ಬೆಂಗಳೂರು: ಮೆಟ್ರೋ ನಾಮಫಲಕಗಳ ಹಿಂದಿ ಬರವಣಿಗೆ ಮೇಲೆ ಮಸಿ ಬಳಿದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ನಾರಾಯಣಗೌಡರ ಜೊತೆ ಕರವೆಯ 20ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೂ ಜಾಮೀನು ರಹಿತ ಕೇಸ್ ದಾಖಲಿಸಿದ್ದಾರೆ. ಕರವೇ ಅಧ್ಯಕ್ಷ ನಾರಾಯಣಗೌಡ ಕೋಮುವಾದಿ, ಗಲಭೆ ಸೃಷ್ಟಿಕರ್ತ, ನಾರಾಯಣಗೌಡ ನಾಪತ್ತೆಯಾಗಿದ್ದಾರೆ ಎಂದು ಎಫ್‍ಐಆರ್ ನಲ್ಲಿ ಪೊಲೀಸರು ನಮೂದಿಸಿದ್ದಾರೆ.
ಆದ್ರೆ ನಾರಾಯಣಗೌಡರು ಕಣ್ಣಮುಂದೆ ಓಡಾಡಿಕೊಂಡಿದ್ದರೂ ನಾಪತ್ತೆ ಕೇಸ್ ದಾಖಲಿಸಿದ್ದಾದ್ರು ಯಾಕೆ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಈ ಕುರಿತಂತೆ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ಕೋಮುವಾದಿ ಎನ್ನುವಂತಹದ ಯಾವುದೇ ಕೆಲಸ ನಾನು ಮಾಡಿಲ್ಲ, ಕರವೇ ಕಾರ್ಯಕರ್ತರೂ ಮಾಡಿಲ್ಲ. ನನ್ನ ಭಾಷೆಯ ಮೇಲಿನ ಅಭಿಮಾನ, ನನ್ನ ಭಾಷೆ ಮೇಲೆ ಇನ್ನೊಂದು ಭಾಷೆ ದಬ್ಬಾಳಿಕೆ ಮಾಡಬಾರದು ಅನ್ನೋ ಕಾರಣಕ್ಕೆ ಕರವೇ 2011ರಿಂದಲೂ ಹಿಂದಿ ಹೇರಿಕೆ ವಿರೋಧಿಸಿ ಹೋರಾಟ ಮಡಿಕೊಂಡು ಬಂದಿದೆ. ನಿನ್ನೆ ಆಗಿದ್ದೂ ಅಷ್ಟೆ. ಒಂದು ತಿಂಗಳಿನಿಂದ ಗಡುವು ಕೊಟ್ಟಿದ್ದೆವು. ಆ ಗಡುವಿನೊಳಗೆ ಹಿಂದಿ ನಾಮಫಲಕ ತೆರವುಗೊಳಿಸದಿದ್ರೆ ಮಸಿ ಬಳಿಯಬೇಕೆಂದು ತೀರ್ಮಾನಿಸಿದ್ದೆವು. ತೆರವುಗೊಳಿಸದ ಕಾರಣ ಹಿಂದಿ ನಾಮಫಲಕಗಳಿಗೆ ಮಸಿ ಬಳಿಯಲಾಗಿದೆ. ಅದು ಸಾಂಕೇತಿಕ ಪ್ರತಿಭಟನೆ. ಅಲ್ಲಿ ಕೋಮುಗಲಭೆ ಪ್ರಶ್ನೆ ಬರೋದಿಲ್ಲ. ಯಾವುದೇ ಆಸ್ತಿ ಹಾನಿಯಾಗಿಲ್ಲ. ಯಾರ ಮೇಲೂ ಹಲ್ಲೆ ಮಾಡಿಲ್ಲ. ಯಾರನ್ನೂ ದೋಚಿಲ್ಲ ಅಂದ್ರು. ಕರವೇಯನ್ನ ಹತ್ತಿಕ್ಕುವುದಕ್ಕೋಸ್ಕರ ಈ ರೀತಿ ಪ್ರಕರಣ ದಾಖಲಿಸಿದ್ದಾರೆ ಅಂತ ಹೇಳಿದ್ರು.
ಕೇಸ್ ವಿಚಾರ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಪ್ರವೀಣ್ ಸೂದ್ ಹೇಳಿಕೆ ನೀಡಿದ್ದು, ವೈಯಕ್ತಿಕವಾಗಿ ನಾವು ಯಾರ ಮೇಲೂ ಕೇಸ್ ಹಾಕಿಲ್ಲ. ನನ್ನ ಜನ್ಮ ಭೂಮಿ ಬೇರೆ; ಆದ್ರೆ ನನ್ನ ಕರ್ಮ ಭೂಮಿ ಕರ್ನಾಟಕ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು, ಕನ್ನಡಕ್ಕೆ ಆದ್ಯತೆ ಸಿಗಬೇಕು. ಕಾನೂನು ಚೌಕಟ್ಟಿನಲ್ಲಿ ಯಾರೇ ಹೋರಾಟ ಮಾಡಿದ್ರೂ ನಾವು ಸಹಕಾರ ಕೊಡ್ತೀವಿ. ಕಾನೂನು ಉಲ್ಲಂಘಿಸಿದ್ರೆ ನಾವು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.