ಚಿಕ್ಕೋಡಿ: ಟಿಕೆಟ್ ತಪ್ಪಿದ ಬೆನ್ನಲ್ಲೇ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಮಾತನಾಡಿದ ಅವರು, ಪಕ್ಷದ ಮೇಲೆ ದ್ವೇಷವಿಲ್ಲ. ಪಕ್ಷ ಒಳ್ಳೆಯದು. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಪಕ್ಷವನ್ನು ಬೆಳೆಸಿದ್ದಾರೆ. ಆದರೆ ರಾಜ್ಯಮಟ್ಟದಲ್ಲಿರುವ ಕೆಲ ನಾಯಕರು ಲಕ್ಷ್ಮಣ ಸವದಿ ಅವಶ್ಯಕತೆ ಇಲ್ಲ ಎಂಬ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಆದರೂ ಬಿಜೆಪಿಯ ಹಿರಿಯ ನಾಯಕರಿಗೆ ಅಭಿನಂದನೆ ತಿಳಿಸಿ, ಜನರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ತೀರ್ಮಾನವನ್ನು ಸದ್ಯದಲ್ಲೇ ತಿಳಿಸುತ್ತೇನೆ. ನಮ್ಮ ಸಮಾಜ ಎಂದಿಗೂ ಕೈ ಬಿಟ್ಟಿಲ್ಲ. ರಾಜಕೀಯವಾಗಿ ಸಾಕಿ ಸಲುಹಿದ್ದಾರೆ. ಅವರಿಗೆ ನಾನೆಂದೂ ಋಣಿ ಆಗಿರುತ್ತೇನೆ ಎಂದು ಭಾವುಕರಾದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ – ಜಾತಿವಾರು ಲೆಕ್ಕಾಚಾರ ಏನು?
Advertisement
Advertisement
ಕಳೆದ ಮೂರು ದಿನಗಳಿಂದ ಬಿಜೆಪಿ (BJP) ಹೈಕಮಾಂಡ್ ಸರಣಿ ಸಭೆ ನಡೆಸುತ್ತಿತ್ತು. ಕರ್ನಾಟಕ ಚುನಾವಣೆಗೆ (Karnataka Election) ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇನ್ನೂ 35 ಕ್ಷೇತ್ರಗಳನ್ನು ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ. ಈ ಬಾರಿ ಅನೇಕ ಮುಖಂಡರ ನಡುವೆ ಟಿಕೆಟ್‍ಗಾಗಿ ಪೈಪೋಟಿ ಏರ್ಪಟ್ಟಿತ್ತು. ಅದೇ ರೀತಿ ಅಥಣಿ ಕ್ಷೇತ್ರಕ್ಕೂ ಬಿಜೆಪಿ ನಾಯಕರಾದ ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಹಳ್ಳಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಗೂ ಲಕ್ಷ್ಮಣ್ ಸವದಿಗೆ ಟಿಕೆಟ್ ಕೈತಪ್ಪಿದ್ದು, ಇದೀಗ ಮಹೇಶ್ ಕುಮಟಹಳ್ಳಿಗೆ ಟಿಕೆಟ್ ಘೋಷಣೆ ಆಗಿದೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಮಾಡಲು ಸಿದ್ಧ, ಆದ್ರೆ ಅದು ಗೌರವಯುತವಾಗಿ ಆಗಬೇಕು: ಶೆಟ್ಟರ್