– ಜೋಷಿ ನನ್ನ ಪರ ಗಟ್ಟಿ ಧ್ವನಿಯಲ್ಲಿ ಮಾತನಾಡಿಲ್ಲ
– ನನಗೆ ಐಟಿ, ಇಡಿ ಭಯವಿಲ್ಲ
ಹುಬ್ಬಳ್ಳಿ: ಪ್ರಹ್ಲಾದ್ ಜೋಷಿ (Pralhad Joshi) ಅವರು ನನ್ನ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿತ್ತು. ಆದರೆ ಅವರು ಬರೀ ಸಬೂಬು ನೀಡಿದರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಜೋಷಿ ಅವರೇ ನಾನು ನಿಮ್ಮನ್ನು ಸಂಸದರನ್ನಾಗಿ ಮಾಡಲು ಎಷ್ಟು ಮಾಡಿದ್ದೇನೆಂದು ನೆನಪು ಮಾಡಿಕೊಳ್ಳಿ. ನಾನು ಸಭಾಪತಿಯಾಗಿದ್ದಾಗ ನನ್ನ ಪತ್ನಿ ನಿಮ್ಮ ಪರ ಪ್ರಚಾರ ಮಾಡಿದ್ದರು. ನನ್ನ ಫೋಟೋ ಇಲ್ಲದೆ ಪ್ರಚಾರ ಪತ್ರ ಹಂಚಿಲ್ಲ. ಜೋಷಿ ಅವರೇ ಬರೀ ಸಬೂಬು ಹೇಳಬೇಡಿ. ನನ್ನ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿತ್ತು. ನಿಮ್ಮ ಸಲುವಾಗಿ ಹಗಲಿರುಳು ದುಡಿದಿದ್ದೇನೆ ನೆನಪು ಮಾಡಿಕೊಳ್ಳಿ ಎಂದು ಗುಡುಗಿದರು.
ಹಿರಿಯ ಕೇಂದ್ರ ಸಚಿವ ಹಾಗೂ ಬಿ.ಎಸ್. ಯಡಿಯೂರಪ್ಪ (BS Yediyurappa) ಸಹ ಅಸಹಾಯಕರಾಗಿದ್ದಾರೆ. ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ ವ್ಯಕ್ತಿ ನಿಷ್ಠೆಯಿದೆ. ಬೊಮ್ಮಾಯಿ, ಕೇಂದ್ರ ಸಚಿವರ ಮಾತನ್ನು ಒಪ್ಪುವುದಿಲ್ಲ. ಅವರು ಬಲವಾಗಿ ಹೇಳಿಲ್ಲ. ಅವರು ಗಟ್ಟಿ ಧ್ವನಿಯಲ್ಲಿ ಹೇಳಿದ್ದರೆ ಹೀಗೆ ಆಗುತ್ತಿರಲಿಲ್ಲ. ಅರುಣ್ ಜೇಟ್ಲಿಯವರು 2004ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಕರೆದಿದ್ದರು. ಆದರೆ ನಾನು ಜೋಷಿ ಹೆಸರು ಹೇಳಿದ್ದೆ ಎಂದು ನೆನಪಿಸಿಕೊಂಡರು.
ಇದು ನನ್ನ ಕೊನೆ ಚುನಾವಣೆಯಾಗಿದೆ. 70 ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕೊನೆಯ ಕ್ಷಣದಲ್ಲಿ ಬಿಜೆಪಿಯಲ್ಲಿ ಅಗೌರವ ನೀಡಿದ್ದಾರೆ. ಪಕ್ಷ ನಿಷ್ಠೆ ಮರೆತವರು, ಈ ಬಗ್ಗೆ ಉತ್ತರ ಕೊಡಬೇಕು. ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ನನಗೆ ಗೌರವ ನೀಡಬೇಕು ಅಂತ ಕಾಂಗ್ರೆಸ್ ಸೇರಿದ್ದೇನೆ. ಬಿ.ಎಲ್ ಸಂತೋಷ್ ನಿಮ್ಮ ಮಾನಸ ಪುತ್ರನ ಮೇಲೆ ಇರುವ ಪ್ರೀತಿ ನನ್ನ ಮೇಲೆ ಒಂದು ಪರ್ಸೆಂಟ್ ನೀಡಿದ್ದರೆ ಸಾಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸಾವಿರಾರು ಕೋಟಿ ಮನುಷ್ಯ ಅಲ್ಲ. ಅಲ್ಪಸ್ವಲ್ಪ ಆಸ್ತಿ ಎಲ್ಲಾ ಕಾನೂನು ವ್ಯಾಪ್ತಿಯಲ್ಲಿದೆ. ನನಗೆ ಐಟಿ ಇಡಿ ಭಯವಿಲ್ಲ. ಈಶ್ವರಪ್ಪ ಪತ್ರ ಬರೆದ ಹಿಂದೆ ಪಕ್ಷದ ಗೈಡಲೈನ್ಸ್ ಇದೆ. ಬಹುಶಃ ಇವತ್ತು ಈಶ್ವರಪ್ಪ ಮನೆಯವರಿಗೆ ಟಿಕೆಟ್ ಘೋಷಣೆಯಾಗಬಹುದು ಎಂದರು. ಇದನ್ನೂ ಓದಿ: ರೈಸ್ ಮಿಲ್ ಕಟ್ಟಡ ಕುಸಿತ – ನಾಲ್ವರು ಸಾವು, 20 ಮಂದಿಗೆ ಗಾಯ
ಪದವೀಧರ ಕ್ಷೇತ್ರದ ಚುನಾವಣಾ ಬಂದಾಗ ಗೋಮಧುಸೂಧನ್ ಹೆಸರು ಫೈನಲ್ ಆಗಿತ್ತು. ಆದರೂ ಬಿ.ಎಲ್ ಸಂತೋಷ್ ಹೇಳಿದವರಿಗೆ ಟಿಕೆಟ್ ಸಿಕ್ಕಿತು. ಬಿ.ಎಲ್ ಸಂತೋಷ್ ಬಂದು ಚುನಾವಣಾ ಪ್ರಚಾರ ಮಾಡಿದರು. ಆದ್ರೆ ಫಲಿತಾಂಶ ಏನಾಯಿತು? ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಸಂತೋಷ್ ಹೋಗಿದ್ದರು. ಅಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆದ್ದಿದೆ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ : ಶೆಟ್ಟರ್ ನೇರ ಆರೋಪ