ಗದಗ: ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಡಿದ ಅಮಲಿನಲ್ಲಿ ಕರವೇ ಜಿಲ್ಲಾಧ್ಯಕ್ಷ, ಬಸ್ ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ತೋರಿರುವ ಘಟನೆ ಗದಗ ತಾಲೂಕಿನ ಹೊಂಬಳ ಬಳಿ ನಡೆದಿದೆ.
ಕರವೇ ಸ್ವಾಭಿಮಾನಿ ಬಣದ ಗದಗ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಚೌಡಣ್ಣವರ್, ಕಂಡಕ್ಟರ್ ಪ್ರಕಾಶ್ ಅವರ ಮೇಲೆ ಹಲ್ಲೆ ಮಾಡಿ ಅವರಲ್ಲಿದ್ದ ಹಣ ದೋಚಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
Advertisement
Advertisement
ರಾತ್ರಿ ವೇಳೆ ಗದಗದಿಂದ ಹೊಂಬಳ ಮಾರ್ಗವಾಗಿ ನವಲಗುಂದಕ್ಕೆ ಬಸ್ ಹೊರಟಿತ್ತು. ಹೊಂಬಳ ಗ್ರಾಮದ ಮೊದಲನೇ ಸ್ಟಾಪ್ ನಲ್ಲಿ ಕರವೇ ಮುತ್ತಣ, ಬಸ್ ಹತ್ತಿ ಎರಡನೇ ಸ್ಟಾಪ್‍ಗೆ ಇಳಿಯಲು ಮುಂದಾಗಿದ್ದಾನೆ. ಈ ಸ್ಟಾಪ್‍ನಿಂದ ಮುಂದಿನ ಸ್ಟಾಪ್ ಗೆ ಇಳಿಯೋಕೆ ಇದು ಸಿಟಿ ಬಸ್ ಅಲ್ಲ. ಇದಕ್ಕೆ ಟಿಕೆಟ್ ಕೊಡೋಕ್ಕಾಗಲ್ಲ ಅಂತ ಕಂಡಕ್ಟರ್ ಹೇಳಿದ್ದಾರೆ. ಊರು ಬರುವ ಮುಂಚಿತವಾಗಿ ಟಿಕೆಟ್ ಕ್ಲೋಸ್ ಮಾಡಲಾಗಿದೆ. ಮುಂದೆ ಚೆಕ್ ನವರು ಬಂದರೆ ನಮಗೆ ಸಮಸ್ಯೆಯಾಗುತ್ತೆ ಎಂದಿದಕ್ಕೆ, ನಾನು ಕರವೇ ಅಧ್ಯಕ್ಷ, ಯಾರೂ ನನ್ನ ಟಿಕೆಟ್ ಕೇಳಲ್ಲ. ನನ್ನನ್ನೇ ಟಿಕೆಟ್ ಕೇಳ್ತೀಯಾ? ಟಿಕೆಟ್ ತೆಗೆದುಕೊಳ್ಳಲ್ಲ, ಹಣವೂ ಕೊಡಲ್ಲ ಎಂದು ದರ್ಪ ತೋರಿ ಮನಬಂದಂತೆ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾನೆ ಅಂತ ನಿರ್ವಾಹಕನ ಆರೋಪಿಸಿದ್ದಾರೆ.
Advertisement
Advertisement
ಚಾಲಕ ಸಿದ್ದನಗೌಡ ಹಾಗೂ ಪ್ರಯಾಣಿಕರು ಇವರಿಬ್ಬರ ಜಗಳ ಬಿಡಿಸಿದ್ದಾರೆ. ಈ ಬಗ್ಗೆ ಕಂಪ್ಲೇಂಟ್ ಏನಾದ್ರೂ ಕೊಟ್ರೆ ಹುಷಾರ್ ಎಂದು ಬೆದರಿಕೆ ಕೂಡಾ ಹಾಕಿದ್ದಾನೆ ಎನ್ನಲಾಗಿದೆ. ಗಲಾಟೆ ವೇಳೆ ನಿರ್ವಾಹಕನ ಶರ್ಟ್ ಹರಿದಿದೆ. ಜೇಬ್ ನಲ್ಲಿದ್ದ ಹಣ ಇಲ್ಲದಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ನಿರ್ವಾಹಕ ಪ್ರಕಾಶ್ ಮಾಧ್ಯಮದ ಎದುರು ಕಣ್ಣಿರು ಹಾಕಿದ್ದಾರೆ.
ಸದ್ಯ ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರವೇ ಸ್ವಾಭಿಮಾನಿ ಅಧ್ಯಕ್ಷ ಮುತ್ತಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv