ಕಾರವಾರ: ಯಲ್ಲಾಪುರ ಉಪ ಚುನಾವಣೆ ಸಂದರ್ಭದಲ್ಲಿ ಕೊಂಡೆಮನೆ ಗ್ರಾಮದ ಜನರಿಗೆ ಕೊಟ್ಟ ಮಾತನ್ನು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಉಳಿಸಿಕೊಂಡಿದ್ದಾರೆ.
ಯಲ್ಲಾಪುರ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕೊಂಡೆಮನೆ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತವೆ. ಪ್ರತಿ ದಿನ ನಗರಕ್ಕೆ ಬರಬೇಕಾದರೇ ಈ ಗ್ರಾಮದ ಜನರು ಕಾಲು ಹಾದಿಯಲ್ಲಿಯೇ ನಗರಕ್ಕೆ ಬರುವ ಸ್ಥಿತಿ ಇತ್ತು. ಈ ಕಾರಣದಿಂದ ಸತತ 15 ವರ್ಷಗಳಿಂದ ಸಂಬಂಧ ಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರು ಏನೂ ಪ್ರಯೋಜನವಾಗಿರಲಿಲ್ಲ.
Advertisement
Advertisement
ಕೊಂಡೆಮನೆ ಗ್ರಾಮವು ಮೊದಲು ಯಲ್ಲಾಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿತ್ತು. ಆದರೆ ಸರ್ಕಾರ ಈ ಗ್ರಾಮವನ್ನು ಉಪಳೇಶ್ವರ ಗ್ರಾಮ ಪಂಚಾಯ್ತಿಗೆ ಸೇರಿಸಿದ್ದು ಈ ಪ್ರಕ್ರಿಯೆ ನಡೆಯಲು ತಾಂತ್ರಿಕ ಕಾರಣದಿಂದ 15 ವರ್ಷಗಳೇ ಕಳೆದುಹೋಯಿತು. ಈ ಮಧ್ಯೆ ರಸ್ತೆ ಮಾಡಲು ಪಟ್ಟಣ ಪಂಚಾಯ್ತಿ ಆಗಲಿ, ಗ್ರಾಮ ಪಂಚಾಯ್ತಿಯಾಗಲಿ ಮುಂದೆ ಬಾರದೇ 15 ವರ್ಷಗಳಿಂದ ನಗರ ಪ್ರದೇಶಕ್ಕೆ ಹತ್ತಿರವಿದ್ದರೂ ಕೊಂಡೆಮನೆ ಗ್ರಾಮವು ರಸ್ತೆಯೇ ಇಲ್ಲದೇ ಕಾಲು ಹಾದಿಯಲ್ಲಿಯೇ ಇಲ್ಲಿನ ಜನರು ತಿರುಗಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement
ಇತ್ತೀಚಿಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಶಿವರಾಮ್ ಹೆಬ್ಬಾರ್ ಈ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಇಲ್ಲಿನ ಗ್ರಾಮದ ಜನರು ತಮ್ಮ ಊರಿಗೆ ರಸ್ತೆ ಮಾಡಿಕೊಡುವುದಾದರೇ ಮಾತ್ರ ಮತ ಹಾಕುವುದಾಗಿ ಹೇಳಿದ್ದರು. ಇದಕ್ಕೆ ಶಿವರಾಮ್ ಹೆಬ್ಬಾರ್ ತಾವು ಗೆಲ್ಲಲಿ ಸೋಲಲಿ ಈ ಊರಿಗೆ ರಸ್ತೆ ಮಾಡಿಕೊಡುವ ಆಶ್ವಾಸನೆ ನೀಡಿದ್ದರು.
Advertisement
ಈಗ ಚುನಾವಣೆಯಲ್ಲಿ ಅತ್ಯಂತ ಬಹುಮತದಲ್ಲಿ ಗೆದ್ದ ಹೆಬ್ಬಾರ್ ತಾವು ಕೊಟ್ಟ ಆಶ್ವಾಸನೆಯನ್ನು ಮರೆಯದೇ ಈ ಊರಿಗೆ ರಸ್ತೆ ಮಾಡಲು ಮುಂದಾಗಿದ್ದಾರೆ. ಆದರೇ ತಾಂತ್ರಿಕ ಕಾರಣ ಅಡ್ಡ ಬಂದಿದ್ದು ಅನುದಾನದ ಸಮಸ್ಯೆ ಎದುರಾಗಿದೆ. ಆದರೂ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಈಗ ರಸ್ತೆ ನಿರ್ಮಿಸಿದ್ದಾರೆ.