ನಾಳೆ ಪ್ರಧಾನಿ ಮೋದಿ ಉಡುಪಿಗೆ- ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

Public TV
2 Min Read
modi udp

ಉಡುಪಿ: ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಮಂಗಳವಾರ ಉಡುಪಿಗೆ ಆಗಮಿಸುತ್ತಿದ್ದು, ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

ನಾಳೆ ಮಧ್ಯಾಹ್ನ 2.45 ಕ್ಕೆ ಮೋದಿ ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ ಸಂಜೆ 4.30 ರ ವರೆಗೆ ನಗರಕ್ಕೆ ವಾಹನ ಪ್ರವೇಶ ನಿಷೇಧ ಮಾಡಲಾಗಿದೆ. ಎಂಜಿಎಂ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯಲಿರುವ ಕಾರಣ ಕರಾವಳಿ ಜಂಕ್ಷನ್ ನಿಂದ ಇಂದ್ರಾಣಿ ಜಂಕ್ಷನ್ ವರೆಗೆ ಪೊಲೀಸರು ನೋ ವೆಹಿಕಲ್ ಝೋನ್ ನಿರ್ಮಾಣ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆ ಆಗದಿರಲು ನಗರದ ಹೊರ ವಲಯದ ಮೂಲಕ ಬದಲಿ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

modi rally 1

ಸಮಾವೇಶದಲ್ಲಿ 60 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಸಮಾವೇಶದಲ್ಲಿ ಉಡುಪಿ, ಉತ್ತರಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಎಂಜಿಎಂ ಮೈದಾನ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಉಡುಪಿ ಎಸ್ ಪಿ ಲಕ್ಷ್ಮಣ ಬ. ನಿಂಬರ್ಗಿ ಪ್ರಧಾನಿ ಮೋದಿ ಆಗಮನದಿಂದ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ನಗರದಲ್ಲಿ ಮತ್ತು ಪ್ರಧಾನಿ ಸಂಚರಿಸುವ ರಸ್ತೆಗಳ ಇಕ್ಕೆಲದ ಯಾವುದೇ ಅಂಗಡಿಗಳನ್ನು ಮುಚ್ಚಿಸುವುದಿಲ್ಲ. ಸಾರ್ವಜನಿಕ ಸಭೆಯಲ್ಲಿ ಮಾತ್ರ ಮಾಧ್ಯಮಗಳು ಪಾಲ್ಗೊಳ್ಳಬಹುದು ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.

ಇನ್ನು ನಗರದಲ್ಲಿ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಪ್ರವೇಶಿಸುವ ಮಾರ್ಗವನ್ನು ಬದಲಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿಗೆ ಬರುವ ಮತ್ತು ಕುಂದಾಪುರದಿಂದ ಉಡುಪಿಗೆ ಬರುವ ರಸ್ತೆಗಳಿಗೆ ಬದಲಿ ಮಾರ್ಗ ವ್ಯವಸ್ಥೆಗೊಳಲಾಗಿದೆ. ಜಿಲ್ಲೆಗೆ ಬರುವ ಹೊಸಬರಿಗೆ ಬದಲಿ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಜಿಲ್ಲೆಯ ಸುಮಾರು ಒಂದು ಸಾವಿರ ಪೊಲೀಸರು ಪ್ರಧಾನಿಗಳ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ ತೊಡಗಲಿದ್ದಾರೆ. ಎಸ್ ಪಿ ಜಿ, ಬಿಎಸ್ ಎಫ್ ಅಧಿಕಾರಿಗಳು ಗಸ್ತು ಶುರು ಮಾಡಿದ್ದಾರೆ ಎಂದು ವಿವರಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *