ವಿಧಾನಸಭೆ ಅಧಿವೇಶನದ ವೇಳೆ ಏಪ್ರಿಲ್ ಜ್ವರದ ಕುತೂಹಲ!

Public TV
2 Min Read
Session 3 1

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಶುರುವಾದಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಧಾನಸಭೆ ಮೊಗಸಾಲೆಯಲ್ಲಿ ಏಪ್ರಿಲ್ ರಾಜಕೀಯ ಜ್ವರ ಬಿಸಿಬಿಸಿ ಚರ್ಚೆಯಾಗಿದೆ.

GOA ELECTION 2

ಏನಿದು ಏಪ್ರಿಲ್ ಜ್ವರ:
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗಾರಿ ಬಾರಿಸಿದ ಪರಿಣಾಮ ಇದೀಗ ಕರ್ನಾಟಕದಲ್ಲಿ 2023ರ ಚುನಾವಣೆಗೂ ಮುನ್ನ ರಾಜಕೀಯವಾಗಿ ಭಾರೀ ಬದಲಾವಣೆಯ ಪರ್ವ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನದ ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರಲ್ಲಿ ಏಪ್ರಿಲ್ ರಾಜಕೀಯ ಜ್ವರದ ಮಾತುಕತೆ ಕೇಳಿಬಂದಿದೆ. ಪಕ್ಷ ಮತ್ತು ಸರ್ಕಾರ ಎರಡರಲ್ಲೂ ಏಪ್ರಿಲ್‍ನಲ್ಲಿ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಸಚಿವರಲ್ಲಿ ಚರ್ಚೆ ಕೂಡ ನಡೆದಿದೆ ಹಾಗಾಗಿ ಏಪ್ರಿಲ್‍ನಲ್ಲಿ ರಾಜಕೀಯ ಜ್ವರ ನಾಯಕರಲ್ಲಿ ಆವರಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: Exclusive -ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಚುನಾವಣೆ?

BASAVARJ BOMMAI 6

ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳನ್ನು ಗೆದ್ದಿರುವ ಬಿಜೆಪಿ ಅಧಿಕಾರ ಸ್ವೀಕಾರದ ಬಳಿಕ ಕರ್ನಾಟಕದ ಕಡೆ ಮುಖ ಮಾಡಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡುತ್ತಿದೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಪದಾಧಿಕಾರಿಗಳ ಬದಲಾವಣೆ ಬಗ್ಗೆಯೂ ಬಿಜೆಪಿ ಶಾಸಕರ ನಡುವೆ ಗಂಭೀರ ಚರ್ಚೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯಕ್ಕೆ ಬರಲಿದ್ದಾರೆ ಮೋದಿ – ಕಲಬುರಗಿಗೆ ಯಾಕೆ?

ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‍ನಲ್ಲೂ ಡಜನ್ ಗಟ್ಟಲೆ ಬದಲಾವಣೆ ಆಗುತ್ತದೆ. 8 ರಿಂದ 10 ಹಾಲಿ ಸಚಿವರನ್ನು ಕೈ ಬಿಟ್ಟು 12 ರಿಂದ 14 ಹೊಸ ಮುಖಗಳಿಗೆ ಮಣೆ ಹಾಕಬಹುದು. ಏಪ್ರಿಲ್‍ನಲ್ಲೇ ಪಕ್ಷ, ಸರ್ಕಾರ ಎರಡರಲ್ಲೂ ಬದಲಾವಣೆ ಆಗುತ್ತದೆ ಎಂದು ಶಾಸಕರ ನಡುವೆ ಪರಸ್ಪರ ಮಾತುಕತೆ ನಡೆದಿದೆ.

ಈ ಎಲ್ಲಾ ವಿಷಗಳಿಗೆ ಪೂರಕವೆಂಬಂತೆ ಏಪ್ರಿಲ್‍ನಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ಬಳಿಕ ಸಮೀಕ್ಷೆ ಮಾಡಲು ಹೈಕಮಾಂಡ್ ಮುಂದಾಗಿದೆ. ಈ ಸಮೀಕ್ಷೆಯಲ್ಲಿ ಬರುವ ಫಲಿತಾಂಶದ ಆಧಾರದಲ್ಲಿ ಚುನಾವಣೆಗೆ ಹೋಗಬೇಕೇ? ಬೇಡವೇ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಮೋದಿ ರಾಜ್ಯಪ್ರವಾಸಕ್ಕೂ ಮುನ್ನ ಕ್ಯಾಬಿನೆಟ್ ಪುನಾರಚನೆ ಆದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಈ ಮೂಲಕ ಎಲೆಕ್ಷನ್ ಇಯರ್, ಎಲೆಕ್ಷನ್ ಕ್ಯಾಬಿನೆಟ್, ಎಲೆಕ್ಷನ್ ಪಾರ್ಟಿ ಪ್ರೆಸಿಡೆಂಟ್, ಕೊನೆಗೆ ಎಲೆಕ್ಷನ್‍ಗೆ ರೆಡಿ ಎಂಬ ಸಂದೇಶವನ್ನು ರವಾನಿಸುವ ಸಾಧ್ಯತೆಯಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯುವ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *