– ನಿಮ್ಮ ಹಗರಣಗಳನ್ನೆಲ್ಲ ಬಯಲಿಗೆಳೆಯುತ್ತೇನೆ ಎಂದ ಸಿಎಂ
– ಭ್ರಷ್ಟ ಮುಖ್ಯಮಂತ್ರಿ ಅಂತ ಅಶ್ವಥ್ ನಾರಾಯಣ್ ವಾಗ್ದಾಳಿ
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಗುರುವಾರವಾದ ಇಂದು ಸಹ ವಾಲ್ಮೀಕಿ ನಿಗಮದ ಹಗರಣ ಕೇಸ್ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಅವರ ನಡುವೆ ಜಟಾಪಟಿ ನಡೆಯಿತು. ಈ ವೇಳೆ ಇಬ್ಬರೂ ಏಕವಚನ ಪ್ರಯೋಗಿಸಿ ವಾಗ್ದಾಳಿ ನಡೆಸಿದರು.
ಕಲಾಪ ಆರಂಭದಲ್ಲೇ ವಾಲ್ಮೀಕಿ ಹಗರಣದ ವಿಚಾರದಲ್ಲಿ ಕಾಂಗ್ರೆಸ್ – ಬಿಜೆಪಿ ನಾಯಕರ ನಡುವೆ ತೀವ್ರ ಗದ್ದಲ ಏರ್ಪಟ್ಟಿತು. ಬಿಜೆಪಿ ಅವರಿಂದ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಶ್ವಥ್ ನಾರಾಯಣ್ ಏರುಧ್ವನಿಯಲ್ಲಿ ವಾಗ್ದಾಳಿ ನಡೆಸಿದರು. ಪೇ ಸಿಎಂ, 100% ಸಿಎಂ ಅಂತ ಕೂಗಿದರು, ಇದಕ್ಕೆ ಬಿಜೆಪಿಯ ಎಲ್ಲ ಶಾಸಕರು ದನಿಗೂಡಿಸಿದರು. ನಂತರ ಗರಂ ಆದ ಸಿಎಂ, ನಿಮಗೆ ಮಾನ ಮಾರ್ಯಾದೆ ಇಲ್ಲ, ನಿಮ್ಮ ಹಗರಣಗಳನ್ನೆಲ್ಲ ಈಗ ಬಲಿಗೆ ಎಳೆಯುತ್ತೇನೆ ಎನ್ನುತ್ತಿದ್ದಂತೆ ʻಭ್ರಷ್ಟ ಮುಖ್ಯಮಂತ್ರಿʼ ಎಂದು ಅಶ್ವಥ್ ನಾರಾಯಣ್ ಕೂಗಿದರು. ಇದಕ್ಕೆ ಆಕ್ರೋಶ ಹೊರಹಾಕಿದ ಕೈ ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ ಅವರನ್ನ ಹೊರಗೆ ಹಾಕಿ ಎಂದ ಸ್ಪೀಕರ್ ಎದುರು ಪಟ್ಟು ಹಿಡಿದರು. ಈ ವೇಳೆ ಉಭಯ ನಾಯಕರ ನಡುವೆ ಗದ್ದಲ ಏರ್ಪಟ್ಟಿತು.
ನಿಮ್ಮ ಡಿಸಿಎಂ ಜೈಲಿಗೆ ಹೋಗಿದ್ದವರು:
ಅಶ್ವಥ್ ನಾರಾಯಣ್ – ಭೈರತಿ ಸುರೇಶ್ ನಡುವೆಯೂ ಸದನದಲ್ಲಿ ವಾಕ್ಸಮರ ಏರ್ಪಟ್ಟಿತು. ನೀವು ಭ್ರಷ್ಟರಾಗಿದ್ದರಿಂದಲೇ 87 ಕೋಟಿ ರೂ. ಲೂಟಿಯಾಗಿದ್ದು, ನೀವೊಬ್ಬ ಲೂಟಿಕೋರ ಎಂದು ಅಶ್ವಥ್ ನಾರಾಯಣ್ ಗದರಿದರು. ಇದಕ್ಕೆ ನೀನು ಲೂಟಿಕೋರ ನಿಮ್ಮ ಅವಧಿಯಲ್ಲಿ ಏನಾಗಿದೆ ಎಲ್ಲ ಗೊತ್ತಿದೆ ಎಂದು ಬೈರತಿ ಸುರೇಶ್ ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸುನೀಲ್ ಕುಮಾರ್, ನಿಮ್ಮ ಉಪಮುಖ್ಯಮಂತ್ರಿ ಜೈಲಿಗೆ ಹೋಗಿದ್ದವರು, ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದರು. ಬಳಿಕ ಗುಡುಗಿದ ಸಚಿವ ದಿನೇಶ್ ಗುಂಡೂರಾವ್, ಎಲ್ಲವೂ ಸರಿಯಾಗಿ ಚರ್ಚೆಯಾಗ್ತಿತ್ತು, ಇವರು ಮಧ್ಯೆ ಎದ್ದುಬಿಟ್ಟರು. ಅವರು ಯಾವ ಡಾಕ್ಟ್ರೋ ಗೊತ್ತಾಗ್ತಿಲ್ಲ? ಎಂದು ಅಶ್ವಥ್ ನಾರಾಯಣ್ ವಿರುದ್ಧ ಲೇವಡಿ ಮಾಡಿದರು. ಈ ವೇಳೆ ಮೊದಲು ನಿಮ್ಮದು ನೋಡಿಕೊಳ್ಳಿ, ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗ್ತಿದೆ, ಆರೋಗ್ಯ ಇಲಾಖೆ ಏನಾಗಿದೆ? ನೋಡ್ಕೊಳ್ಳಿ ಎಂದು ಗುಂಡೂರಾವ್ ಆರೋಪಕ್ಕೆ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟರು. ಇದರಿಂದ ಸದನದಲ್ಲಿ ಎರಡೂ ಕಡೆ ಪರಸ್ಪರ ವಾಕ್ಸಮರ ಉಂಟಾಯಿತು.
ಸಿಎಂ ವಿರುದ್ಧ ಏರುಧ್ವನಿ ಎತ್ತಿದ ಅಶ್ವಥ್ ನಾರಾಯಣ್:
ಸದನದಲ್ಲಿ ಗದ್ದಲದ ನಡುವೆ ಸಿಎಂ ವಿರುದ್ಧ ಅಶ್ವಥ್ ನಾರಾಯಣ್ ಏರು ಧ್ವನಿಯಲ್ಲಿ ಮಾತನಾಡಿದರು. ಭ್ರಷ್ಟಾಚಾರ ನಡೆಸಿದವರು ನೀವು ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಅಶ್ವಥ್ ನಾರಾಯಣ್‌ಗೆ ಸಿಎಂ ಎಚ್ಚರಿಕೆ ನೀಡಿದರು. ನಿಮ್ಮ ಭ್ರಷ್ಟಾಚಾರಗಳನ್ನೆಲ್ಲ ತೆಗೆಯುತ್ತೇವೆ, ಕೆಲವರದ್ದನ್ನೆಲ್ಲ ಈಗ ತೆಗೆಯುತ್ತೇವೆ. ನಿಮಗಿಂತ ಜಾಸ್ತಿ ಕೂಗೋಕೆ ನಮಗೂ ಬರುತ್ತೆ. ಭ್ರಷ್ಟಾಚಾರ ಮಾಡಿದವನು ನೀನು, ಭ್ರಷ್ಟಾಚಾರದ ಬಗ್ಗೆ ನನಗೆ ಹೇಳಿ ಕೊಡ್ತೀರಾ? 42 ವರ್ಷಗಳಿಂದ ಅಧಿಕಾರದಲ್ಲಿ ಇರುವವನು ನಾನು. ನೀವು 40% ಕಮೀಷನ್ ಹೊಡೆದಿದ್ದು ಬಯಲಾಗಿದೆ. ಹೇಡಿಗಳು, ಭಂಡರು ಅಂತ ಅಶ್ವಥ್ ನಾರಾಯಣ್ ವಿರುದ್ಧ ಸಿಎಂ ಕೆಂಡಾಮಂಡಲವಾದರು.
ಸಿಎಂ ವಿರುದ್ಧ ಏಕವಚನ ಪ್ರಯೋಗ:
ಸಿಎಂ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಂತೆ ಗರಂ ಆದ ಅಶ್ವಥ್ ನಾರಾಯಣ್ ಸಿಎಂ ವಿರುದ್ಧ ಏಕವಚನ ಪ್ರಯೋಗಿಸಿದರು. ನೀನು ಭ್ರಷ್ಟಾಚಾರದ ಪಿತಾಮಹ ಎಂದು ವಾಗ್ದಾಳಿ ನಡೆಯಿತು. ಇದರಿಂದ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ಬಿಜೆಪಿ ಶಾಸಕರು, ಕಾಂಗ್ರೆಸ್ ಸಚಿವರು ಪರಸ್ಪರ ವೈಯಕ್ತಿಕ ಟೀಕೆ ನಡೆಸಿದ ಪ್ರಸಂಗ ಕಂಡುಬಂದಿತು.