ಕರಾವಳಿಯಲ್ಲಿ ಸುಗ್ಗಿ ಕುಣಿತದೊಂದಿಗೆ ನಡೆಯುತ್ತೆ ವಿಭಿನ್ನ ರಂಗು ರಂಗಿನ ಹೋಳಿ

Public TV
2 Min Read
KWR HOLI 1

ಕಾರವಾರ: ಹೋಳಿ ಹಬ್ಬ ಬಂತೆಂದರೆ ಉತ್ತರ ಉತ್ತರ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡುತ್ತದೆ. ಹೋಳಿ ಆಚರಣೆಗಾಗಿ ವಾರದಿಂದಲೇ ತಯಾರಾಗುವ ಇಲ್ಲಿನವರು ಬಣ್ಣ ಬಣ್ಣದ ವೇಷ ತೊಟ್ಟು ತಮಟೆ, ನಗಾರಿ, ಗುಮಟೆಗಳ ವಾಧ್ಯದ ಜೊತೆ ಕೋಲಾಟ ವಾಡುತ್ತಾ ಮನೆ ಮನೆಗೆ ತೆರಳಿ ರಂಜಿಸುವ ವಿಶೇಷ ಜನಪದ ಆಚರಣೆ ಇಲ್ಲಿದೆ.

KWR HOLI 2

ಸುಗ್ಗಿಯ ವೇಷ ಭೂಷಣಗಳನ್ನು ಧರಿಸಿದ ಕೋಲು ಮೇಳದ ಕಲಾವಿದರ ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೇಳದ ವಾದ್ಯದ ಗತ್ತಿಗನುಗುಣವಾಗಿ ಪದಗಳನ್ನು ಪದಗಾರರು ಹಾಡುತ್ತಾರೆ. ಹಾಡಿದ ಪದಗಳನ್ನು ಪುನಾರಾವರ್ತನೆಗೊಳಿಸುತ್ತಾ ಕಲಾವಿದರು ಕುಣಿಯುತ್ತಾರೆ. ಹಿಮ್ಮೇಳದ ಲಯಕ್ಕನುಗುಣವಾಗಿ ಕುಣಿಯುವರ ಕುಣಿತ ಹಾಗೂ ಅಂಗಾಂಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ. ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ್ದ ಕುಂಚವನ್ನು ಎಡಗೈಯಲ್ಲಿ ಹಿಡಿದು ಬಲಗೈಲಿ ಹಿಡಿದಿರುವ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲನೆ ಲಯಬದ್ದವಾಗಿ ಕುಟ್ಟುತ್ತಾರೆ. ವಾದ್ಯಮೇಳಗಳೊಂದಿಗೆ ಸುಗ್ಗಿ ಕುಣಿತ ಹೋಳಿ ಹಬ್ಬದ ವರೆಗೆ ಮನೆ ಮನೆಗೆ ತೆರಳಿ ಹೆಜ್ಜೆ ಗೆ ಹೆಜ್ಜೆ ಹಾಕುತ್ತಾ ಸುಗ್ಗಿ ಕುಣಿತ ಮಾಡುತ್ತಾರೆ.

KWR HOLI 6

ಇತಿಹಾಸ:
ಒಮ್ಮೆ ಕೈಲಾಸದಲ್ಲಿ ಗಂಗೆ ಮತ್ತು ಗೌರಿಯರ ಮಕ್ಕಳಿಗೆ ಯಾವುದಾದರು ಕಲೆಯನ್ನು ಕಲಿಸಬೇಕೆಂಬ ಮನಸ್ಸಾಗುತ್ತದೆ. ಶಿವ ಅವರಿಷ್ಟದಂತೆ ಗುರುವಿನ ಬಳಿಗೆ ಕಳುಹಿಸುತ್ತಾನೆ. ಗುರು ಮಕ್ಕಳಿಗೆ ಯಾವ ಆಟ ಕಲಿಸಲು ಹೋದರು ಅವರುಗಳು ಎಲ್ಲವನ್ನು ತಿರಸ್ಕರಿಸುತ್ತಾರೆ. ಮಕ್ಕಳು ಗುರುಗಳಿಗೆ ಸುಗ್ಗಿ ಕುಣಿತ ಕಲಿಸ ಬೇಕೆಂದು ಹಠ ಮಾಡುತ್ತಾರೆ. ಕೊನೆಗೆ ಗುರುಗಳು ಮಕ್ಕಳಿಗೆ ಸುಗ್ಗಿ ಕುಣಿತ ಕಲಿಸಲು ಪ್ರಾರಂಭಿಸುತ್ತಾರೆ.

ನಂತರ ಮಕ್ಕಳು ಊರಿನ ಮನೆಮನೆಯ ಮುಂದೆ ಸುಗ್ಗಿ ಕುಣಿತ ಪ್ರದರ್ಶನ ನೀಡಲು ಹೋರಡುತ್ತಾರೆ. ಇದನ್ನು ಗಮನಿಸಿದ ಶಿವ ನಮ್ಮಂತಹವರಿಗೆ ಇದು ಯೋಗ್ಯವಲ್ಲ ಎಂದು ಹೇಳಿ ಮಕ್ಕಳಿಗೆ ಶಾಪ ನೀಡುತ್ತಾನೆ. ಆಗ ಮಕ್ಕಳ ಕೈಯಲ್ಲಿನ ಕೋಲು ಕುಂಚ ನೆಲಕ್ಕೆ ಬಿದ್ದು ಹೋಗುತ್ತದೆ. ಅಷ್ಟರಲ್ಲಿ ಹಾಲಕ್ಕಿ ಹುಡುಗನೊಬ್ಬ ಅದನ್ನು ಎತ್ತಿಕೊಳ್ಳುತ್ತಾನೆ. ಮೊದಲನೆಯ ಆಟದಲ್ಲೇ ಅಪಶಕುನವಾಯಿತೆಂದು ಹುಡುಗರು ಎಲ್ಲವನ್ನು ಹಾಲಕ್ಕಿ ಹುಡುಗನಿಗೆ ಒಪ್ಪಿಸುತ್ತಾರೆ. ಇದನ್ನು ಗಮನಿಸಿದ ಗುರುಗಳು ಈ ಕಲೆಯನ್ನು ಪ್ರದರ್ಶಿಸಬೇಕೆಂದು ಕರಾರು ಹಾಕುತ್ತಾರೆ. ಅಂದು ಪ್ರಾರಂಭವಾದ ಸುಗ್ಗಿ ಕುಣಿತ ಇಂದಿಗೂ ನಡೆದುಕೊಂಡು ಬಂದಿದೆ. ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲ ಹಾಗೂ ಕಾರವಾರ ಪ್ರದೇಶದ ಕಿರುಗುಡ್ಡ, ಕುರುಚಲು ಕಾಡು, ನದಿಯ ತಿರುವು ಮತ್ತು ಸಮುದ್ರ ಕಿನಾರೆಗಳಲ್ಲಿ ಮನೆಗಳ ಸಮೂಹ ಕೊಪ್ಪಗಳಲ್ಲಿ ಈ ಜನ ವಾಸವಾಗಿದ್ದಾರೆ.

KWR HOLI 3

ವಿಭಿನ್ನ ವೇಷಭೂಷಣ: ಶೀರೋಭೂಷಣವನ್ನು ಬಣ್ಣ ಬಣ್ಣದ ಕಾಗದ ಚೆಂಡುಗಳಿಂದ ತಯಾರಿಸಿರುತ್ತಾರೆ. ಸೀರೆ ಮೊಣಕಾಲಿನವರೆಗೆ ಬರುವಂತೆ ನೆರಿಗೆಯಾಗಿ ಉಟ್ಟು ಇಲ್ಲವೆ ಪೈಜಾಮ ತೊಟ್ಟು ಕೆಂಪು ಹಳದಿ ಬಣ್ಣದ ನಿಲುವಂಗಿ ಹಾಕಿ ಮೇಲೆ ಜಾಕಿಟು ಧರಿಸಿ ಸೊಂಟಕ್ಕೆ ತುಂಡು ವಸ್ತ್ರಗಳನ್ನು ಕಟ್ಟಿಕೊಳ್ಳುತ್ತಾರೆ. ತಲೆಗೆ ರುಮಾಲು ಸುತ್ತಿ ತುರಾಯಿಯನ್ನು ಪೂಜಿಸಿ ಕಟ್ಟಿಕೊಳ್ಳುತ್ತಾರೆ. ತುರಾಯಿಯ ಕೆಳಗೆ ಹಣೆಯ ಮೇಲೆ ಕನ್ನಡಿಯ ಚೂರುಗಳನ್ನು ಒಪ್ಪವಾಗಿ ಕೂಡಿಸಿದ ಕಮಾನಿನಾಕಾರದ ಮುಂಗಟ್ಟು ಕಟ್ಟಿಕೊಂಡು ಮುತ್ತಿನ ಸರಗಳನ್ನು ಇಳಿಬಿಡುತ್ತಾರೆ. ಇದು ಕರಾವಳಿ ಭಾಗದಲ್ಲಿ ಮಾತ್ರ ಕಾಣಸಿಗುವ ವಿಶೇಷ ವೇಷಭೂಷಣವಾಗಿದೆ. ಒಟ್ಟಿನಲ್ಲಿ ಈ ಬಾರಿ ಸುಗ್ಗಿ ಕುಣಿತದೊಂದಿಗೆ ಹೋಳಿಯ ರಂಗು ಕರಾವಳಿಯಲ್ಲಿ ಕಳೆಕಟ್ಟಿದೆ.

KWR HOLI 4

KWR HOLI 5

 

Share This Article
Leave a Comment

Leave a Reply

Your email address will not be published. Required fields are marked *