Saturday, 21st July 2018

Recent News

ಮತ್ತೆ ಕರ್ನಾಟಕದಲ್ಲಿ ಮೋದಿ, ಶಾ, ಯೋಗಿ ಪ್ರಚಾರ: ಫೆ. 18ರಿಂದ ಮಾರ್ಚ್ 6ರ ವರೆಗೆ ಎಲ್ಲೆಲ್ಲಿ ಏನು ಕಾರ್ಯಕ್ರಮ?

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯ ಪ್ರವಾಸದ ಪಟ್ಟಿ ತಯಾರಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಫೆ.18 ರಂದು ಮೈಸೂರಿಗೆ ಆಗಮಿಸಲಿದ್ದು ಫೆ.19 ರಂದು ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮೋದಿ ಆಗಮನದ ವೇಳೆ ಮೈಸೂರು ರೈಲು, ಇಎಸ್‍ಐ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.

ಅಮಿತ್ ಶಾ ಅವರು ಫೆ.20ಕ್ಕೆ ರಾಜ್ಯಕ್ಕೆ ಬರಲಿದ್ದು, ಅಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ. 21 ರಂದು ಸುರತ್ಕಲ್ ನಲ್ಲಿ ಹತ್ಯೆಯಾದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಕರಾವಳಿ ಮೀನುಗಾರರ ಸಮಾವೇಶ ಮತ್ತು ಉತ್ತರ ಕನ್ನಡದ ಭಟ್ಕಳದಲ್ಲಿ ನವಶಕ್ತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಪರೇಶ್ ಮೇಸ್ತಾ ಮನೆಗೂ ಭೇಟಿ ನೀಡಲಿದ್ದಾರೆ.

ಫೆಬ್ರವರಿ 27 ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ದಾವಣಗೆರೆಯಲ್ಲಿ ‘ರೈತ ಬಂದು’ ಹೆಸರಿನಲ್ಲಿ ಸಮಾವೇಶ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಮೊದಲು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿ ನಂತರ ಯಡಿಯೂರಪ್ಪನವರಿಗೆ ನೇಗಿಲು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಫೆ.4 ರಂದು ಪ್ರಧಾನಿ ಮೋದಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮ ನಡೆದ 23 ದಿನಗಳ ಒಳಗಡೆ ಮೋದಿ ಎರಡು ಬಾರಿ ರಾಜ್ಯ ಪ್ರವಾಸ ಕೈಗೊಳ್ಳುವಂತೆ ಬಿಜೆಪಿ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ.

ಫೆ. 22ರಂದು ಹಾವೇರಿ, ಗದಗ, ಕೊಪ್ಪಳ ದಲ್ಲಿ ಎಸ್‍ಸಿ, ಎಸ್‍ಟಿ ಸಮಾವೇಶ ನಡೆಯಲಿದೆ. ಫೆ. 24 ರಂದು ರಾಯಚೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಮತ್ತು ಕಲಬುರಗಿಯಲ್ಲಿ ಎಸ್‍ಸಿ ಸಮಾವೇಶ ನಡೆಯಲಿದೆ. ‘ಕರ್ನಾಟಕ ಸುರಕ್ಷಾ ಯಾತ್ರೆ’ ಯ ಅಡಿಯಲ್ಲಿ ಆಯೋಜಿಸಲಾಗಿರುವ ಮಹಿಳಾ ಸಮಾವೇಶವು ಫೆ. 28 ರಂದು ಮಂಗಳೂರಿನಲ್ಲಿ ನಡೆಯಲಿದೆ.

ಮಾರ್ಚ್ 3 ರಿಂದ 6 ರವರೆಗೆ ಉತ್ತರ ಕನ್ನಡದ ಅಂಕೋಲಾದಿಂದ ದಕ್ಷಿಣ ಕನ್ನಡದ ಸುರತ್ಕಲ್ ವರೆಗೆ ಬಿಜೆಪಿ ಪಾದಯಾತ್ರೆ ನಡೆಸಲು ಮುಂದಾಗಿದೆ. ಸುರತ್ಕಲ್‍ನಲ್ಲಿ ನಡೆಯುವ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ.

 

 

Leave a Reply

Your email address will not be published. Required fields are marked *