ರಾಯಚೂರು: ಮಾನ್ವಿ (Manvi) ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಫೈಟ್‍ಗೆ ಸಾಕ್ಷಿಯಾಗಲಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ನಾಯಕರದ್ದೇ ದರ್ಬಾರ್.
ಹಾಲಿ ಶಾಸಕ ಜೆಡಿಎಸ್ (JDS) ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದರೆ ಸತತ 2 ಬಾರಿ ಗೆದ್ದು ಕಳೆದ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಹೋಗಿದ್ದ ಕಾಂಗ್ರೆಸ್ (Congress) ಅಭ್ಯರ್ಥಿ ಹಂಪಯ್ಯ ನಾಯಕ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನೂ ಕೈ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ತೊರೆದು ಬಿಜೆಪಿಗೆ (BJP) ಸೇರ್ಪಡೆಯಾಗಿ ಚುನಾವಣಾ ಕಣದಲ್ಲಿರುವ ಮಾಜಿ ಸಂಸದ ಬಿ.ವಿ.ನಾಯಕ್ ಮಾನ್ವಿ ಕ್ಷೇತ್ರದಲ್ಲಿ ತಮ್ಮ ರಾಜಕೀಯದ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ.
ರಾಜಾವೆಂಕಟಪ್ಪ ನಾಯಕ್: ಹಾಲಿ ಶಾಸಕ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ್ ಶಾಸಕ ಸ್ಥಾನ ಉಳಿಸಿಕೊಳ್ಳಲು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿರುವ ವೆಂಕಟಪ್ಪ ನಾಯಕ್ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೊಂದು ಬಾರಿ ಆರಿಸಿ ಕಳುಹಿಸುವಂತೆ ಮತದಾರರಲ್ಲಿ ಮತಯಾಚನೆ ನಡೆಸಿದ್ದಾರೆ. ಆದರೆ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳನ್ನು ಹೊರತು ಪಡಿಸಿ ಕ್ಷೇತ್ರಕ್ಕೆ ದೊಡ್ಡಮಟ್ಟದ ಅಭಿವೃದ್ಧಿ ಯೋಜನೆಗಳನ್ನ ತಂದಿಲ್ಲ ಎನ್ನುವ ಅಸಮಾಧಾನ ಕ್ಷೇತ್ರದ ಜನರಲ್ಲಿದೆ. ಹಾಲಿ ಶಾಸಕರಾಗಿ ಮಾಡಿರುವ ಕೆಲ ಅಭಿವೃದ್ಧಿ ಕಾರ್ಯಗಳು ಹಾಗೂ ಜೆಡಿಎಸ್‍ನ ಪಂಚರತ್ನ ಯೋಜನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ.
ಹಂಪಯ್ಯ ನಾಯಕ್ : ಸತತ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹಂಪಯ್ಯ ನಾಯಕ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯದಿಂದ 3ನೇ ಸ್ಥಾನಕ್ಕೆ ತೆರಳಿದ್ದರು. ಶಾಸಕರಾಗಿದ್ದ ಅವಧಿಯಲ್ಲಿ ಯಾವುದೇ ಕಿರಿಕಿರಿಗಳು, ಸಮುದಾಯಗಳ ನಡುವೆ ಗಲಾಟೆಗಳು ಇಲ್ಲದ ಸುಲಲಿತ ಆಡಳಿತ ನಡೆಸಿದ್ದಾರೆ ಅನ್ನೋ ಹೆಸರಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳನ್ನು ತಂದಿಲ್ಲ. ಈ ಬಾರಿ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಲಾಗುತ್ತಿದೆ ಎನ್ನುವ ಸಂಶಯದಲ್ಲಿ ಬಂಡಾಯ ಏಳಲು ಸಜ್ಜಾಗಿದ್ದರು. ಕೊನೆಗೆ ಕಾಂಗ್ರೆಸ್ ಟಿಕೆಟ್ ಹಂಪಯ್ಯ ನಾಯಕ್‍ಗೆ ಸಿಕ್ಕಿದೆ.
ಬಿ.ವಿ.ನಾಯಕ್: ಕಾಂಗ್ರೆಸ್ (Congress) ಜಿಲ್ಲಾಧ್ಯಕ್ಷರಾಗಿದ್ದ ಮಾಜಿ ಸಂಸದ ಬಿ.ವಿ.ನಾಯಕ್ ಮಾನ್ವಿ ಕಾಂಗ್ರೆಸ್ ಟಿಕೆಟ್‍ಗಾಗಿ ಎಲ್ಲಾ ಪ್ರಯತ್ನಗಳನ್ನ ಮುಗಿಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡದ ಹಿನ್ನೆಲೆ ಪಕ್ಷವನ್ನೇ ತೊರೆದು ಬಿಜೆಪಿ ಸೇರ್ಪಡೆಯಾಗಿ ಮಾನ್ವಿ ಅಭ್ಯರ್ಥಿಯಾಗಿದ್ದಾರೆ. ಮಾನ್ವಿ ಮಟ್ಟಿಗೆ ಕ್ಷೇತ್ರಕ್ಕೆ ಹೊಸ ಮುಖ. ಇದುವರೆಗೂ ಮಾನ್ವಿ ಕ್ಷೇತ್ರದಲ್ಲಿ ಬಿಜೆಪಿ ಒಂದು ಬಾರಿಯೂ ಗೆದ್ದಿಲ್ಲ. ಹೀಗಾಗಿ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಬಿಜೆಪಿ ಹೈಕಮಾಂಡ್ ಬಿ.ವಿ.ನಾಯಕ್‍ಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಸಮುದಾಯದ ಮತಗಳನ್ನೇ ನಂಬಿ ಮಾನ್ವಿ ಕ್ಷೇತ್ರಕ್ಕೆ ಕಾಲಿಟ್ಟಿರುವ ಬಿ.ವಿ.ನಾಯಕ್ ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆಯೊಂದಿಗೆ ಚುನಾವಣೆ ಎದುರಿಸಬೇಕಿದೆ.
ತುಂಗಭದ್ರಾ ಎಡದಂಡೆ ಕಾಲುವೆ ನೀರನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರೇ ಕ್ಷೇತ್ರದ ನಿರ್ಣಾಯಕ ಮತದಾರರು. ಚುನಾವಣೆ ಬಂದಾಗ ಟಿಎಲ್‍ಬಿಸಿ ಕೆಳಭಾಗದ ರೈತರ ಸಮಸ್ಯೆಗಳು ಚರ್ಚೆಗೆ ಬರುತ್ತವಾದರೂ ಪರಿಹಾರ ಮಾತ್ರ ಇದುವರೆಗೆ ಸಿಕ್ಕಿಲ್ಲ. ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ, ಪ್ರತಿಯೊಂದಕ್ಕೂ ರಾಯಚೂರಿನ ರಿಮ್ಸ್ ಆಸ್ಪತ್ರೆಯನ್ನೇ ಜನ ಅವಲಂಬಿಸಿದ್ದಾರೆ. ಅಕ್ರಮ ಮರಳುಗಾರಿಕೆಗೆ ಕಡಿವಾಣ ಇಲ್ಲದಂತಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಾನ್ವಿ ಪಟ್ಟಣದಲ್ಲೇ ಕಲ್ಲುಗಣಿಗಾರಿಕೆ ನಡೆಯುತ್ತಿರುವುದನ್ನು ನಿಲ್ಲಿಸುವ ಕುರಿತು ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲಾ ಪಕ್ಷಗಳು ಚರ್ಚೆಯ ವಿಷಯವಾಗಿ ತೆಗೆದುಕೊಳ್ಳುತ್ತವೆ. ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿ
ಒಟ್ಟು ಮತಗಳೆಷ್ಟು?:
ಮತದಾರರ ಸಂಖ್ಯೆ: 2,31,913
ಪುರುಷರು – 1,13,541
ಮಹಿಳೆಯರು – 1,18,309
ಜಾತಿವಾರು ಲೆಕ್ಕಾಚಾರ:
ಪರಿಶಿಷ್ಟ ಜಾತಿ- 35,000
ಪರಿಶಿಷ್ಟ ಪಂಗಡ- 42,000
ಲಿಂಗಾಯತರು- 30,000
ಕುರುಬರು- 25,000
ಮುಸ್ಲಿಂ- 20,000
ಆಂಧ್ರ ರೆಡ್ಡಿ- 25,000
ಮಾನ್ವಿ ಕ್ಷೇತ್ರಕ್ಕೆ ಇದುವರೆಗೂ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಗೆದ್ದಿದೆ. ಉಳಿದಂತೆ ಜನತಾದಳ, ಜೆಎನ್‍ಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದು ಬಾರಿ ಗೆದ್ದಿದ್ದಾರೆ. ಬಿಜೆಪಿ ಇದುವರೆಗೂ ಮಾನ್ವಿ ಕ್ಷೇತ್ರದಲ್ಲಿ ತನ್ನ ಖಾತೆಯನ್ನು ತೆರೆದಿಲ್ಲ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ 3 ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆಯಿದ್ದು, ಮತದಾರ ಯಾರ ಕೈಹಿಡಿಯುತ್ತಾನೋ ನೋಡಬೇಕಿದೆ. ಇದನ್ನೂ ಓದಿ: ಅಮಿತ್ ಶಾ, ವಿ.ಸೋಮಣ್ಣ ವಿರುದ್ಧ ಪೊಲೀಸರಿಗೆ ‘ಕೈ’ ನಾಯಕರ ದೂರು