ಬೆಂಗಳೂರು: ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ ಒಂದು ವರ್ಷ ಆಗುತ್ತಿದೆ. ದಿನಗಳು ಉರುಳುತ್ತಿದ್ದು, ಆದರೆ ರೈತರ ಸಾಲ ಸಂಪೂರ್ಣ ಮನ್ನಾ ಆಗದ್ದಕ್ಕೆ ಟೀಕೆ ಕೇಳಿಬಂದಿದೆ.
ವಿಧಾನಸಭಾ ಚುನಾವಣೆ ಸಮಯದಲ್ಲಿ ನಾನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಲೋಕಸಭಾ ಚುನಾವಣೆ ಮುಗಿಯುತ್ತಾ ಬಂದಿದ್ದು ಸಾಲ ಮನ್ನಾ ಭರವಸೆ ಭರವಸೆಯಾಗಿಯೇ ಉಳಿದಿದ್ದು ಪೂರ್ಣವಾಗಿ ಮನ್ನಾ ಆಗದ್ದಕ್ಕೆ ರೈತರಿಂದ ಮತ್ತು ಬಿಜೆಪಿಯಿಂದ ಟೀಕೆ ಕೇಳಿ ಬಂದಿದೆ.
ಋಣಮುಕ್ತ ಪತ್ರ ಕಳುಹಿಸುತ್ತೇನೆ ಎಂದು ಹೇಳಿದ ಸಿಎಂ, ರೈತರಿಗೆ ಸಾಂತ್ವನ ಪತ್ರ ಪತ್ರ ನೀಡಿದ್ದಾರೆ. ರೈತರಿಗೆ ಕಳಿಸಲಾದ ಸಾಂತ್ವನ ಪತ್ರದಲ್ಲಿ ಕೇವಲ ಆಶಯ, ಇಸ್ರೇಲ್ ಮಾದರಿ ಕೃಷಿ, ಕವಿವಾಣಿಗಳು ಇದೆ ಹೊರತು ಸಾಲಮನ್ನಾ ಮೊತ್ತದ ಉಲ್ಲೇಖವೇ ಇಲ್ಲ. ಸಾಲ ಮರುಪಾವತಿ ಮಾಡಿದ ರೈತರಿಗೆ 25 ಸಾವಿರ ಪ್ರೋತ್ಸಾಹ ಧನದ ಬಗ್ಗೆಯೂ ಮಾತಿಲ್ಲ. ರೈತರ ಸಹಕಾರ ಅಗತ್ಯ. ಸರ್ಕಾರ ಸದಾ ನಿಮ್ಮೊಂದಿಗೆ ಎಂದು ಹೇಳಿ ಪತ್ರ ಮುಗಿಯುತ್ತದೆ.
ಎಷ್ಟು ಕೋಟಿ ಸಾಲ ಮನ್ನಾ ಆಗಿದೆ?
ಸಿಎಂ ಘೋಷಣೆ ಮಾಡಿದ ಸಾಲ ಮನ್ನಾ ಮೊತ್ತ 44ಸಾವಿರ ಕೋಟಿ ರೂ. ಆಗಿದ್ದು, ಸಹಕಾರಿ ಸಂಘಗಳ ಸಾಲ ಮನ್ನಾಗೆ 9,448.61 ಕೋಟಿ ರೂ. ಹಣದ ಅಗತ್ಯವಿದೆ. ಇಲ್ಲಿಯವರೆಗೆ ಸಹಕಾರಿ ಸಂಘಗಳಲ್ಲಿ ರೈತರ 2,630 ಕೋಟಿ ರೂ. ಸಾಲ ಮನ್ನಾ ಆಗಿದ್ದು, ವಾಣಿಜ್ಯ ಬ್ಯಾಂಕ್ ಗಳಲ್ಲಿ 2,800 ಕೋಟಿ ರೂ. ಮನ್ನಾ ಆಗಿದೆ. ಸಾಲ ಮನ್ನಾಗೆ ರಾಜ್ಯ ಸರ್ಕಾರ ಒಟ್ಟು 5,430 ಕೋಟಿ ರೂ. ಹಣವನ್ನು ವಿನಿಯೋಗಿಸಿದೆ.
ಪಬ್ಲಿಕ್ ಪ್ರಶ್ನೆಗಳು
1. ಪತ್ರದಲ್ಲಿ ಸಾಲಮನ್ನಾ ಮೊತ್ತ ಉಲ್ಲೇಖಿಸದೇ ಜವಾಬ್ದಾರಿಯಿಂದ ನುಣುಚಿಕೊಂಡ್ರಾ ಸಿಎಂ?
2. ಕೇವಲ `ಲೋಕ’ಎಲೆಕ್ಷನ್ ಗೆಲ್ಲುವ ಸಲುವಾಗಿ ಫೆ.19ಕ್ಕೆ ಸಾಂತ್ವನ ಪತ್ರ ಕಳಿಸಿಕೊಟ್ರಾ?
3. ಪುತ್ರ ನಿಖಿಲ್ ಗೆಲ್ಲಿಸಿಕೊಳ್ಳಲು ರೈತರ ಮತಬುಟ್ಟಿಗೆ ಸಾಂತ್ವನದ ಮೂಲಕ ಕೈ ಹಾಕಿದ್ರಾ?
4. ಜೂನ್ ಅಂತ್ಯದ ವೇಳೆಗೆ ಬಾಕಿ ಉಳಿದ 28570 ಕೋಟಿ ರೂ. ಸಾಲ ಮನ್ನಾ ಆಗುತ್ತಾ?
5. ಈಗಾಗಲೇ ಸಾಲ ಮರುಪಾವತಿ ಮಾಡಿದವರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ಸಿಗೋದು ಯಾವಾಗ?