ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ್ದು, ಮಹಾರಾಷ್ಟ್ರ ನೋಂದಣಿ ಲಾರಿಗಳ ಕಲ್ಲು ತೂರಾಟ ನಡೆಸಿ ನಂಬರ್ ಪ್ಲೇಟ್ ಕಿತ್ತು ಹಾಕಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಲ್ಲು ತೂರಾಟ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಬಳಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೆಳಗಾವಿ (Belagavi) ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಬೆಳಗಾವಿ ನಗರ ಪ್ರವೇಶಕ್ಕೂ ಮೊದಲೇ ಟೋಲ್ ನಾಕಾ ಬಳಿಯೇ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದರು.
Advertisement
Advertisement
ಈ ವೇಳೆ ಹಿರೇಬಾಗೆವಾಡಿ ಟೋಲ್ ನಾಕಾ ಬಳಿಯಲ್ಲಿ ಮಹಾರಾಷ್ಟ್ರ ನೊಂದಣಿ ಇರುವ ಲಾರಿಗಳಿಗೆ ಮಸಿ ಬಳಿದು, ಗಾಜುಗಳನ್ನು ಒಡೆದರು. ಪುಣಾದಿಂದ ಬೆಂಗಳೂರತ್ತ ಹೊರಟ್ಟಿದ್ದ ಲಾರಿಗಳನ್ನು ತಡೆದು ಮಹಾರಾಷ್ಟ್ರ (Maharashtra) ನೋಂದಣಿಯ ಹತ್ತಕ್ಕೂ ಅಧಿಕ ಲಾರಿಗಳ ನಂಬರ್ ಪ್ಲೇಟ್‍ಗೆ ಒದ್ದು ಕಿತ್ತು ಹಾಕಿ ಮಸಿ ಬಳಿದರು. ಕೂಡಲೇ ಹೋರಾಟಗಾರರನ್ನು ಎಳೆದ ಪೊಲೀಸರು ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Advertisement
ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬೆಳಗಾವಿ ಪೊಲೀಸರು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಪೊಲೀಸ್ ವಾಹನವೇರಿದ ಕರವೇ ಕಾರ್ಯಕರ್ತರು ರಕ್ತವನ್ನು ಚೆಲ್ಲುತ್ತೇವೆ ನ್ಯಾಯವನ್ನು ಕೇಳುತ್ತೇವೆ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಹಾಗೂ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಕೆಲವರು ರಸ್ತೆ ಮೇಲೆಯೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದರೆ ಇನ್ನೂ ಕೆಲವರು ಪೊಲೀಸ್ ವಾಹನವೇರಿ ಕೈಯಲ್ಲಿ ಬಾವುಟ ಹಿಡಿದು ಘೋಷಣೆ ಹಾಕುತ್ತಿದ್ದರು. ಆಗ ಕರವೇ ಕಾರ್ಯಕರ್ತೆಯರನ್ನು ಬಸ್ ಮೇಲಿಂದ ಕೆಳಗೆ ಇಳಿಸಲು ಪೊಲೀಸರ ಹರಸಾಹಸಪಟ್ಟರು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ (Narayan Gowda) ಮಾತನಾಡಿ, ಇವತ್ತು ಪೊಲೀಸರು ನಮ್ಮನ್ನ ಅರೆಸ್ಟ್ ಮಾಡಿದ್ದಾರೆ. ಇವತ್ತು ಒಂದಿನ ನಮ್ಮನ್ನು ತಡೆಯಬಹುದು. ಆದರೆ, ಇದು ಒಂದು ದಿನದ ಚಳುವಳಿ ಅಲ್ಲ. ಕರವೇ ಕಾರ್ಯಕರ್ತರನ್ನ ಬಂಧಿಸಿರುವುದನ್ನ ಧಿಕ್ಕರಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಇವತ್ತು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ನಮ್ಮ ಚಳುವಳಿ ಹತ್ತಿಕ್ಕಿದರೆ ನಾವು ನಮ್ಮ ಹೋರಾಟ ಇಷ್ಟಕ್ಕೆ ಬಿಡಲ್ಲ. ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ. ಜೊತೆಗೆ ಅಧಿವೇಶನದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ
ಬಳಿಕ ಮಾತನಾಡಿದ ಬೆಳಗಾವಿ ಜಿಲ್ಲಾ ವೇದಿಕೆಯ ಅಧ್ಯಕ್ಷ ದೀಪಕ ಗುಡಗನಟ್ಟಿ, ಗಡಿ ವಿವಾದ ಕುರಿತು ಮಹಾರಾಷ್ಟ್ರ ಸುಪ್ರೀಂ ಕೋರ್ಟ್‍ನಲ್ಲಿ ದಾವೆ ಹೂಡಿದೆ. ಈ ಮಧ್ಯೆ ಅಲ್ಲಿನ ಜನಪ್ರತಿನಿಧಿಗಳು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತ ಗಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ: ಬೊಮ್ಮಾಯಿ