ಹಾಸನ: ಇಲ್ಲಿನ ತಹಶೀಲ್ದಾರ್ (Tahasildar) ಆಗಿದ್ದ ಶ್ವೇತಾ ಅವರ ವರ್ಗಾವಣೆಗೆ (Transfer) ಕೆಎಟಿ (Karnataka Adminstration Tribunal) ತಡೆ ನೀಡಿದೆ. ಅಧಿಕಾರಿ ಶ್ವೇತಾ ಸೇರಿದಂತೆ ಇತ್ತೀಚೆಗೆ ಹದಿಮೂರು ಮಂದಿ ತಹಶೀಲ್ದಾರ್‍ರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಶ್ವೇತಾ ಅವರು, ಇಲ್ಲಿ ಅಧಿಕಾರ ವಹಿಸಿಕೊಂಡು ಕೇವಲ ಎಂಟು ತಿಂಗಳಾಗಿವೆ. ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಲಾಗಿದೆ ಎಂದು ಕೆಎಟಿ ಮೊರೆ ಹೋಗಿದ್ದರು.
ಶ್ವೇತಾ ಅವರು ಗ್ರೇಡ್-1 ತಹಶೀಲ್ದಾರ್ ಆಗಿದ್ದು, ಅವರ ಸ್ಥಾನಕ್ಕೆ ಗ್ರೇಡ್-2 ತಹಸೀಲ್ದಾರ್‍ರನ್ನು ನಿಯೋಜನೆ ಮಾಡಿರುವುದು ಎಷ್ಟು ಸರಿ? ಇದು ಊರ್ಜಿತವೇ? ಎಂದು ಶ್ವೇತಾ ಅವರ ಪರ ವಕೀಲರು ಕರ್ನಾಟಕ ನ್ಯಾಯಾಧಿಕರಣದ ಮುಂದೆ ವಾದ ಮಂಡಿಸಿದ್ದರು. ಈ ವಾದ ಹಾಗೂ ಮನವಿಯನ್ನು ಪುರಸ್ಕರಿಸಿದ ನ್ಯಾಯಮಂಡಳಿ ಶ್ವೇತಾ ಅವರ ವರ್ಗಾವಣೆಗೆ ತಡೆ ನೀಡಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯದ 4% ಮೀಸಲಾತಿಯನ್ನೂ ತೆಗೆದುಹಾಕ್ತೀವಿ – ಅಮಿತ್ ಶಾ
ಕೆಎಟಿ ಆದೇಶದ ಪ್ರತಿ ರಾತ್ರಿ ಕೈ ಸೇರುವ ಸಾಧ್ಯತೆ ಇದ್ದು, ಅದನ್ನು ಪಡೆದ ನಂತರ ವರದಿ ಮಾಡಿಕೊಳ್ಳುವುದಾಗಿ ಶ್ವೇತಾ ಅವರು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಚನ್ನರಾಯಪಟ್ಟಣ ತಹಸೀಲ್ದಾರ್ ಆಗಿದ್ದ ಗೋವಿಂದರಾಜು ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಗೀತಾ ಎಂಬುವವರನ್ನು ನಿಯೋಜನೆ ಮಾಡಲಾಗಿತ್ತು. ನಂತರ ಗೋವಿಂದರಾಜು ಕೆಎಟಿ ಮೊರೆ ಹೋದ ನಂತರ ಅವರ ಪರವೇ ತೀರ್ಪು ಹೊರ ಬಿದ್ದಿತ್ತು. ಅದೇ ಸನ್ನಿವೇಶ ಹಾಸನದಲ್ಲೂ ಮರುಕಳಿಸಿದೆ.
ಶ್ವೇತಾ ಅವರ ಸ್ಥಾನಕ್ಕೆ ವರ್ಗಾವಣೆಯಾಗಿದ್ದ ಗ್ರೇಡ್-2 ತಹಸೀಲ್ದಾರ್ ಎಸ್.ನವೀನ್ ಕುಮಾರ್, ಇಂದು ಬೆಳಿಗ್ಗೆ ಹಾಸನ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲಾ ಪಂಚಾಯ್ತಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: 200 ಮಕ್ಕಳನ್ನು ಶಾಲೆಗೆ ಕಳಿಸದೇ ಇಸ್ಲಾಮಿಕ್ ಶಿಕ್ಷಣ – ಬೆಂಗಳೂರಿನ ಅನಾಥಾಶ್ರಮದ ಮೇಲೆ NCPCR ದಾಳಿ