನೆ: ಶ್ರೀರಾಮುಲು
ಬಿಬಿಎಂಪಿ ಚುನಾವಣೆ:
ಬಿಬಿಎಂಪಿ ಚುನಾವಣೆಯ ಬಗ್ಗೆ ಚರ್ಚಿಸಲಾಗಿದ್ದು, ಬೆಂಗಳೂರಿನ ಸಚಿವರೊಂದಿಗೆ ಇತರ ಜಿಲ್ಲೆಗಳ ಸಚಿವರನ್ನೂ ನಿಯೋಜಿಸಿ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸರ್ಕಾರದ 6 ತಿಂಗಳ ಸಾಧನೆಗಳ ಪ್ರಚಾರ:
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ 6 ತಿಂಗಳ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದೆ. 2023 ವರೆಗಿನ ಸರ್ಕಾರದ ಕಾರ್ಯಕ್ರಮಗಳು, ಈ 6 ತಿಂಗಳ ಅವಧಿಯಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆಗಳ ಬಗ್ಗೆ ಮುಂದಿನ ಒಂದು ವಾರದ ಕಾಲ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಸಚಿವರು ತಮ್ಮ ಇಲಾಖೆಗಳಿಗೆ ತಿಳಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಗ್ಗೆ ಸಹೋದರ ಸತೀಶ್ ಜಾರಕಿಹೊಳಿ ವ್ಯಂಗ್ಯ
ಬಿಜೆಪಿ ಚಿಂತನ-ಮಂಥನ ಸಭೆ:
ಬರುವ ದಿನಗಳಲ್ಲಿ ಪಕ್ಷ, ಸಂಘಟನೆ ಹಾಗೂ ಸರ್ಕಾರದ ಮಧ್ಯೆ ಸಮನ್ವಯ ಸಾಧಿಸುವ ಚಿಂತನ-ಮಂಥನ ಸಭೆಯನ್ನು ಪಕ್ಷದ ಅಧ್ಯಕ್ಷರು ಶೀಘ್ರದಲ್ಲಿ ನಡೆಸಲಿದ್ದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುವ ತೀರ್ಮಾನವನ್ನು ಮಾಡಲಾಗಿದೆ ಎಂದರು.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ:
ರೇಸ್ ಕೋರ್ಸ್‌ನಲ್ಲಿ ನಡೆಯುವ ಡರ್ಬಿ ರೇಸ್‍ನಲ್ಲಿ ಸಾವಿರಾರು ಜನ ಸೇರುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದವರು ಆಕ್ಷೇಪ ಎತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ಯಾವುದೇ ಅವಕಾಶವಿರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಪಾಲನೆ ಆಗಬೇಕು. ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಮುಸಲ್ಮಾನರೇ ಅಪ್ಪ-ಅಮ್ಮ: ನಾರಾಯಣಸಾ ಭಾಂಡಗೆ
ಬಿಬಿಎಂಪಿ ಸಭೆಗಳನ್ನು ನಡೆಸುವ ಮೂಲಕ ಬೆಂಗಳೂರಿನ ಬಿಜೆಪಿಗೆ ಅನುಕೂಲವಾಗಲು ಹಾಗೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಇರುವುದೇ ಆರೋಪ ಮಾಡಲು. ಅವರ ಸರ್ಕಾರ ಇದ್ದಾಗ ಏನೆಲ್ಲಾ ಮಾಡಿದ್ದರು ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.