ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಬಂದರಿನಲ್ಲಿ ಬಲು ಅಪರೂಪದ ಕಾರ್ಗಿಲ್ ಮೀನು (ಕಡಬು) ಟನ್ ಗಟ್ಟಲೇ ಸಿಕ್ಕಿದ್ದು, ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.
ಲಕ್ಷ ದ್ವೀಪ, ಹವಳದ ದಿಬ್ಬಗಳು ಇರುವಂತ ಪ್ರದೇಶದಲ್ಲಿ ಈ ಮೀನುಗಳು ಹೇರಳವಾಗಿ ವಾಸಿಸುತ್ತಿವೆ. ಇವುಗಳು ಮನುಷ್ಯನಂತೆ ಹಲ್ಲುಗಳನ್ನು ಹೊಂದಿವೆ. ಇದಲ್ಲದೇ ಇವು ಮೀನುಗಳನ್ನೇ ತಿಂದು ಬದುಕುತ್ತವೆ. ಹೀಗಾಗಿ ಇವು ಎಲ್ಲಿ ಇರುತ್ತವೆಯೋ ಆ ಭಾಗದಲ್ಲಿ ಉತ್ತಮ ಆಹಾರದ ಮೀನುಗಳು ಇರುವುದಿಲ್ಲ. ಇದ್ದರೂ ಈ ಮೀನುಗಳು ಭಕ್ಷಿಸುತ್ತವೆ. ಹೀಗಾಗಿ ಈ ಮೀನುಗಳು ಇರುವಲ್ಲಿ ಬೇರೆ ಮೀನುಗಳು ಇರುವುದಿಲ್ಲ ಎಂಬುದು ಮೀನುಗಾರರ ನಂಬಿಕೆಯಾಗಿದ್ದು, ವೈಜ್ಞಾನಿಕವಾಗಿ ಕೂಡ ದೃಢಪಟ್ಟಿದೆ.
Advertisement
Advertisement
ಈ ಬಾರಿ ಅರಬ್ಬಿ ಸಮುದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಳಿಯ ಚಲನೆ ಬದಲಾಗಿದೆ. ಇದರಿಂದಾಗಿ ಲಕ್ಷದ್ವೀಪಗಳಂತಹ ಪ್ರದೇಶದಲ್ಲಿ ಇರಬೇಕಾದ ಕಾರ್ಗಿಲ್ ಮೀನುಗಳು ತಮ್ಮ ಸ್ಥಾನ ಬದಲಿಸಿ ಉತ್ತರ ದಿಕ್ಕಿನತ್ತ ಚಲಿಸುತ್ತಿವೆ. ಹೀಗಾಗಿ ಈ ಮೀನುಗಳು ಈ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿದೆ. ಹೀಗಾಗಿ ಮೊದಲೇ ಮೀನಿನ ಕ್ಷಾಮದಿಂದ ಬಳಲುತ್ತಿರುವ ಕಾರವಾರದ ಮೀನುಗಾರರು ಈ ಮೀನುಗಳ ಆಗಮನದಿಂದ ಮತ್ತಷ್ಟು ಭಯ ಪಡುವಂತಾಗಿದೆ ಎಂದು ಇಲ್ಲಿನ ಮೀನುಗಾರರು ಹೇಳುತ್ತಾರೆ.
Advertisement
ಇಂದು 15 ಬೋಟುಗಳಿಗೆ 80 ಟನ್‍ಗೂ ಅಧಿಕ ಕಾರ್ಗಿಲ್ ಮೀನುಗಳು ಬಲೆಗೆ ಬಿದ್ದಿವೆ. ಈಗಾಗಲೇ ಸಮುದ್ರದಲ್ಲಿ ಮತ್ಸ್ಯ ಕ್ಷಾಮ ಹೆಚ್ಚಾಗಿದ್ದು, ಮೀನು ಹಿಡಿಯಲು ತೆರಳಿದವರು ಸಾವಿರಾರು ರೂ.ಯ ಇಂಧನ ವ್ಯಯಿಸಿ ಬರಿ ಕೈಯಲ್ಲಿ ಹಿಂತಿರುಗಲಾಗದೇ ಇವುಗಳನ್ನು ಹೊತ್ತು ತರುತ್ತಿದ್ದಾರೆ. ಈ ಮೀನುಗಳನ್ನು ಈ ಭಾಗದಲ್ಲಿ ಯಾರೂ ತಿನ್ನುವುದಿಲ್ಲ. ಹೀಗಾಗಿ ಫಿಶ್ ಮಿಲ್‍ಗಳಿಗೆ ಇವುಗಳನ್ನು ಕಳುಹಿಸಬೇಕಿತ್ತು. ಸ್ಥಳೀಯವಾಗಿ ಫಿಶ್ ಮಿಲ್ ಬಂದ್ ಆಗಿದ್ದರಿಂದ ನೆರೆಯ ಗೋವಾ, ಮಹಾರಾಷ್ಟ್ರ ಹಾಗೂ ಪಕ್ಕದ ಜಿಲ್ಲೆಯ ಉಡುಪಿಗೆ ಕಳುಹಿಸಬೇಕಿದೆ.
Advertisement
ಈ ಮೀನುಗಳನ್ನು ಬೇರೆ ಮೀನುಗಳ ಜೊತೆ ಸೇರಿಸಿದರೂ ವಿಪರೀತ ಕೆಟ್ಟ ವಾಸನೆ, ಕಪ್ಪು ಬಣ್ಣಕ್ಕೆ ತಿರುಗುವುದು ಉಳಿದ ಮೀನುಗಳ ರುಚಿ, ಬಣ್ಣ ಕೆಡಿಸುತ್ತದೆ. ಹೀಗಾಗಿ ಪ್ರತ್ಯೇಕ ವಾಗಿ ಸಾಗಾಟ ಮಾಡಬೇಕಿದ್ದು, ಸದ್ಯ ಇದರ ಬೆಲೆ ಕೆಜಿ ಒಂದಕ್ಕೆ 10 ರಿಂದ 15 ರೂಪಾಯಿಗಳಷ್ಟಿದೆ.
ಚೀನಾದಲ್ಲಿ ಭರ್ಜರಿ ಬೇಡಿಕೆ?
ಭಾರತದಲ್ಲಿ ಈ ಮೀನುಗಳ ಸೇವನೆ ಮಾಡುವುದು ಅತ್ಯಲ್ಪ. ಹೀಗಾಗಿ ಈ ಭಾಗದಲ್ಲಿ ಇದರ ಬೇಡಿಕೆ ಇರದ ಕಾರಣ ಇವುಗಳನ್ನು ಮೀನುಗಾರರು ಹಿಡಿಯುವುದಿಲ್ಲ. ಸಿಕ್ಕರೂ ಬಿಟ್ಟು ಬರುವುದುಂಟು. ಆದರೆ ಮೀನೇ ಇಲ್ಲದಿದ್ದಾಗ ಬೇಡಿಕೆ ಇಲ್ಲದ ಈ ಮೀನುಗಳನ್ನು ಹೊತ್ತು ತರುತ್ತಾರೆ. ಈ ಮೀನುಗಳಿಗೆ ಚೀನಾದಲ್ಲಿ ಬೇಡಿಕೆ ಇದೆ. ಹೀಗಾಗಿ ಫಿಶ್ ಮಿಲ್‍ನಲ್ಲಿ ರಫ್ತು ಮಾಡುವ ಕಂಪನಿಗಳು ಈ ಮೀನಿನ ತಲೆಯನ್ನು ಕತ್ತರಿಸಿ ದೇಹದ ಭಾಗವನ್ನು ಮಾತ್ರ ಕೆ.ಜಿಗೆ 30 ರೂ. ನಿಂದ 50 ರೂ.ವರೆಗೆ ಬೇಡಿಕೆಗೆ ತಕ್ಕಂತೆ ರಫ್ತು ಮಾಡುತ್ತಾರೆ.
ಕಡಲ ವಾತಾವರಣ ಬದಲಾಗಿದೆ:
ಅರಬ್ಬಿ ಸಮುದ್ರದ ಒಳಗಿನ ವಾತಾವರಣ ಬದಲಾಗಿದೆ. ಅಲ್ಲದೆ ಗಾಳಿ ಬೀಸುವ ದಿಕ್ಕು ಬದಲಾಗಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಆಹಾರದ ಕೊರತೆ ನೀಗಿಸಿಕೊಳ್ಳಲು ಇವು ತಮ್ಮ ಸ್ಥಾನವನ್ನು ಬದಲಿಸುತ್ತದೆ. ಆಫ್ರಿಕಾ, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಭಾರತದ ಲಕ್ಷದ್ವೀಪ, ತಮಿಳುನಾಡು, ಆಂಧ್ರಗಳಲ್ಲಿ ಕಾಣಸಿಗುತ್ತವೆ. ದಕ್ಷಿಣ ಸಮುದ್ರದಲ್ಲಿ ಹೆಚ್ಚಾಗಿ ವಾಸಿಸುವ ಇವು ಈಗ ವಾತಾವರಣ ಬದಲಾವಣೆಯಿಂದ ಉತ್ತರ ದಿಕ್ಕಿಗೆ ಬಂದಿವೆ.
ಇವು ಈ ಭಾಗದಲ್ಲಿ ಸಿಗುವ ತಾರ್ಲೆ, ಬಾಂಗಡೆಯಂತಹ ಮೀನುಗಳೇ ಆಹಾರವಾಗಿ ತಿನ್ನುತ್ತವೆ. ಇದರಿಂದ ಈ ಭಾಗದಲ್ಲಿ ಮೀನುಗಳ ಸಂತತಿ ಕ್ಷೀಣಿಸುವ ಜೊತೆ ಮೀನುಗಾರರಿಗೂ ಸಮಸ್ಯೆ ಆಗಲಿದೆ. ಆದರೆ ಇದು ನೈಸರ್ಗಿಕ ಕ್ರಿಯೆ ಅಷ್ಟೇ ಎಂದು ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ಪ್ರೊ. ಜೆ.ಎಲ್ ರಾಥೋಡ್ ಅಭಿಪ್ರಾಯ ಪಟ್ಟಿದ್ದಾರೆ.