ನವದೆಹಲಿ: ಕಾವೇರಿ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮಧ್ಯಪ್ರವೇಶ ಮಾಡಿ, ಮಳೆ ಕೊರತೆ ವರ್ಷದಲ್ಲಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸಬೇಕು. ಕಾವೇರಿ ಕಣಿವೆಯ 4 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (KARAVE) ಪ್ರತಿಭಟನೆ ನಡೆಸಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯದ ವಿವಿಧ ಭಾಗದಿಂದ ಸೇರಿದ ನೂರಾರು ಕಾರ್ಯಕರ್ತರು ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು.
ಪ್ರತಿಭಟನೆಗೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಸಭೆ ನಡೆಸಿದ ನಾರಾಯಣಗೌಡ ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಗ್ಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡಾ ಭಾಗಿಯಾಗಿದ್ದರು. ಕರ್ನಾಟಕ ತಮಿಳುನಾಡು ಒಟ್ಟಾಗಿ ಬಂದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಭರವಸೆ ನೀಡಿದರು.
ಬಳಿಕ ಜಂತರ್ ಮಂತರ್‌ಗೆ ತೆರಳಿದ ನಾರಾಯಣಗೌಡ ಕಾರ್ಯಕರ್ತರೊಂದಿಗೆ ಕುಳಿತು ಸಭೆ ನಡೆಸಿದರು. ಕರ್ನಾಟಕದ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆಹರಿಸಬೇಕು. ಭವಿಷ್ಯದ ದೃಷ್ಠಿಯಿಂದ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಮತ್ತು ಸಂಕಷ್ಟ ಸೂತ್ರ ರಚಿಸುವ ಮೂಲಕ ನೀರು ಹಂಚಿಕೆ ಸುಗಮಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂದು ಕಾವೇರಿಗಾಗಿ ಕರ್ನಾಟಕದಿಂದ ದೆಹಲಿಗೆ ಬಂದಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಯಿಂದ ನಮ್ಮ ಕಾರ್ಯಕರ್ತರು ಬಂದಿದ್ದಾರೆ. ನಾನು ಇವತ್ತಿನ ನೀರಿನ ಪರಿಸ್ಥಿತಿ, ಕಾವೇರಿ ಪರಿಸ್ಥಿತಿ ಮಾತಾಡೋಕೆ ಬಂದಿಲ್ಲ, ನಾನು ಪ್ರಧಾನ ಮಂತ್ರಿಗಳಿಗೆ, ಪ್ರಹ್ಲಾದ್ ಜೋಶಿ ಅವರಿಗೆ ಹಾಗೂ ನಮ್ಮ ನೀರಾವರಿ ಸಚಿವರ ಬಳಿ ಮಾತನಾಡಲು ಬಂದಿದ್ದೇನೆ ಎಂದು ತಿಳಿಸಿದರು.
ನಮಗೆ ಸಂಕಷ್ಟ ಸೂತ್ರ ಬೇಕು ಅನ್ನೋದರ ಬಗ್ಗೆ ಮಾತಾಡಲು ಬಂದಿದ್ದೇನೆ. ನಮ್ಮ ಬಳಿ ನೀರು ಇದ್ದಾಗ ನಾವು ನೀರು ಕೊಡುತ್ತೇವೆ. ಕರ್ನಾಟಕ-ತಮಿಳುನಾಡು ಅಣ್ಣ-ತಮ್ಮ ತರ ಬದುಕ್ತಾ ಇದೆ. ನಾವು ನೀರು ಕೊಡ್ತೇವೆ. ಆದರೆ ನಮ್ಮ ಬಳಿ ನೀರು ಇಲ್ಲ ಅಂದಾಗ ಏನು ಮಾಡಬೇಕು? ಮಾನ್ಯ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಿ, 4 ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಬೇಕು ಎಂದರು.
ಹಿಂದೆ ಇಂತಹ ಸಂಕಷ್ಟ ಬಂದಾಗ ಇಂದಿರಾ ಗಾಂಧಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿದರು. 2003ರಲ್ಲಿ ಅನಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಾಜಪೇಯಿ ಅವರನ್ನು ನಾನು ಭೇಟಿ ಮಾಡಿದ್ದೆ. ಅವರು ಆವತ್ತು ಸಂಕಷ್ಟ ಸೂತ್ರಕ್ಕೆ ಒತ್ತಡ ಹಾಕಿದ್ದರು. ಇದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕುವಂತಹ ಕೆಲಸವನ್ನು ಮಾನ್ಯ ಮೋದಿಯವರು ಮಾಡಲಿ. ಪ್ರಪಂಚದ ಅನೇಕ ರಾಷ್ಟ್ರಗಳನ್ನು ಒಗ್ಗೂಡಿಸುವ ಕೆಲಸ ಮಾಡುವ ಮೋದಿಯವರು ನಮ್ಮ ದೇಶದ ಒಳಗೆ ಇರುವ ಕರ್ನಾಟಕ-ತಮಿಳುನಾಡು ಮುಖ್ಯಮಂತ್ರಿಗಳನ್ನು ಕರೆದು ಶಾಶ್ವತ ಪರಿಹಾರ ನೀಡಬೇಕು ಎಂದು ಹೇಳಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದರೆ ಸುಮಾರು 60 ಟಿಎಂಸಿ ಬೆಂಗಳೂರು ಜನರಿಗೆ ಕುಡಿಯುವ ನೀರಿಗೆ ಬಳಸಿಕೊಳ್ಳಬಹುದು. ತಮಿಳುನಾಡಿಗೆ ನೀರು ಕೊಡಲು ಸಹ ಅನುಕೂಲ ಆಗುತ್ತದೆ. ಎರಡೂ ರಾಜ್ಯ ಒಂದಾಗಿ ಬರುವುದಾದರೆ ಮೇಕೆದಾಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖವತ್ ಸಹ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿಕೆಶಿ ಲ್ಯಾಂಡ್ – ಸ್ವಾಗತಕ್ಕೆ ಬಾರದ ಶಾಸಕರು, ಸಚಿವರು
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ, ನಿಮ್ಮ ಇಂಡಿಯಾ ಒಕ್ಕೂಟದಲ್ಲಿರುವ ಸ್ಟಾಲಿನ್ ಜೊತೆಗೆ ಮಾತನಾಡಿದರೆ ಕಾವೇರಿ ವಿಚಾರವಾಗಿ ಶಾಶ್ವತ ಪರಿಹಾರ ಸಿಗಲಿದೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿಸುತ್ತೇನೆ ಅಂತ ಜೋಶಿ ಅವರು ಹೇಳಿದ್ದಾರೆ. ಹೀಗಾಗಿ ನಾನು ಇವತ್ತು ದೆಹಲಿಯಲ್ಲೇ ಉಳಿಯುತ್ತೇನೆ. ನಾಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾವೇರಿ ಜಲಸಂಕಷ್ಟ ಪರಿಹರಿಸುವಂತೆ ಕರವೇ ನಾರಾಯಣಗೌಡರ ನೇತೃತ್ವದಲ್ಲಿ ಹೋರಾಟಗಾರರು ದೆಹಲಿಗೆ ಬಂದಿದ್ದಾರೆ. ಜಲಶಕ್ತಿ ಮಂತ್ರಿಗಳನ್ನು ಭೇಟಿಯಾಗಬೇಕು ಎಂದರು. ಆ ವ್ಯವಸ್ಥೆಯನ್ನು ನಮ್ಮ ನಿವಾಸದಲ್ಲಿ ಮಾಡಿದ್ದೇನೆ. ಸಂಕಷ್ಟ ಸೂತ್ರ ಹಾಗೂ ಮೇಕೆದಾಟು ವಿಚಾರ ಅವರು ಪ್ರಸ್ತಾಪಿಸಿದ್ದಾರೆ. ಸಂಕಷ್ಟ ಸೂತ್ರ ಕುರಿತು ಅಗತ್ಯ ಮಾಹಿತಿ ತೀರ ಇತ್ತೀಚೆಗಷ್ಟೆ ಕರ್ನಾಟಕ ಸರ್ಕಾರ ಮಾಹಿತಿ ಒದಗಿಸಿದೆ. ಈ ಮಾಹಿತಿ ಜಲಶಕ್ತಿ ಸಚಿವರು ನಮ್ಮ ಜೊತೆ ಈಗ ಹಂಚಿಕೊಂಡಿದ್ದಾರೆ. ಮೊದಲು ಸೌಹಾರ್ದ ಮಾತುಕತೆ ತಮಿಳುನಾಡು ಮತ್ತು ಕರ್ನಾಟಕ ಆರಂಭ ಮಾಡಬೇಕು. ಡಿಎಂಕೆ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಉತ್ತಮ ಸಂಬಂಧ ಇದೆ. ಅವರು ಮಾತುಕತೆ ಶುರು ಮಾಡಲಿ. ಈ ಹಿಂದೆ ಗಡ್ಕರಿಯವರು ಇದ್ದಾಗ ಒಮ್ಮೆ ವೇದಿಕೆ ಸೃಷ್ಟಿ ಮಾಡಲಾಗಿತ್ತು. ಆದರೆ ಅದು ಹಲವು ಕಾರಣಗಳಿಗೆ ಮುಂದುವರಿಯಲಿಲ್ಲ. ಈಗ ಆ ಪ್ರಯತ್ನ ಮತ್ತೆ ಮಾಡಬೇಕು ಎಂದರು. ಇದನ್ನೂ ಓದಿ: ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್
Web Stories