ಬೆಂಗಳೂರು: ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ನೆರೆ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ(Siddaramaiah) ಅವರು ಬೋಟ್‌ನಲ್ಲಿ ಭೇಟಿ ನೀಡಿದ ಪ್ರಸಂಗ ಸದನದಲ್ಲಿ ಹಾಸ್ಯ ಚಟಾಕಿಗೆ ಕಾರಣವಾಯಿತು.
ವಿಧಾನಸಭೆಯಲ್ಲಿ (Vidhanasabha Session) ರಾಜ್ಯದಲ್ಲಿನ ಅತಿವೃಷ್ಟಿ ಸಂಬಂಧ ನಿಯಮ 69ರಡಿ ಚರ್ಚೆ ನಡೆಯಿತು. ಬೆಂಗಳೂರಿನಲ್ಲಿ ಮಳೆ ಅವಾಂತರಗಳ ಕುರಿತು ಸಿದ್ದರಾಮಯ್ಯ ಅವರು ಮಾತನಾಡುವಾಗ ಬೋಟ್ ಪ್ರಸಂಗ ಮುನ್ನೆಲೆಗೆ ಬಂತು. ಸೆಲೆಬ್ರಿಟಿಗಳು ಇರುವ ಯಮಲೂರಿನಲ್ಲಿ ಬೋಟ್‌ನಲ್ಲೇ ಹೋಗಬೇಕು ಎಂದು ಸಿದ್ದರಾಮಯ್ಯ ಹೇಳುವಾಗ ಮಧ್ಯೆ ಪ್ರವೇಶಿಸಿದ ಶಾಸಕ ಅರವಿಂದ್ ಲಿಂಬಾವಳಿ, ರೋಡಲ್ಲೇ ಹೋಗಬಹುದಿತ್ತು. ನೀವ್ಯಾಕೆ ಬೋಟಲ್ಲಿ ಹೋದಿರಿ ಗೊತ್ತಿಲ್ಲ ಎಂದು ಸಿದ್ದು ಕಾಲೆಳೆದರು.
Advertisement
Advertisement
ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದ್ದು, ನೀವು ಬರೋದಾಗಿ ಹೇಳಿದ್ರೆ ನಾನೇ ವೆಲ್ ಕಮ್ ಮಾಡ್ತಿದ್ದೆ. ರಸ್ತೆ ತೋರಿಸಬಹುದಿತ್ತು ಎಂದು ತಿರುಗೇಟು ಕೊಟ್ಟರು. ಅದಕ್ಕೆ ಲಿಂಬಾವಳಿ ಪ್ರತಿಕ್ರಿಯಿಸಿ, ನಿಮ್ಮನ್ನ ದಿಕ್ಕು ತಪ್ಪಿಸೋರು ತುಂಬಾ ಜನ ಇದಾರೆ, ಹುಷಾರಾಗಿರಿ ಸಾರ್ ಎಂದು ಮತ್ತೆ ಕಾಳೆದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಿಎಂ ಬೊಮ್ಮಾಯಿ(Basavaraj Bommai), ಒಂದೂವರೆ ಅಡಿ ನೀರಿರುವ ಜಾಗದಲ್ಲಿ ನಿಮ್ಮನ್ನು ಬೋಟಲ್ಲಿ ಕರ್ಕೊಂಡ್ ಹೋಗಿದ್ದ ಪುಣ್ಯಾತ್ಮ ಯಾರಪ್ಪ? ನಾವೆಲ್ಲ ರಸ್ತೆಯಲ್ಲೇ ಹೋಗಿದ್ದು ಎಂದು ಸಿದ್ದುಗೆ ಟಾಂಗ್ ಕೊಟ್ಟರು.
Advertisement
Advertisement
ಕೃಷ್ಣ ಬೈರೇಗೌಡ ಮಾತನಾಡಿ, ಎನ್‌ಡಿಆರ್‌ಎಫ್ ಬೋಟ್‌ನಲ್ಲೇ ಹೋಗಿದ್ದೆವು. ಸುಮಾರು ಲೇಔಟ್ ನೀರಿನಲ್ಲಿ ಮುಳುಗಿತ್ತು. ಅಲ್ಲಿ ಜನ ಕಷ್ಟ ಅನುಭವಿಸಿದ್ದು, ಸುಳ್ಳಾ? ನಾವು ಬೋಟಲ್ಲ, ನೆಡೆದುಕೊಂಡೇ ಹೋಗಿದ್ದೆವು ಎಂದ ಸಿಎಂ ಮಾತಿಗೆ ತಿರುಗೇಟು ನೀಡಿದರು. ಇದೇ ವೇಳೇ ಅರವಿಂದ ಲಿಂಬಾವಳಿ ಮಾತನಾಡಿ ಲೇಔಟ್ ಮಾಡಿದವನ ತಪ್ಪಿಂದ ನೀರು ನಿಂತಿದ್ದು ನಿಜ. ದೊಡ್ಡ ದೊಡ್ಡ ಐಷಾರಾಮಿ ಕಾರಿನಲ್ಲಿ ಓಡಾಡ್ತಿದ್ದವರನ್ನ, ಟ್ರಾಕ್ಟರ್‌ನಲ್ಲಿ ಕರೆದುಕೊಂಡು ಬರುವ ಪರಿಸ್ಥಿತಿ ಬಂತು ಎಂದರು.
ನಾನು ನನ್ನ ಸ್ವಂತ ಬೋಟ್ ತಗೊಂಡ್ ಹೋಗಿರಲಿಲ್ಲ. ಎನ್‌ಡಿಆರ್‌ಎಫ್ ಬೋಟ್ ತೆಗೆದುಕೊಂಡು ಹೋಗಿದ್ದೆ. ಲಿಂಬಾವಳಿ ಅವರನ್ನೇ ಕೇಳಿ, ಮೋಟಾರ್ ಬೋಟ್ ತೆಗೆದುಕೊಂಡು ಹೋಗಿದ್ದೆ. ಒಂದೂವರೆ ಅಡಿ ನೀರು ಇರಲಿಲ್ಲ, 10-12 ಅಡಿ ನೀರು ನಿಂತಿತ್ತು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅರವಿಂದ್ ಲಿಂಬಾವಳಿ ಮಧ್ಯಪ್ರವೇಶಿಸಿ, ಸಿಎಂ ಯಂಗ್ ಆಗಿದ್ದಾರೆ. ಹಾಗಾಗಿ ನಡೆದುಕೊಂಡು ಹೋದ್ರು, ನಿಮಗೆ ಸ್ವಲ್ಪ ವಯಸ್ಸಾಗಿದೆ ಹಾಗಾಗಿ ಬೋಟಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಕಾಲೆಳೆದರು.
ನಾನು ಹೋದಾಗ ನೀರು ಹೆಚ್ಚಿತ್ತೋ, ಕಡಿಮೆ ಇತ್ತೋ ಗೊತ್ತಿಲ್ಲ. ಆದ್ರೆ ನಾನು ನಡೆದುಕೊಂಡು ಹೋಗಿದ್ದು. ನನ್ನ ಬೋಟಲ್ಲಿ ಬರೋದಕ್ಕೆ ಹೇಳಿದ್ರು, ಆದ್ರೆ ನಾನು ಜೀಪಲ್ಲಿ ಹೋದೆ ಎಂದು ಸಿಎಂ ಹೇಳಿದರು. ಬೋಟಲ್ಲಿ ಹೋಗಿದ್ದು ನಿಜ, ನೀರೆದ್ದರೇನೇ ಬೋಟಲ್ಲಿ ಹೋಗೋಕೆ ಸಾಧ್ಯ, ಅದು ಒಂದೂವರೆ ಅಡಿಯಾದ್ರೂ ಇರಲಿ, ಹತ್ತೂವರೆ ಅಡಿಯಾದ್ರೂ ಇರಲಿ. ಮಳೆಯಿಂದ ಹಾನಿಯಾಗಿರೋದು ಸತ್ಯವಾಗಿದ್ದು, ಅಲ್ಲಿ ಭೇಟಿ ಕೊಟ್ಟಾಗ ಜನ ಸಮಸ್ಯೆ ಹೇಳಿಕೊಂಡ್ರು, ಕಾರು, ಸ್ಕೂಟರ್ ಎಲ್ಲ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಳೆ ಹಾನಿಯಾದ ಪ್ರದೇಶದಲ್ಲಿ ಪರಿಹಾರ ಕೊಡುವಂತೆ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಅಶೋಕ್ (R Ashok), ಎನ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ, ಮಳೆ ನಿಂತ ಬಳಿಕವೇ ಸರ್ವೆ ಮಾಡಬೇಕು. ಪ್ರತಿದಿನ ಹೋಗಿ ಪರಿಶೀಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಂತೆ ಸಿದ್ದರಾಮಯ್ಯ ಅವರು, ಪರಿಹಾರ ಕೊಡಲೇ ಬೇಕು. ಬರದಲ್ಲಿ ಎರಡು ವಿಧ, ಒಂದು ಒಣ ಬರ, ಮತ್ತೊಂದು ಹಸಿ ಬರ. ಒಣ ಬರ ಅಂದ್ರೆ ಮಳೆ ಬಾರದೆ, ಬೆಳೆ ಒಣಗಿ ಹೋಗುತ್ತೆ. ಇದರಿಂದ ಗೊಬ್ಬರ, ಬಿತ್ತನೆ ಬೀಜದ ಎಲ್ಲಾ ಖರ್ಚುಗಳು ಉಳಿಯುತ್ತೆ. ಹಸಿ ಬರ ಅಂದ್ರೆ, ಬೆಳೆ ಬೆಳೆದು ಮಳೆ ಬಿದ್ದು ಹಾನಿಯಾಗೋದು. ಇದರಿಂದ ಬೆಳೆದ ಎಲ್ಲ ಬೆಳೆ ಹಾಳಾಗುತ್ತೆ, ರೈತರಿಗೂ ನಷ್ಟ ಆಗುತ್ತದೆ, ಇದರಿಂದ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಮಾತನಾಡಿದ ಅತಿವೃಷ್ಟಿ ಕುರಿತು ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಜನ ಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಒಳ ಹಾಗೂ ಹೊರ ಭಾಗದಲ್ಲಿ ಇಡೀ ಜನ ಜೀವನ ಅಸ್ತವ್ಯಸ್ತ ಆಗಿದೆ. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿಲ್ಲ. ಅವರ ಬೇಜವಾಬ್ದಾರಿತನದಿಂದ ಈ ಪರಿಸ್ಥಿತಿ ಬಂದಿದೆ. ನಾನು ಜವಾಬ್ದಾರಿಯಿಂದಲೇ ಬೇಜವಾಬ್ದಾರಿ ಅಂತ ಬಳಸಿದ್ದೇನೆ. ಸುಮಾರು 20 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಕಳೆದ ಬಾರಿ ಮುಂಗಾರು ಅಧಿವೇಶನದಲ್ಲಿ ಮಾತನಾಡುವಾಗ ಆಗಲೂ ಪ್ರವಾಹ ಬಂದಿತ್ತು ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನವರು ಚಡ್ಡಿ ಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ – ಸಿಟಿ ರವಿ ವ್ಯಂಗ್ಯ
ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಮಾತನಾಡಿದ್ದೆ. ಹವಾಮಾನ ತಜ್ಞರು ಮುಂದಿನ ದಿನದಲ್ಲಿ ಹವಾಮಾನ ಬದಲಾವಣೆಯಿಂದ ರಾಜ್ಯ ಭೀಕರ ಪರಿಸ್ಥಿತಿ ಎದುರಿಸಬೇಕಾಗಲಿದೆ ಅಂತ ಮುನ್ನೆಚ್ಚರಿಕೆ ನೀಡಿದರು. ಈ ವಿಚಾರ ಕಳೆದ ಬಾರಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ. ಹವಾಮಾನ ವಿಜ್ಞಾನಿಗಳು 2030ರೊಳಗೆ ಕೃಷಿ ಮೇಲೆ ಪರಿಣಾಮ ಬೀರಲಿದೆ. ಭತ್ತ ಬೆಳೆ ಸುಮಾರು 5.6ರಷ್ಟು ಕಡಿಮೆಯಾಗಬಹುದು. ಕಡ್ಲೆ 19.2ರಷ್ಟು, ರಾಗಿ ಶೇ.12 ರಷ್ಟು, ಶೇಂಗಾ 9.6ರಷ್ಟು, ಸೋಯಾಬಿನ್ ಕಡಿಮೆ ಆಗಬಹುದು. ಬೆಳೆ ಹೆಚ್ಚಾಗೋದ್ರಲ್ಲಿ ಹತ್ತಿ, ಜೋಳ, ಕಬ್ಬು ಜಾಸ್ತಿಯಾಗುವ ಬೆಳೆಗಳು ಎಂದು ಹವಮಾನ ತಜ್ಞರು ತಿಳಿಸಿದ್ದಾರೆ. ಅದಕ್ಕಾಗಿ ಕೆಲವೆಡೆ ಮಳೆ ಹೆಚ್ಚಾಗಿದೆ, ಕೆಲವೆಡೆ ಕಡಿಮೆಯಾಗಿದೆ ಎಂದರು. ಇದನ್ನೂ ಓದಿ: ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ- ಅಶೋಕ್ ಕಾಲೆಳೆದ ಸಿದ್ದರಾಮಯ್ಯ
ಮಲೆನಾಡಿನಲ್ಲಿ ಕಡಿಮೆ ಮಳೆಯಾಗಿದ್ದು, ಬಯಲುಸೀಮೆಯಲ್ಲಿ ಮಳೆ ಹೆಚ್ಚಾಗಿದೆ. ಹವಾಮಾನ ಬದಲಾವಣೆಯಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ 15-20ರಷ್ಟು ಹೆಚ್ಚಾಗಬಹುದು. ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ಸುತ್ತಮುತ್ತ ಹೆಚ್ಚಾಗಬಹುದು. ಭಾರೀ ಮಳೆಯಿಂದ ರಸ್ತೆಗಳೆಲ್ಲ ಉಕ್ಕಿ ಹರಿದಿವೆ ಎಂದು ಹೇಳಿದರು.