ಬಳ್ಳಾರಿ: ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆ ಮಾಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಳ್ಳಾರಿ ನಗರದ ರಾಧಿಕಾ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿದರು.
ಇಂದು ರಾಧಿಕಾ ಚಿತ್ರಮಂದಿರದಲ್ಲಿ ಬಾಹುಬಲಿ-2ರ ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಟ್ರೇಲರ್ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ನಟ ಸತ್ಯರಾಜ್ ಕರ್ನಾಟಕದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಟ್ರೇಲರ್ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಪ್ರತಿಭಟಿಸಿದರು.
ಕರವೇ ಕಾರ್ಯಕರ್ತರು ಚಿತ್ರಮಂದಿರದ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಕೆಲ ಕಾಲ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಪೊಲೀಸರ ಸೂಚನೆ ಮೇರೆಗೆ ಚಿತ್ರಮಂದಿರ ಮಾಲೀಕರು ಟ್ರೇಲರ್ ಬಿಡುಗಡೆ ಮುಂದೂಡಿಕೆ ಮಾಡಿದ್ದಾರೆ.
ಇಂದು ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ಟ್ರೇಲರ್ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಇಂದು ಬೆಳಗ್ಗೆ ಬಿಡುಗಡೆಯಾದ ಕೇವಲ 5 ಗಂಟೆಯಲ್ಲಿ 7 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಸಿನಿಮಾ ಏಪ್ರಿಲ್ 28 ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ.
ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ?… ಬಾಹುಬಲಿ ಟ್ರೇಲರ್ ನೋಡಿ…