Connect with us

Bengaluru City

ರಾಜಕೀಯ- ಇಂಗ್ಲಿಷ್ ಬಳಕೆ, ರಂಗನಾಯಕನಿಗೆ ಕರಾವಳಿಯಿಂದ ಆರಂಭಿಕ ವಿರೋಧ

Published

on

ಉಡುಪಿ: ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ದ ಜೋಡಿ ‘ರಂಗನಾಯಕ’ನಾಗಿ ರೀ ಎಂಟ್ರಿ ಕೊಡುತ್ತಿದ್ದಾರೆ. 2020ರಲ್ಲಿ ಗುರುಪ್ರಸಾದ್ ಡೈರೆಕ್ಷನ್, ಜಗ್ಗೇಶ್ ಅಭಿನಯದ ಚಿತ್ರ ರಿಲೀಸ್ ಆಗಲಿದ್ದು, ಟೀಸರ್ ಗದ್ದಲ ಎಬ್ಬಿಸಿದೆ. ಯಕ್ಷಗಾನಕ್ಕೆ ಅಪಮಾನ ಮಾಡಿದ್ದಾರೆ ಎಂಬುದು ಕರಾವಳಿಯ ಯಕ್ಷ ಪ್ರೇಮಿಗಳ ಆರೋಪ.

ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಮೂಲಕ ಸೂಪರ್ ಹಿಟ್ ಜೋಡಿಯಾಗಿರುವ ಜಗ್ಗೇಶ್ ಮತ್ತು ಗುರುಪ್ರಸಾದ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರಕ್ಕೆ ರಂಗನಾಯಕ ಎನ್ನುವ ನಾಮಕರಣವಾಗಿದೆ. ಟೀಸರ್ ಬಿಡುಗಡೆಯಾಗಿ ಬಹಳ ಪ್ರಚಾರ ಗಿಟ್ಟಿಸಿದೆ. ಹೊಸ ಚಿತ್ರ ರಂಗನಾಯಕದ ಟೀಸರ್ ಯಕ್ಷಗಾನ ಅಭಿಮಾನಿಗಳ ಮತ್ತು ಕಲಾವಿದರ ಕಣ್ಣು ಕೆಂಪು ಮಾಡಿದೆ. ಯಕ್ಷಗಾನ ಶೈಲಿಯ ಟೀಸರಿನಲ್ಲಿ ಇಂಗ್ಲಿಷ್ ಮಿಕ್ಸ್ ಆಗಿದೆ. ಆರಂಭದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚಿಹ್ನೆ ಬಳಸಲಾಗಿದ್ದು, ಯಕ್ಷಗಾನವನ್ನು ಅಪಭ್ರಂಶ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಗವತಿಕೆಯ ಹಲವೆಡೆ ಇಂಗ್ಲಿಷ್ ಶಬ್ದ ಪ್ರಯೋಗ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಹಳ ವಿರೋಧಿ ಚರ್ಚೆಯಾಗುತ್ತಿದೆ. ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಯಕ್ಷಗಾನ ಪ್ರೇಮಿಗಳು, ಪ್ರಸಂಗಕರ್ತರು, ಹಿಮ್ಮೇಳ ಮುಮ್ಮೇಳ ಕಲಾವಿದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನಕ್ಕೆ ತನ್ನದೇ ಆದ ಮಹತ್ವ ಇದೆ. ದೇವಸ್ಥಾನಗಳ ಮೂಲಕ ಮೇಳಗಳನ್ನು ಕಟ್ಟಿ ಪುರಾಣದ ಕಥೆಗಳನ್ನು ಮತ್ತು ಸಾಮಾಜಿಕ ಕಾಳಜಿಯಿರುವ ಪ್ರಸಂಗಗಳನ್ನು ಮೇಳಗಳು ಪ್ರದರ್ಶನ ಮಾಡುತ್ತದೆ. ಆದರೆ ರಂಗನಾಯಕ ಚಿತ್ರ ತಂಡ ಎಲ್ಲಾ ಸಂಪ್ರದಾಯ ಚೌಕಟ್ಟನ್ನು ಗಾಳಿಗೆ ತೂರಿದೆ ಎಂದು ಯಕ್ಷಾರಾಧಕರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹವ್ಯಾಸಿ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ, ಯಕ್ಷಗಾನದ ಪದ್ಯದಲ್ಲಿ ಆಂಗ್ಲ ಪದ ಬಳಕೆ ಮತ್ತು ರಾಜಕೀಯ ತೂರಿಕೊಂಡಿರುವುದಕ್ಕೆ ನಮ್ಮ ಆಕ್ಷೇಪ. ಕಾಂಗ್ರೆಸ್, ಬಿಜೆಪಿಯ ಚಿಹ್ನೆ ಬಳಸಿರುವುದು ಸರಿಯಲ್ಲ. ಯಕ್ಷಗಾನ ದೇವರ ಹೆಸರಿನಲ್ಲಿ, ನಂಬಿಕೆಯ ಆಧಾರದಲ್ಲಿ ನಡೆಯುತ್ತಿದೆ. ಹರಕೆಯ ರೂಪದಲ್ಲಿ ಆಟ ಆಡಿಸುವವರು ಯಕ್ಷಗಾನವನ್ನು ದೇವರ ಸೇವೆಯಂತೆ ಕಾಣುತ್ತಾರೆ. ಹೀಗಿರುವಾಗ ಜನರ ಭಾವನೆಗಳ, ನಂಬಿಕೆ ಶ್ರದ್ಧೆಯ ಜೊತೆ ಆಟವಾಡುವುದು ಸರಿಯಲ್ಲ ಎಂದು ಹೇಳಿದರು.

ಮೋದಿ ಪ್ರಧಾನಿಯಾದರೆ ಯಕ್ಷಗಾನ ಮಾಡಿಸುವ ಹರಕೆ ಹೊತ್ತಿರುವ ಉದಾಹರಣೆ ಕರಾವಳಿಯಲ್ಲಿದೆ. ಯಕ್ಷಗಾನ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ತರ್ಜುಮೆಗೊಂಡು ಪ್ರದರ್ಶನವಾಗಿದ್ದೂ ಇದೆ. ಇಷ್ಟಕ್ಕೂ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಾಡಿನ ಗಂಡುಕಲೆಗೆ ಅಪಮಾನ ಮಾಡಬೇಡಿ ಎಂದು ಚಿತ್ರದ ಡೈರೆಕ್ಟರ್ ಗುರುಪ್ರಸಾದ್ ಅವರಲ್ಲಿ ಕರಾವಳಿಯ ಯಕ್ಷಗಾನ ಕಲಾವಿದರು ವಿನಂತಿ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *