ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಇಂದು (ಗುರುವಾರ) ಕೂಡ ‘ಪಾಕಿಸ್ತಾನ ಜಿಂದಾಬಾದ್’ ಪ್ರಕರಣ ಸದ್ದು ಮಾಡಿತು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ, ಜೆಡಿಎಸ್ ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಿ ಎಂದು ಆಗ್ರಹಿಸಿ ಗದ್ದಲ ಸೃಷ್ಟಿಸಿದ ಪ್ರಸಂಗ ನಡೆಯಿತು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸರ್ಕಾರ ಯಾರನ್ನೂ ಬಂಧಿಸಿಲ್ಲ. ಗಪ್‌ಚುಪ್ ಕೂತಿದೆ. ನಾಸೀರ್ ಹುಸೇನ್ ವಿಚಾರಣೆ ಸಹ ಮಾಡಿಲ್ಲ. ಜನತೆಗೆ ಏನು ಸಂದೇಶ ಕೊಡಲು ಹೋಗ್ತಿದೀರಿ? ವಿಧಾನಸೌಧ ಉಗ್ರರ ತಾಣ ಆಗೋದನ್ನ ತಡೆಯೋರು ಯಾರು? ಜನರ ರಕ್ಷಣೆಯ ಜವಾಬ್ದಾರಿ ಸರ್ಕಾರ ಮರೆತಿದೆಯಾ? ಸರ್ಕಾರ ಎದ್ದಿಲ್ಲ, ಕುಂಭಕರ್ಣ ನಿದ್ದೆ ಮಾಡ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ ಆರೋಪ; ಪೊಲೀಸರಿಂದ ನಾಸೀರ್ ಹುಸೇನ್ ಬೆಂಬಲಿಗನ ವಿಚಾರಣೆ
ಕೋಲಾರದಲ್ಲಿ ಆರು ದಲಿತರನ್ನು ಸುಟ್ಟು ಹಾಕಿದ ಪ್ರಕರಣದ ಬಗ್ಗೆ ಮಾತನಾಡಿದ ಅಶೋಕ್, ಖರ್ಗೆಯವರು ಆವತ್ತು ಸದನದಲ್ಲಿ ಕಣ್ಣೀರು ಹಾಕಿದ್ರು. ಆದ್ರೆ ಈಗ ಈ ಸರ್ಕಾರಕ್ಕೆ ಕಾಳಜಿ, ಜವಾಬ್ದಾರಿ ಇಲ್ವೇ ಇಲ್ಲ ಎಂದು ಟೀಕಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪರಮೇಶ್ವರ್, ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಏಳು ಜನರ ವಿಚಾರಣೆ ಮಾಡಲಾಗಿದೆ. ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದೀವಿ. ಸರ್ಕಾರ ಗಂಭೀರವಾಗಿ ತನಿಖೆ ನಡೆಸ್ತಿದೆ, ಹಗುರವಾಗಿ ನೋಡ್ತಿಲ್ಲ. ಯಾರ ರಕ್ಷಣೆಯನ್ನು ಮಾಡ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ವಿಧಾನಸಭೆ ಏಳು ಜನರನ್ನ ಮಾತಾಡ್ಸಿ ಕಳ್ಸಿದ್ದೀರಾ, ಬಿರಿಯಾನಿ ತಿನಿಸಿ ಕಳಿಸಿದ್ದೀರಾ? ಒದ್ದು ಒಳಗೆ ಹಾಕೋದಲ್ವಾ? ಒಬ್ಬರನ್ನೂ ಬಂಧಿಸಿಲ್ಲ. ಸರ್ಕಾರಕ್ಕೆ ನೈತಿಕತೆ ಇಲ್ಲ. ಈ ಕೂಡಲೇ ಸರ್ಕಾರ ತೊಲಗಬೇಕು. ಕರೆದು ಸನ್ಮಾನ ಮಾಡಿದ್ದೀರ. ಇದಕ್ಕಿಂತಲೂ ನಾಚಿಕೆ ಸಂಗತಿ ಏನಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ, ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೀವಿ. ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದೀವಿ. ಸೂಮೋಟೋ ಪ್ರಕರಣ ದಾಖಲಾಗಿದೆ. ತನಿಖೆ ನಡೀತಿದೆ. ನಮಗೆ ದೇಶಭಕ್ತಿ ನಿಮಗಿಂತ ನೂರು ಪಾಲು ಜಾಸ್ತಿ ಇದೆ. ಯಾರೇ ಪಾಕಿಸ್ತಾನ ಜಿಂದಾಬಾದ್ ಕೂಗಿದ್ರೆ ಕಠಿಣ ಕ್ರಮ. ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂದರು. ಸದನದಲ್ಲಿ ಗದ್ದಲ, ವಾಕ್ಸಮರ ಜೋರಾಯಿತು. ಇದನ್ನೂ ಓದಿ: ಪಶುಸಂಗೋಪನಾ ಇಲಾಖೆಯ 2 ಎಕರೆ ಜಮೀನು ಅಲ್ಪಸಂಖ್ಯಾತರಿಗೆ – ಸರ್ಕಾರದ ನಡೆಗೆ ವಿರೋಧ
ದೋಸ್ತಿಗಳು (ಬಿಜೆಪಿ-ಜೆಡಿಎಸ್) ಧರಣಿ ಕುಳಿತರು. ಧರಣಿ ನಡುವೆಯೇ ಬಜೆಟ್ ಮೇಲೆ ನಡೆದ ಚರ್ಚೆಗೆ ಸಿಎಂ ಉತ್ತರ ನೀಡಲು ಪ್ರಾರಂಭಿಸಿದರು. ಇದಕ್ಕೂ ವಿಪಕ್ಷ ನಾಯಕರು ಅಡ್ಡಿ ಪಡಿಸಲು ಮುಂದಾದರು. ಬಜೆಟ್ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿಎಂ ಉತ್ತರ ಖಂಡಿಸಿ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.