ರಾಯಚೂರಿನಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಭರ್ಜರಿ ಫೈಟ್ – ಒಂದೇ ಕ್ಷೇತ್ರಕ್ಕೆ 17 ಅರ್ಜಿ

Public TV
2 Min Read
RCR Congress Ticker Fight

ರಾಯಚೂರು (Raichur): ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections) ಹಿನ್ನಲೆ ಕಾಂಗ್ರೆಸ್ ಪಕ್ಷದಲ್ಲಿ (Congress Party) ಟಿಕೆಟ್‌ಗಾಗಿ ರಾಯಚೂರಿನಿಂದ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲೂ ರಾಯಚೂರು ನಗರ ಕ್ಷೇತ್ರಕ್ಕೆ ಭರ್ಜರಿ ಫೈಟ್ ನಡೆದಿದ್ದು, ಅರ್ಜಿ ಸಲ್ಲಿಸುವವರ ಸಂಖ್ಯೆ ಇನ್ನೂ ಮುಂದುವರಿದಿದೆ. ಅಪ್ಪ-ಮಗ, ಅಣ್ಣ-ತಮ್ಮ, ಅಕ್ಕ-ತಮ್ಮ, ಸಂಬಂಧಿಕರು ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.

congress

2023ರ ರಾಜ್ಯ ವಿಧಾನಸಭಾ ಚುನಾವಣೆಗೆ (Election) ಕೆಪಿಸಿಸಿ (KPCC) ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿದ್ದೆ ತಡ ರಾಯಚೂರಿನಲ್ಲಿ ಟಿಕೆಟ್ ಪಡೆಯಲು ಪೈಪೋಟಿ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ 7 ಕ್ಷೇತ್ರಗಳಿಗೆ 39 ಅರ್ಜಿ ಸಲ್ಲಿಕೆಯಾಗಿದ್ದು, ರಾಯಚೂರು ನಗರ ಕ್ಷೇತ್ರ ಒಂದಕ್ಕೆ ಇದುವರೆಗೆ ಅತೀ ಹೆಚ್ಚು 17 ಅರ್ಜಿಗಳು ಸಲ್ಲಿಕೆಯಾಗಿವೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ರಾಯಚೂರು ನಗರ ಕ್ಷೇತ್ರದಲ್ಲಿ 13 ಜನ ಮುಸ್ಲಿಂ (Muslims), 4 ಜನ ಇತರರು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಸೈಯದ್ ಯಾಸಿನ್ ಅವರ ಪುತ್ರ ಸೈಯದ್ ಸೋಹೆಲ್, ಮಾಜಿ ಶಾಸಕ ಎನ್.ಎಸ್ ಬೋಸರಾಜು ಅವರ ಪುತ್ರ ರವಿ ಬೋಸರಾಜು, ಮಾಜಿ ಶಾಸಕ ಬಸವರಾಜ್ ಪಾಟೀಲ್ ಇಟಗಿ ಸೇರಿ 17 ಜನ ಅರ್ಜಿ ಸಲ್ಲಿಸಿದ್ದು, ಇನ್ನೂ ಮೂರ್ನಾಲ್ಕು ಜನ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ‘ಸಿರಿ ಲಂಬೋದರ ವಿವಾಹ’ ಸಿನಿಮಾಗೆ ರಮೇಶ್ ಅರವಿಂದ್ ಸಾಥ್

CONGRESS 4

ರಾಯಚೂರು ನಗರ ಕ್ಷೇತ್ರದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿರುವುದರಿಂದ ಟಿಕೆಟ್ ಬೇರೆಯವರ ಪಾಲಾಗಬಾರದು ಅಂತ ಹೆಚ್ಚು ಜನ ಮುಸ್ಲಿಮರೇ ರೇಸ್‌ಗಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಹೆಚ್ಚು ಬಾರಿ ಟಿಕೆಟ್ ಕೊಟ್ಟಿರುವ ಇತಿಹಾಸವೂ ಇದೆ. ಆದ್ರೆ ಈ ಬಾರಿ ಯಾರಿಗೆ ಸಿಗುತ್ತೊ ಅನ್ನೋ ಕುತೂಹಲ ಹೆಚ್ಚಾಗಿದೆ. ಲಿಂಗಸುಗೂರು ಕ್ಷೇತ್ರದಲ್ಲಿ 6, ಸಿಂಧನೂರು ಕ್ಷೇತ್ರದಲ್ಲಿ 3, ದೇವದುರ್ಗ 4, ಮಾನ್ವಿ 5, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 3 ಅರ್ಜಿಗಳು ಸಲ್ಲಿಕೆಯಾಗಿವೆ. ಮಸ್ಕಿ ಕ್ಷೇತ್ರಕ್ಕೆ ಹಾಲಿ ಶಾಸಕ ಬಸನಗೌಡ ತುರವಿಹಾಳ ಮಾತ್ರ ಅರ್ಜಿ ಹಾಕಿದ್ದಾರೆ. ಇದನ್ನೂ ಓದಿ: ಗುಜರಾತ್ ಮೂಲದ ಗಣಿ ಉದ್ಯಮಿಗೆ ಶಾಸಕನಿಂದ 9 ಕೋಟಿ ದೋಖಾ ಆರೋಪ

DK SHIVAKUMAR 2

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾಜಿ ಸಂಸದ ಬಿ.ವಿ.ನಾಯಕ್ ದೇವದುರ್ಗ, ಮಾನ್ವಿ, ರಾಯಚೂರು ಗ್ರಾಮೀಣ ಮೂರು ಕ್ಷೇತ್ರಗಳಿಗೂ ಅರ್ಜಿ ಹಾಕಿದ್ದಾರೆ. ದೇವದುರ್ಗದಲ್ಲಿ ತಮ್ಮ ಅಳಿಯ ಸಂದೀಪ್ ಪಾಟೀಲ್ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಲಿಂಗಸುಗೂರಿನಲ್ಲಿ ಪಾಮಯ್ಯ ಮುರಾರಿ, ಎಚ್.ಬಿ.ಮುರಾರಿ ಸಹೋದರರು, ಸಿಂಧನೂರಿನಲ್ಲಿ ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ ಸಂಬಂಧಿಕರು, ಮಾನ್ವಿಯಲ್ಲಿ ವಸಂತ ನಾಯಕ್, ಲಕ್ಷ್ಮೀದೇವಿ ನಾಯಕ್ ಅಕ್ಕ-ತಮ್ಮ ಟಿಕೆಟ್ ಸ್ಪರ್ಧೆಯಲ್ಲಿದ್ದಾರೆ. ರಾಯಚೂರು ನಗರ ಕ್ಷೇತ್ರಕ್ಕೆ ಮಾತ್ರ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವುದು ಕಾಂಗ್ರೆಸ್ ಟಿಕೆಟ್ ಫೈಟ್ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತೋ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

siddaramaiah dk shivakumar

ಟಿಕೆಟ್ ಆಕಾಂಕ್ಷಿಗಳು ತಮಗೆ ಅನುಕೂಲವಾಗಲಿ ಅಂತ ತಮ್ಮವರಿಂದಲೇ ಪೈಪೋಟಿಗೆ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಒಂದು ಮನೆಯಲ್ಲಿ ಒಬ್ಬರಿಗಾದರೂ ಟಿಕೆಟ್ ಸಿಗಲಿ ಅಂತಲೂ ಅರ್ಜಿ ಸಲ್ಲಿಸಿದ್ದಾರೆ. ಮಸ್ಕಿ ಹೊರತುಪಡಿಸಿ ರಾಯಚೂರು ನಗರ ಕ್ಷೇತ್ರ ಸೇರಿ ಜಿಲ್ಲೆಯ 6 ಕ್ಷೇತ್ರಗಳ ಟಿಕೆಟ್ ಈ ಬಾರಿ ಯಾರಿಗೆ ಸಿಗುತ್ತೆ ಅನ್ನೋದು ಚುನಾವಣೆ ಫಲಿತಾಂಶದಷ್ಟೆ ಕುತೂಹಲ ಮೂಡಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *