ಬೆಳಗಾವಿ: ರಾಯಬಾಗ ಮತಕ್ಷೇತ್ರ ಎಸ್‍ಸಿ ಮೀಸಲು ಕ್ಷೇತ್ರ. ಶಾಸಕ ದುರ್ಯೋಧನ ಐಹೊಳೆ ಸತತವಾಗಿ ಇಲ್ಲಿ 3 ಬಾರಿಯಿಂದಲೂ ಗೆದ್ದು ಬೀಗುತ್ತಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್‍ನ ಬಂಡಾಯ. ಪಕ್ಷ ಒಬ್ಬರಿಗೆ ಟಿಕೆಟ್ ಘೋಷಣೆ ಮಾಡಿದರೆ, ಇನ್ನೊಬ್ಬರು ಸದಸ್ಯರು ಇಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪ್ರದೀಪ್ ಮಾಳಗಿಯವರಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಹಾವೀರ ಮೊಹಿತೆಯವರು ಸ್ಪರ್ಧೆ ಮಾಡಿ ಪ್ರದೀಪ್ ಮಾಳಗಿಯವರ ಗೆಲುವಿಗೆ ಬ್ರೇಕ್ ಹಾಕಿದ್ದರು. ಇದು ಸಹಜವಾಗಿಯೇ ದುರ್ಯೋಧನ ಐಹೊಳೆಯವರ ಗೆಲುವಿಗೆ ಕಾರಣವಾಗಿತ್ತು.
ಈ ಬಾರಿ 4 ಜನರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಇಷ್ಟು ದಿನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಮಾತ್ರ ಪೈಪೋಟಿಯಿತ್ತು. ಆದರೆ ಈ 2 ಪಕ್ಷಗಳ ಜೊತೆಗೆ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಿವೃತ್ತ ಐಎಎಸ್ ಅಧಿಕಾರಿಯಿಬ್ಬರು ಪೈಪೋಟಿ ನೀಡಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತಗಳು ವಿಭಜನೆಯಾಗಿ ಯಾರು ಗೆಲ್ಲುತ್ತಾರೆ ಎನ್ನುವುದೇ ರಾಯಬಾಗ ಕ್ಷೇತ್ರದಲ್ಲಿ ಇದೀಗ ಕುತೂಹಲ ಮೂಡಿಸಿದೆ.
Advertisement
Advertisement
ಕಣದಲ್ಲಿರುವ ಅಭ್ಯರ್ಥಿಗಳು:
ಬಿಜೆಪಿ : ದುರ್ಯೋಧನ ಐಹೊಳೆ
ಕಾಂಗ್ರೆಸ್ : ಮಹಾವೀರ ಮೋಹಿತೆ
ಜೆಡಿಎಸ್ : ಪ್ರದೀಪ ಮಾಳಗಿ
ಪಕ್ಷೇತರ : ಶಂಭು ಕಲ್ಲೋಳಕರ
Advertisement
ರಾಯಬಾಗ ಎಸ್‍ಸಿ ಮೀಸಲು ಮತಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಪ್ರದೀಪ್ ಮಾಳಗಿ ವಿರುದ್ಧ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಕೈ ರೆಬೆಲ್ ಅಭ್ಯರ್ಥಿಯಾಗಿದ್ದ ಮಹಾವೀರ ಮೋಹಿತೆಗೆ ಈ ಬಾರಿ ‘ಕೈ’ ಪಕ್ಷ ಟಿಕೆಟ್ ನೀಡಿದೆ. ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ ಪ್ರಬಲ ‘ಕೈ’ ಟಿಕೆಟ್ ಆಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಬಲ ತುಂಬಿದ್ದರು. ಆದರೆ ಅವರು ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
Advertisement
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಫೈಟ್ ನೀಡುವಷ್ಟು ಪ್ರಭಾವವನ್ನು ಕಲ್ಲೋಳಕರ ಹೊಂದಿದ್ದಾರೆ. ಇನ್ನೂ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಮಾಳಗಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಪ್ರದೀಪ್ ಮಾಳಗಿಗೆ ರಾಯಬಾಗದ ಪ್ರತಿಷ್ಠಿತ ವಿ.ಎಲ್ ಪಾಟೀಲ್ ಕುಟುಂಬದ ಬಲ ಇದೆ.
ಇಲ್ಲಿ ಪ್ರತಿ ಬಾರಿಯೂ ಸಹ ನೇರ ಹಣಾಹಣೆ ನಡೆಯುವುದು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆಯಾಗಿದೆ. ಈ ಬಾರಿ 4 ಜನ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ಬಿಜೆಪಿಯಿಂದ ದುರ್ಯೋಧನ ಐಹೊಳೆ ಚುನಾವಣೆಗೆ ನಿಂತರೆ ಅತ್ತ ಪಾಟೀಲ್ ಮನೆತನದ ಪರ ಇರುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗುತ್ತೆ. ಇದರಿಂದ ನೇರವಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್ಸಿನ ಬಂಡಾಯ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ನಡುವೆಯೇ ಸ್ಪರ್ಧೆ ಉಂಟಾಗುತ್ತಿದೆ. ಇದರ ಲಾಭ ಇಲ್ಲಿಯವರೆಗೂ ಬಿಜೆಪಿ ಪಡೆಯುತ್ತಲೇ ಬಂದಿದೆ. ಹೀಗಾಗಿಯೇ ಇಲ್ಲಿ ಕಳೆದ 3 ಅವಧಿಯಿಂದ ನಿರಾಯಾಸವಾಗಿ ದುರ್ಯೋಧನ ಐಹೊಳೆ ಗೆಲುವು ಸಾಧಿಸುತ್ತಿದ್ದಾರೆ.
ಬಿಜೆಪಿಗೆ ಧನಾತ್ಮಕ ಅಂಶಗಳು: ಕಳೆದ 3 ಅವಧಿಗಳಿಂದಲೂ ದುರ್ಯೋಧನ ಐಹೊಳೆ ಶಾಸಕರಾಗಿದ್ದಾರೆ. ಇದರ ಜೊತೆಗೆ ಕ್ಷೇತ್ರದ ಜನರಿಗೆ ಪಕ್ಷದ ಮೇಲೆ ವಿಶ್ವಾಸವು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಿಂದ ಇಬ್ಬರ ಜಗಳದಲ್ಲಿ ಐಹೊಳೆ ಲಾಭವಾಗುತ್ತಿದ್ದು, ಐಹೊಳೆ ಸೌಮ್ಯ ಸ್ವಭಾವದ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಬಿಜೆಪಿಗೆ ಋಣಾತ್ಮಕ ಅಂಶಗಳು: ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಿಸಿ ಹಾಗೂ ಹಾಲಿ ನಾಯಕರ ಆಡಳಿತದಿಂದ ಜನತೆ ಬೇಸತ್ತಿರುವುದು ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿ ಮುಖಂಡರನ್ನು ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಸೆಳೆದಿರುವುದು ಪಕ್ಷಕ್ಕೆ ತೊಂದರೆ ಆಗಬಹುದು.
ಕಾಂಗ್ರೆಸ್‍ಗೆ ಧನಾತ್ಮಕ ಅಂಶಗಳು: ಶಾಸಕರ ಆಡಳಿತಕ್ಕೆ ಕ್ಷೇತ್ರದ ಜನತೆ ಬೇಸತ್ತಿರುವುದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ಕ್ಷೇತ್ರದಲ್ಲಿ ಅಹಿಂದ ವರ್ಗಗಳ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಪ್ರಭಾವ ಈ ಕ್ಷೇತ್ರದ ಮೇಲೆ ಬೀಳುವ ಸಾಧ್ಯತೆಯಿದೆ.
ಕಾಂಗ್ರೆಸ್‍ಗೆ ಋಣಾತ್ಮಕ ಅಂಶಗಳು: ಸ್ಥಳೀಯ ಮಟ್ಟದಲ್ಲಿ ನಾಯಕತ್ವದ ಕೊರತೆಯಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಕೊರತೆಯಿದೆ. ಬಂಡಾಯ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿರುವುದು ಪಕ್ಷದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಜೆಡಿಎಸ್ ಧನಾತ್ಮಕ ಅಂಶಗಳು: ಕಳೆದ 3 ಬಾರಿ ಸೋಲುತ್ತಿರುವ ಜೆಡಿಎಸ್ ಅಭ್ಯರ್ಥಿ ಮೇಲೆ ಅನುಕಂಪದ ವಾತಾವರಣವಿದೆ. ಪ್ರಬಲ ವಿ.ಎಲ್. ಪಾಟೀಲ್ ಕುಟುಂಬದ ಆಶೀರ್ವಾದವಿದೆ. ಹಾಲುಮತ ಸಮಾಜದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬರುವ ಸಾಧ್ಯತೆಯಿದೆ.
ಜೆಡಿಎಸ್ ಋಣಾತ್ಮಕ ಅಂಶಗಳು: ಚುನಾವಣೆಯಲ್ಲಿ ಮಾತ್ರ ಕಾಣಸಿಗುವ ಅಭ್ಯರ್ಥಿ ಪ್ರದೀಪ ಮಾಳಗಿ ಎಂಬುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕ್ಷೇತ್ರದಲ್ಲಿ ವಿ.ಎಲ್ ಪಾಟೀಲ್ ಕುಟುಂಬ ಬಿಟ್ಟು ಬೇರೆ ಸಮಾಜದ ನಾಯಕರ ಕೊರತೆಯ ಜೊತೆಗೆ ಸಂಘಟನೆಯ ಕೊರತೆಯೂ ಇದೆ.
ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಧನಾತ್ಮಕ ಅಂಶಗಳು: ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಕ್ಷೇತ್ರದಲ್ಲಿ ಕೆಲವೇ ದಿನಗಳಲ್ಲಿ ತನ್ನದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವುದು ಶಂಭು ಕಲ್ಲೋಳಕರ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಸೌಮ್ಯ ಸ್ವಭಾವದವರಾಗಿದ್ದು, ಬಹುತೇಕ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಋಣಾತ್ಮಕ ಅಂಶಗಳು: ಪಕ್ಷೇತರ ಅಭ್ಯರ್ಥಿ ಆದ ಕಾರಣ ಜನರಿಗೆ ಚಿಹ್ನೆ ಕುರಿತು ಗೊಂದಲವಿದೆ. ಪಕ್ಷದ ಮೂಲ ಮತಗಳ ಕೊರತೆ ಆಗುವ ಸಾಧ್ಯತೆಯಿದೆ.
ರಾಯಬಾಗ ವಿಧಾನಸಭಾ ಕ್ಷೇತ್ರದ ಲೆಕ್ಕಾಚಾರ:
ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 20,3179 ಮತದಾರರಿದ್ದಾರೆ. ಅದರಲ್ಲಿ 1,04,483 ಪುರುಷರು ಹಾಗೂ 98,696 ಮಹಿಳೆಯರಿದ್ದಾರೆ.
ಯಾರ ವೋಟು ಎಷ್ಟು?:
ಲಿಂಗಾಯತರು: 55,000
ಬ್ರಾಹ್ಮಣ: 2,200
ಎಸ್ ಸಿ, ಎಸ್ ಟಿ; 30,000
ಕುರುಬರು: 45,000
ಮುಸ್ಲಿಂ: 30,000
ಜೈನ್: 10,000
ಮರಾಠ: 15,000