-ಏರ್‌ಪೋರ್ಟಿಗೆ ಸಮವಸ್ತ್ರ ಧರಿಸಿ ಹೋದ ಯುವಕರಿಗೆ ಶಾಕ್
ಕಾರಾವಾರ: ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವಕ 54 ಮಂದಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಶಿರವಾಡದ ಮಾರ್ವಿನ್ 54 ಮಂದಿಗೆ ವಂಚಿಸಿದ ಯುವಕನಾಗಿದ್ದು, ತರಬೇತಿಗೆ ಹಣ ಕಟ್ಟಿದರೆ ಸಾಕು ಯಾರಿಗೆ ಬೇಕಾದರು ಕೆಲಸ ಕೊಡಿಸುವುದಾಗಿ ಹೇಳಿದ್ದ. ಅಲ್ಲದೇ ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಕಚೇರಿ ತೆರೆದಿದ್ದನು. ಇದನ್ನು ನಂಬಿದ ನಿರುದ್ಯೋಗಿಗಳು ಮೋಸ ಹೋಗಿದ್ದಾರೆ. ಈತನಿಂದ ಮೋಸ ಹೋದವರು ಉತ್ತರ ಕನ್ನಡ ಜಿಲ್ಲೆಯವರಲ್ಲದೇ ಹಾಸನ, ಬೆಳಗಾವಿ, ಗೋವಾ, ಹುಬ್ಬಳ್ಳಿ, ಬೆಂಗಳೂರಿನವರೂ ಇದ್ದಾರೆ. ಪ್ರಕರಣ ಸಂಬಂಧ ಕಾರವಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಿಟಿಷ್ ಏರ್ ವೇಸ್ ನಲ್ಲಿ ತಾನೊಬ್ಬ ಹೆಚ್‍ಆರ್ ಅಸಿಸ್ಟೆಂಟ್ ಎಂದು ಹೇಳಿಕೊಂಡು ಮಾರ್ವಿನ್ ಮೋಸ ಮಾಡಲು ಆರಂಭಿಸಿದ್ದ. ತನ್ನ ಕ್ಲಾಸ್ ಮೇಟ್ ಬಳಿಯೇ ಸುಳ್ಳು ಹೇಳಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಮಾರ್ವಿನ್ ತರಬೇತಿಗೆ ಹಣ ನೀಡಿದರೆ ಸಾಕು. ಯಾರಿಗೆ ಬೇಕಾದರು ಕೆಲಸ ಕೊಡಿಸುತ್ತೇನೆ ಹೇಳಿದ್ದ. ಇದನ್ನು ನಂಬಿದ್ದ ಸ್ನೇಹಿತ ಇತರೇ ಸ್ನೇಹಿತರೊಂದಿಗೆ ಹೇಳಿದ್ದ. ಒಟ್ಟು 54 ಜನರ ಬಳಿ ತರಬೇತಿಗೆ ಎಂದು ಹೇಳಿ ಹಣ ಮಾರ್ವಿನ್ ಪಡೆದಿದ್ದ.
ಈ ರೀತಿ ಪಡೆದ ಹಣದಿಂದ ಬೆಂಗಳೂರಿನ ಕುಡ್ಡೆ ಗೇಟ್ ಬಳಿ ಇರುವ ನಾಯಲ್ ಟೆಕ್ ಪಾರ್ಕ್ ನ 3ನೇ ಅಂತಸ್ತಿನಲ್ಲಿ ತನ್ನ ಕಚೇರಿಯನ್ನು ತೆರೆದಿದ್ದ. ಸುಮಾರು 2 ತಿಂಗಳ ಮಟ್ಟಿಗೆ ಕಚೇರಿ ಆರಂಭಿಸಿ ತನ್ನ ಗೆಳತಿ ಯಲ್ಲಾಪುರದ ಮಂಚಿಕೇರಿ ಮೂಲದ ಅಂಕಿತ ರಾಯ್ಕರ್ ಎಂಬಾಕೆಯನ್ನು ಉದ್ಯೋಗ ಬಯಸಿಬಂದ ಯುವಕರಿಗೆ ಪರಿಚಯ ಮಾಡಿಸಿದ್ದ. ಅಲ್ಲದೇ ಆಕೆಯನ್ನು ಏರ್ ವೇಸ್ ನ ಅಸಿಸ್ಟೆಂಟ್ ಹೆಚ್.ಆರ್ ಝಾರಾ ಖಾನ್ ಎಂದು ಹೇಳಿದ್ದ. ಆಕೆಯ ಮೂಲಕವೇ ಯುವಕರಿಗೆ ತರಬೇತಿ ಕೂಡ ಕೊಡಿಸಿದ್ದ.
ತರಬೇತಿಯ ಬಳಿಕ ಯುವಕರಿಗೆ ಕಂಪನಿಯ ಐಡಿ ಕಾರ್ಡ್, ಸಮವಸ್ತ್ರ, ಆಫರ್ ಲೆಟರ್ ನೀಡಿ ನಾಳೆಯಿಂದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಬರುವಂತೆ ಹೇಳಿದ್ದ. ಇದನ್ನು ನಂಬಿದ ಯುವಕರು ಎರಡು ತಿಂಗಳ ತರಬೇತಿ ಪಡೆದು ಸಮವಸ್ತ್ರ ತೊಟ್ಟು ಕೈಯಲ್ಲಿ ಆಫರ್ ಲೆಟರ್ ಹಿಡಿದು ವಿಮಾಣ ನಿಲ್ದಾಣಕ್ಕೆ ಹೋಗಿದ್ದರು. ಈ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಇಂತಹ ಯಾವುದೇ ಉದ್ಯೋಗ ಇಲ್ಲ ಎಂದು ಹೇಳಿದಾಗ ಮೋಸ ಹೋಗಿರುವುದು ತಿಳಿದು ಬಂದಿತ್ತು. ಪ್ರಕರಣದಲ್ಲಿ ಮೋಸ ಹೋದವರಲ್ಲಿ ವಿದ್ಯಾವಂತ ಯುವಕರೇ ಹೆಚ್ಚಿದ್ದಾರೆ. ಸುಮಾರು 70 ಲಕ್ಷ ರೂ. ಹಣವನ್ನು 54 ಮಂದಿಯಿಂದ ಪಡೆದಿರುವುದು ಮಾರ್ವಿನ್ ಪಡೆದಿರುವುದು ಬೆಳಕಿಗೆ ಬಂದಿದೆ.
ಮೋಸ ಹೋಗಿರುವುದು ತಿಳಿದ ಕೂಡಲೇ ಯುವಕರು ಮಾರ್ವಿನ್ ನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಇದಕ್ಕಾಗಿ ಆತನಿರುವ ಪ್ಲಾಟ್ ಗೆ ಹೋದಾಗ ಆತ ಮಧ್ಯರಾತ್ರಿಯೇ ಮನೆ ಖಾಲಿ ಮಾಡಿ ಪರಾರಿಯಾಗಿದ್ದ. ಅಲ್ಲದೇ ಏರ್ ವೇಸ್ ನ ಅಸಿಸ್ಟೆಂಟ್ ಹೆಚ್‍ಆರ್ ಜರಾಖಾನ್ ಎಂಬಾಕೆ ಅಂಕಿತ ರಾಯ್ಕರ್ ಎಂಬುವುದು ಅರಿವಾಗಿತ್ತು. ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಮಡಿವಾಳ ಠಾಣೆಗೆ ದೂರು ಕೊಡಲು ಯುವಕರು ಹೋಗಿದ್ದು, ಪೊಲೀಸರು ದೂರು ಸ್ವೀಕರಿಸದೆ ಕಾರವಾರದಲ್ಲೇ ದೂರು ನೀಡಲು ಹೇಳಿದ್ದರು. ಇದರಂತೆ ಮತ್ತೆ ತಮ್ಮ ಊರಿಗೆ ವಾಪಸ್ ಆದ ಯುವಕರು ಕಾರವಾರ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.