ಕಾರವಾರ: ವಿಧಾನಸಭಾ ಚುನಾವಣೆ (Karnataka Assembly Election) ಸಮೀಪಿಸುತಿದ್ದಂತೆ ಪಕ್ಷ ತೊರೆದು ಹೊಸ ಪಕ್ಷ ಸೇರುವುದು ನಾಯಕರ ಪಾಲಿಗೆ ಹೊಸದೇನಲ್ಲ. ಆದ್ರೆ ಇದೀಗ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಕ್ಷೇತ್ರದಲ್ಲಿ ಅವರಿಗೆ ಎದುರಾಳಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ್ ಹೆಗಡೆ (Shashibhushan Hegde) ಜೆಡಿಎಸ್ ತೊರೆದು ಬಿಜೆಪಿ (BJP) ಸೇರಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel) ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.
ಶಶಿಭೂಷಣ್ ಹೆಗಡೆ ಹಿಂದೆ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. 2018 ರಲ್ಲಿ ಶಿರಸಿ ಕ್ಷೇತ್ರದಲ್ಲಿ ಸ್ಪರ್ಧಿಸಿ 26,625 ಮತಗಳನ್ನ ಪಡೆದು 3ನೇ ಸ್ಥಾನದಲ್ಲಿದ್ದರು. ಈ ಹಿಂದೆ 2004 ರಲ್ಲಿ ಕುಮಟಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 31,273 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಕೆ.ಶಟ್ಟಿ ವಿರುದ್ಧ 3,465 ಮತಗಳ ಅಂತರದಿಂದ ಸೋತರೇ, 2008 ರಲ್ಲಿ ಅದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 30,201 ಮತ ಪಡೆದು ಅಂದಿನ ಜೆಡಿಎಸ್ ಅಭ್ಯರ್ಥಿ ದಿನಕರ್ ಶಟ್ಟಿ ವಿರುದ್ಧ 591 ಮತಗಳ ಅಂತರದಲ್ಲಿ ಸೋಲು ಕಂಡು 3ನೇ ಸ್ಥಾನದಲ್ಲಿದ್ದರು. ಇದನ್ನೂ ಓದಿ: ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ
ಮೂರು ಸೋಲಿನ ನಂತರ ಜೆಡಿಎಸ್ ನಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಂಡು ಶಿರಸಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ವದಗಿಬಂದರೂ ಸ್ಫರ್ಧಿಸುವ ಮನಸ್ಸು ಮಾಡಲಿಲ್ಲ. ಈ ನಡುವೆ ಕಾಂಗ್ರೆಸ್ ಸಹ ಶಶಿಭೂಷಣ್ ಹೆಗಡೆ ಅವರನ್ನ ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸಿತ್ತು. ಆದರೇ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಯತ್ನದ ಫಲದಿಂದ ಕೊನೆಗೂ ಮತ್ತೆ ಶಶಿಭೂಷಣ್ ಹೆಗಡೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಗೇರಿ ಅವರಿಗೆ ಪ್ರಬಲ ಬ್ರಾಹ್ಮಣ ನಾಯಕರ ಪ್ರತಿಸ್ಪರ್ಧಿ ಇಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ
ಈ ಬಾರಿ ಶಶಿಭೂಷಣ್ ಹೆಗಡೆ ಸ್ಪರ್ಧೆಯಿಲ್ಲ: ಶಶಿಭೂಷಣ್ ಹೆಗಡೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಬದಲಾಗಿ ಪಕ್ಷದ ಕೆಲಸದಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಸಂಸದ ಸ್ಥಾನಕ್ಕೆ ಅನಂತ್ ಕುಮಾರ್ ಹೆಗಡೆ ಸ್ಪರ್ಧಿಸದಿದ್ದರೇ ಆ ಸ್ಥಾನಕ್ಕೆ ಶಶಿ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಬಿಜೆಪಿ ಪಕ್ಷದ್ದಾಗಿದೆ.