ಕಾರವಾರ: ವಿಧಾನಸಭಾ ಚುನಾವಣೆ ಬಂದಾಗಲೆಲ್ಲ ಶಿರಸಿಯಲ್ಲಿ (Sirsi) ಬಿಜೆಪಿಯ ಕಾಗೇರಿಯೇ ಗೆಲ್ಲುತ್ತಾರೆ ಎಂಬ ಮಾತೊಂದಿದೆ. ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗಿನಿಂದಲೂ `ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದಾರೆ. ಬಿಜೆಪಿಯ ಪ್ರಬಲ ಬ್ರಾಹ್ಮಣ ನಾಯಕ ಕಾಗೇರಿಯನ್ನು ಎದುರಿಸಲು ಕಾಂಗ್ರೆಸ್‌ನಲ್ಲಿ ಇನ್ನೊಂದು ಜನಾಂಗದ ಪ್ರಬಲ ನಾಮಧಾರಿ ನಾಯಕ ಭೀಮಣ್ಣ ನಾಯ್ಕರನ್ನು ಮತ್ತೊಮ್ಮೆ ಕಣಕ್ಕಿಳಿಸಲು ವೇದಿಕೆ ಸಜ್ಜಾಗಿದೆ.
ಸುಮಾರು ಕಾಲು ಶತಮಾನಗಳಿಂದ ಬಿಜೆಪಿ (BJP) ಹಿಡಿತದಲ್ಲಿರುವ ಕ್ಷೇತ್ರವನ್ನು ಕಿತ್ತುಕೊಳ್ಳಬೇಕು ಎಂದು ಎದುರಾಳಿ ಪಕ್ಷಗಳು ತಂತ್ರ ಹುಡುಕುತ್ತಿವೆ. ಹೀಗಾಗಿ ಕಾಗೇರಿ ಎದುರು ನಾಮಧಾರಿ ಹಾಗೂ ಬ್ರಾಹ್ಮಣ ನಾಯಕರನ್ನು ನಿಲ್ಲಿಸಿ ಸೋಲಿಸಬೇಕು ಎಂಬ ಜಾತಿ ಲೆಕ್ಕಾಚಾರ ವಿರೋಧ ಪಕ್ಷ ಹಾಕುತ್ತಿವೆ. ಈ ನಡುವೆ ಬಿಜೆಪಿಯಲ್ಲೇ ಕಾಗೇರಿಗೆ ಈ ಬಾರಿ ಟಿಕೆಟ್ ತಪ್ಪಿಸಬೇಕು ಎಂಬ ಪ್ರಯತ್ನಗಳೂ ಸಹ ನಡೆದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಸದ್ಯದ ರಾಜಕೀಯ ಚಿತ್ರಣ.
Advertisement
Advertisement
ಹವ್ಯಕ ಬ್ರಾಹ್ಮಣ ಹಾಗೂ ನಾಮಧಾರಿಗಳು ಇಲ್ಲಿನ ನಿರ್ಣಾಯಕ ಮತದಾರರು. ಸ್ವಜಾತಿಯ ಹವ್ಯಕರು ಕಾಗೇರಿಗೆ ಅಭಯ ಹಸ್ತರಾಗಿದ್ದಾರೆ. ಜೊತೆಗೆ ಬಿಜೆಪಿ ಅಭಿಮಾನಿ ನಾಮಧಾರಿಗಳೂ ಸಾಕಷ್ಟಿರುವುದು ವಿಶ್ವೇಶ್ವರ ಹೆಗಡೆ ಕಾಗೇರಿಯ ನಿರಂತರ ಗೆಲುವಿಗೆ ಸಹಕಾರಿಯಾಗಿದೆ. ಹಣದ ಹೊಳೆ, ಕೀಳುಮಟ್ಟದ ರಾಜಕೀಯ ಕೆಸರೆರಚಾಟಯಿಲ್ಲದೇ ಅತ್ಯಂತ ಶಾಂತ, ಸರಳವಾಗಿ ಚುನಾವಣೆ ನಡೆಯುವ ಅಪರೂಪದ ಕ್ಷೇತ್ರ ಎಂಬ ವಿಶೇಷತೆ ಶಿರಸಿ ವಿಧಾನಸಭಾ ಕ್ಷೇತ್ರಕ್ಕಿದೆ. ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಹಾಗೂ ಕಾಗೇರಿ ಇಬ್ಬರೂ ಸ್ವಭಾವದಲ್ಲಿ ತಾಳಮೇಳಗಳಿವೆ. ಇಬ್ಬರೂ ಪಕ್ಷ ನಿಷ್ಠೆ ಹೊಂದಿದವರು. ಪಕ್ಷ ಕಟ್ಟಿದವರಾಗಿದ್ದಾರೆ.
Advertisement
ಸೋಲಿಲ್ಲದೇ 6 ಬಾರಿ ನಿರಂತರ ಗೆಲುವು: ವಿಶ್ವೇಶ್ವರ ಹೆಗಡೆ ಕಾಗೇರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಬೆಳೆದು ಬಂದವರು. ರಾಜಕೀಯ ಹಿನ್ನೆಲೆಯಿಲ್ಲದೇ ಸಂಘ ಪರಿವಾರದ ನೆರಳಿನಲ್ಲಿ ಇರುವವರು. ಸತತ 6 ಬಾರಿ ವಿಧಾನಸಭೆಯನ್ನು ಪ್ರತಿನಿಧಿಸಿದ್ದಾರೆ. ಮೊದಲು ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 1994, 1999, ಹಾಗೂ 2004ರಲ್ಲಿ ಬಿಜೆಪಿಯಿಂದ ಗೆದ್ದು ಬಂದಿದ್ದರು.
Advertisement
2008ರ ಕ್ಷೇತ್ರ ಪುನರ್ ವಿಂಗಡನೆಯ ನಂತರ ಶಿರಸಿ, ಸಿದ್ದಾಪುರ ತಾಲೂಕನ್ನೊಳಗೊಂಡ ಕ್ಷೇತ್ರದಿಂದ ನಿರಂತರ 3 ಬಾರಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಮೋದಿ ಅಲೆ ಹಾಗೂ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಫಲ ಮತ ಹೆಚ್ಚಿಸಿಕೊಳ್ಳುವ ಚೇತರಿಕೆ ಕಂಡಿದೆ.
ಯಾವುದೇ ವಿವಾದಗಳಿಗೆ ಸಿಲುಕದೇ ಕ್ಲೀನ್ ಇಮೇಜ್ ಉಳಿಸಿಕೊಂಡಿರುವುದು, ಕ್ಷೇತ್ರದ ಸಾಮಾನ್ಯನ ಮದುವೆ, ಮುಂಜಿ ಸಮಾರಂಭಗಳಿಗೂ ತೆರಳಿ ಶುಭ ಕೋರುವುದು ಕಾಗೇರಿ ರಾಜಕಾರಣದ ವಿಶೇಷ. ಸುದೀರ್ಘ ರಾಜಕೀಯ ಅನುಭವ, ಸಿಎಂ ಕ್ಯಾಂಡಿಡೇಟ್ ಆಗುವಷ್ಟು ಪ್ರಭಾವ ಹೊಂದಿದ್ದರೂ, ಕ್ಷೇತ್ರದ ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕಿಲ್ಲ. ಪರ್ಯಾಯ ನಾಯಕರನ್ನು ಬೆಳೆಸಿಲ್ಲ. ಕಾರ್ಯಕರ್ತರ, ಆಪ್ತರ ವೈಯಕ್ತಿಕ ಕಾರ್ಯಗಳಿಗೆ ಸ್ಪಂದಿಸುವುದಿಲ್ಲ ಎಂಬ ಆರೋಪ ಕಾಗೇರಿಯವರ ಮೇಲಿದೆ.
ಸ್ವಪಕ್ಷದಲ್ಲೇ ವಿರೋಧ: ಶಿರಸಿ ಕ್ಷೇತ್ರದಲ್ಲಿ ಸಂಘ ಪರಿವಾರದ ಬೇರು ಗಟ್ಟಿಯಾಗಿದೆ. ಬಿಜೆಪಿ ಸಂಘಟನೆಯೂ ಉತ್ತಮವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕಮಲದ ಚಿಹ್ನೆಯು ಕಾಣುತ್ತಿದೆ. ಆದರೆ, ಪಕ್ಷದಲ್ಲಿ ಒಳಜಗಳವೂ ಸಾಕಷ್ಟಿವೆ. ಇದೇ ಊರಿನ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಕಾಗೇರಿ ಸಂಬಂಧ ಹಿಂದಿನಿಂದಲೂ ಹಾಳುಬಿದ್ದಿದೆ. ಪಕ್ಷದಲ್ಲೇ ಕಾಗೇರಿ ವಿರೋಧಿಗಳು ಸಾಕಷ್ಟು ಜನರಿದ್ದಾರೆ. ಆದರೆ, ಯಾವುದೇ ಗೌಜು, ಗದ್ದಲವಿಲ್ಲದೇ ತಮ್ಮ ನಯ ನಾಜೂಕಿನ, ಜಾಣ ನಡೆಯಿಂದಲೇ ಕಾಗೇರಿ ಅದನ್ನು ಹ್ಯಾಂಡಲ್ ಮಾಡಿಕೊಂಡು ಬಂದಿದ್ದಾರೆ.
ಗುಜರಾತ್ ಮಾದರಿಯ ಪ್ರಯೋಗವನ್ನು ಬಿಜೆಪಿ ರಾಜ್ಯದಲ್ಲೂ ಮಾಡುವ ಯೋಚನೆಯಲ್ಲಿದೆ. ನಿರಂತರವಾಗಿ ಐದಾರು ಬಾರಿ ಗೆದ್ದ ನಾಯಕರಿಗೆ ಬೇರೆ ಕ್ಷೇತ್ರ ನೀಡಿ, ಅಲ್ಲಿ ಸ್ಪರ್ಧಿಸುವ ಚಾಲೆಂಜ್ ನೀಡಲಾಗುತ್ತದೆ. ಅದರಲ್ಲಿ ಕಾಗೇರಿಯವರ ಹೆಸರೂ ಕೇಳಿಬರುತ್ತಿದೆ. ಆರ್‌ಎಸ್‌ಎಸ್ ಘಟ್ಟಿ ಇರುವ ಶಿರಸಿಯಲ್ಲಿ ಈ ಹೊಸ ಪ್ರಯೋಗ ನಡೆಯುತ್ತದೆ ಎಂಬುದು ಕಾಗೇರಿ ಬದಲು ಬಿಜೆಪಿ ಟಿಕೆಟ್ ಬಯಸುತ್ತಿರುವವರ ವಾದ.
ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಶಿರಸಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಕೆ.ಜಿ.ನಾಯ್ಕ ನಾಮಧಾರಿ ಜಾತಿಯ ಕಾರ್ಡ್ ಉರುಳಿಸಿ ಪ್ರಯತ್ನ ನಡೆಸಿದ್ದಾರೆ. ಕಾಗೇರಿಗೆ ಟಿಕೆಟ್ ತಪ್ಪಿದರೆ ತಾವ್ಯಾಕೆ ಪ್ರಯತ್ನಿಸಬಾರದು ಎಂದು ಕೆಲ ಯುವ ಮುಖಗಳೂ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ, ಕಾಗೇರಿ ಮಾತ್ರ ಮುಂದಿನ ಬಾರಿಗೆ ನನಗೆ ಟಿಕೆಟ್, ಗೆಲ್ಲುವುದು ನಾನೇ ಎಂದು ಹೋದಲ್ಲೆಲ್ಲ ಸ್ಪಷ್ಟವಾಗಿ ಹೇಳಿಕೊಳ್ಳುತ್ತಿದ್ದಾರೆ.
ಸಂಸದ ಅನಂತಕುಮಾರ್ ಹೆಗಡೆ ರಾಜಕೀಯ ಸನ್ಯಾಸ!: ಬಿಜೆಪಿಯಿಂದ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಅನಾರೋಗ್ಯದ ಕಾರಣ ಹೇಳಿ ರಾಜಕೀಯ ನಿವೃತ್ತಿಯಾಗುವುದಾಗಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇದಲ್ಲದೇ ಪಕ್ಷದ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗದೇ ಭೂಗತರಾಗಿದ್ದರು.
ಪಕ್ಷದ ನಾಯಕರಿಗೂ ಸಿಗದೇ ಅಜ್ಞಾತರಾಗಿದ್ದರಿಂದ ಮುಂಬರುವ ಲೋಕಸಭೆಗೆ ಅನಂತಕುಮಾರ್ ಹೆಗಡೆ ಸ್ಪರ್ಧಿಸದಿದ್ದರೇ ಜಿಲ್ಲೆಯಲ್ಲಿ ಹೆಚ್ಚು ಹಿಡಿತ ಹೊಂದಿರುವ ಕಾಗೇರಿಯವರನ್ನೇ ಮುಂಬರುವ ಲೋಕಸಭೆಗೆ ಪಕ್ಷದಿಂದ ಅಭ್ಯರ್ಥಿ ಮಾಡಬೇಕು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಪಕ್ಷ ಆಪರೇಶನ್ ಕಮಲಕ್ಕೆ ಕೈ ಹಾಕಿದ್ದು, ಜೆಡಿಎಸ್‌ನಲ್ಲಿರುವ ಶಿರಸಿಯ ಬ್ರಾಹ್ಮಣ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆಯನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಸಫಲವಾಗಿದೆ. ಆದರೆ ಮೂಲಗಳ ಪ್ರಕಾರ ಕಾಗೇರಿಯವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂಬ ಮಾತುಗಳು ಕೇಳಿಬಂದಿದೆ. ಆದರೆ ಕಾಗೇರಿಯವರು ಪಕ್ಷದ ತೀರ್ಮಾನವನ್ನು ಧಿಕ್ಕರಿಸುವುದು ಅನುಮಾನ.
ಸಚಿವರಾಗಿ, ಸ್ಪೀಕರ್ ಆಗಿ ಸಹ ಕಾರ್ಯನಿರ್ವಹಿಸಿದ್ದರಿಂದ ಜೊತೆಗೆ ಉತ್ತಮ ಚಾರಿತ್ಯ, ಭ್ರಷ್ಟಾಚಾರ ಮುಕ್ತರಾಗಿ ಕ್ಲೀನ್ ಇಮೇಜ್ ಹೊಂದಿರುವುದರಿಂದ ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ರೇಸ್‌ನಲ್ಲಿ ಸಹ ತಮ್ಮ ಹೆಸರು ಸೇರುತ್ತದೆ, ತಮಗೊಂದು ಅವಕಾಶ ಸಿಗಬಹುದು ಎಂಬ ನಂಬಿಕೆಯಲ್ಲಿ ಕಾಗೇರಿ ಇದ್ದಾರೆ. ಹೀಗಾಗಿ ಲೋಕಸಭೆಗಿಂತ ವಿಧಾನಸಭೆಗೆ ಸ್ಪರ್ಧೆ ಮಾಡುವ ಇಂಗಿತ ಕಾಗೇರಿಯದ್ದಾಗಿದ್ದು. ಈ ಕಾರಣದಿಂದ ಅನಂತಕುಮಾರ್ ನಡೆ ಬಗ್ಗೆ ಕಾಗೇರಿ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ರಾಮಕೃಷ್ಣ ಹೆಗಡೆ ಗೆದ್ದ ಕ್ಷೇತ್ರ: ಶಿರಸಿ ತಾಲೂಕಿನ ಅರ್ಧ ಭಾಗ ಹಾಗೂ ಸಿದ್ದಾಪುರ ತಾಲೂಕನ್ನೊಳಗೊಂಡ ಶಿರಸಿ ವಿಧಾನಸಭಾ ಕ್ಷೇತ್ರದಿಂದ 1957 ಹಾಗೂ 1962ರಲ್ಲಿ ಖ್ಯಾತ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಇಂದಿಗೂ ಕ್ಷೇತ್ರದಲ್ಲಿ ಅವರ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ, ಅವರದ್ದೇ ಕುಟುಂಬದ ಶಶಿಭೂಷಣ ಹೆಗಡೆ ಇಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಸಾಧ್ಯವಾಗದೇ ಇರುವುದು ವಿಪರ್ಯಾಸ. 1967ರಲ್ಲಿ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ರಾಮಕೃಷ್ಣ ಹೆಗಡೆ ಅವರು ಕ್ಷೇತ್ರ ಬದಲಿಸಬೇಕಾಯಿತು. ನಂತರ ಶಿರಸಿಯಲ್ಲಿ ಎರಡು ಬಾರಿ ಎಂ.ಎಚ್. ಜಯಪ್ರಕಾಶ್ ನಾರಾಯಣ್, ಒಂದು ಸಾರಿ ಉಮಾಕಾಂತ್ ಬುದ್ದು ಬೋರ್ಕರ್, 3 ಬಾರಿ ಗೋಪಾಲ್ ಮುಕುಂದ ಕಾನಡೆ, ಒಮ್ಮೆ ಪ್ರೇಮಾನಂದ ಜಯವಂತ, ಎರಡು ಬಾರಿ ವಿವೇಕಾನಂದ ವೈದ್ಯ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯೊಂದಿಗೆ ಮತ್ತೆ ಕ್ಷೇತ್ರ ಸಾಮಾನ್ಯಕ್ಕೆ ತೆರೆದುಕೊಂಡಿತು. 1999ರಿಂದಲೂ ಶಿರಸಿ ಕ್ಷೇತ್ರದಲ್ಲಿ ನಿರಂತರವಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ.
ಕಾಂಗ್ರೆಸ್‌ನಲ್ಲಿ ಸ್ಪರ್ಧೆಗೆ ಹಲವರು: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ನಾಯಕಿ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಸಿದ್ದಾಪುರದ ಮುಖಂಡ ವಸಂತ ನಾಯ್ಕ, ಶಿರಸಿಯ ಶ್ರೀಪಾದ ಹೆಗಡೆ ಕಡವೆ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ ಫೈಟ್‌ನಲ್ಲಿದ್ದಾರೆ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ನಿವೇದಿತ್ ಆಳ್ವ ಶಿರಸಿ ಕ್ಷೇತ್ರದಿಂದ ಕುಮಟಾ ಕ್ಷೇತ್ರಕ್ಕೆ ಜಿಗಿದಿದ್ದಾರೆ.
ಜೆಡಿಎಸ್‌ನಲ್ಲಿರುವ (JDS) ಶಶಿಭೂಷಣ ಹೆಗಡೆ (Shashibhushan Hegde) ಅವರನ್ನು ಕಾಂಗ್ರೆಸ್‌ಗೆ (Congress) ಕರೆತರುವ ಯತ್ನ ನಡೆದಿದ್ದರೂ, ಕೊನೆಗೆ ಬಿಜೆಪಿ ತೆಕ್ಕೆಗೆ ಶಶಿಭೂಷಣ್ ಹೆಗಡೆ ಬಿದ್ದಿದ್ದಾರೆ. ಹೀಗಾಗಿ ಜಾತಿ ಲೆಕ್ಕಾಚಾರದಲ್ಲಿ ಕಾಗೇರಿಯನ್ನು ಎದುರಿಸುವ ತಂತ್ರ ಕಾಂಗ್ರೆಸ್‌ಗೆ ಸಫಲವಾಗಿಲ್ಲ. ಇನ್ನು ಬ್ರಾಹ್ಮಣ ನಾಯಕರ ಕೊರತೆ ಸಹ ಕಾಂಗ್ರೆಸ್‌ನಲ್ಲಿ ಇದೆ. ಹೀಗಾಗಿ ನಾಮಧಾರಿ ನಾಯಕನಿಗೇ ಮುಂದೆ ಟಿಕೆಟ್ ಕೊಡುವ ಅನಿವಾರ್ಯತೆ ಇದೆ. ಇದನ್ನೂ ಓದಿ: ಕಮಲ ಬಿಟ್ಟು ‘ಕೈ’ ಹಿಡಿಯಲು ಮುಂದಾದ ಮಾಲಕರೆಡ್ಡಿ
ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಕಾಂಗ್ರೆಸ್ ಬೆಳವಣಿಗೆಗೆ ಮುಳ್ಳಾಗಿದೆ. ಶಿರಸಿ ಕ್ಷೇತ್ರದವರೇ ಆಗಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಪಕ್ಷ ತೊರೆದು ಕೈ ಹಿಡಿದಿದ್ದಾರೆ. ಹೀಗಾಗಿ ಪ್ರಬಲ ಜನಾಂಗದ ನಾಯಕ ಜನಾಂಗದ ಹಲವು ಮುಖಂಡರು ಕಾಂಗ್ರೆಸ್ ಮನೆಗೆ ಸೇರಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕಗೆ ಕಾಂಗ್ರಸ್ ಟಿಕೆಟ್ ನೀಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇವರು ಸಕ್ರಿಯ ರಾಜಕೀಯದಲ್ಲಿದ್ದು, ಕ್ಷೇತ್ರದಲ್ಲಿ ಸಹ ಉತ್ತಮ ಹೆಸರು ಮಾಡಿದವರು.
ಜಿಲ್ಲೆಯಲ್ಲಿ ಕಾಂಗ್ರಸ್ ಉಳಿಯಲು ಕಾರಣರಾದವರು. ಸರಳ, ಸೌಮ್ಯ ಸ್ವಭಾವದ ಹಾಗೂ ಬಿಜೆಪಿಯ ಕಾಗೇರಿಯಂತೆಯೇ ವ್ಯಕ್ತಿತ್ವ ಹೊಂದಿದವರು. ಆದರೆ ಹಲವು ಬಾರಿ ಸ್ಪರ್ಧಿಸಿ ಕಾಗೇರಿ ಎದುರು ಸೋಲು ಕಂಡಿದ್ದ ಇವರಿಗೆ, ಮತ್ತೆ ಕಾಗೇರಿ ವಿರುದ್ಧ ಸ್ಪರ್ಧೆ ಮಾಡಿದರೇ ಗೆಲ್ಲುತ್ತಾರಾ ಎಂಬ ಪ್ರಶ್ನೆ ಕ್ಷೇತ್ರದ ನಾಯಕರಲ್ಲೇ ಇದೆ. ಆದರೆ ಪ್ರಬಲ ನಾಮಧಾರಿ ಸಮುದಾಯದ ಮುಖಂಡರಾದ್ದರಿಂದ ಗೆಲ್ಲಲು ಸಹ ಅವಕಾಶವಿದೆ ಎಂಬುದು ಹಲವರ ವಾದ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಮೊದಲ ಹಂತದ ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಜಿಲ್ಲೆಯ ಹಳಿಯಾಳ, ಭಟ್ಕಳ, ಕಾರವಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಮಾತ್ರ ಘೋಷಣೆ ಮಾಡಲಾಗಿದ್ದು, ಶಿರಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆ ಕಗ್ಗಂಟಾಗೆ ಮುಂದುವರಿದಿದೆ.
ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರೆಷ್ಟು?
ಪುರುಷ ಮತದಾರರು- 99,276
ಮಹಿಳಾ ಮತದಾರರು- 98,211
ಒಟ್ಟು- 1,97,487
ಕ್ಷೇತ್ರದ ಬಗ್ಗೆ ಜನ ಏನು ಹೇಳ್ತಾರೆ?: ಕ್ಷೇತ್ರದಲ್ಲಿ ಸ್ಪೀಕರ್ ಕಾಗೇರಿ ಪರ ಜನರ ಒಲವು ಹೆಚ್ಚು ಕಂಡುಬರುತ್ತದೆ. ಹಿಂದಿಗಿಂತಲೂ ಕ್ಷೇತ್ರದ ಅಭಿವೃದ್ಧಿಯನ್ನು ಈ ಬಾರಿ ಕಾಗೇರಿ ಮಾಡಿದ್ದಾರೆ ಎಂಬ ಅಭಿಪ್ರಾಯವಿದೆ. ಹಾಗೆಯೇ ಕಾಂಗ್ರಸ್‌ನ ಸ್ಪರ್ಧಾಕಾಂಕ್ಷಿ ಭೀಮಣ್ಣ ನಾಯ್ಕ ಪರ ಸಹ ಉತ್ತಮ ಅಭಿಪ್ರಾಯ ಜನರಲ್ಲಿದೆ. ಬ್ರಾಹ್ಮಣ ಮತ್ತು ನಾಮಧಾರಿಯ 2 ಪ್ರಬಲ ಜನಾಂಗದ ನಾಯಕರು ಈ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮುಖಾಮುಖಿ ಆಗಲಿದ್ದಾರೆ. ಹೀಗಾಗಿ ಯಾರಿಗೆ ಮತದಾರ ಮತ್ತೊಮ್ಮೆ ಆಯ್ಕೆ ಮಾಡುತ್ತಾನಾ ಅಥವಾ ಹೊಸ ಮುಖಕ್ಕೆ ಮಣೆಹಾಕುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ