Connect with us

`ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

`ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

ಉಡುಪಿ: ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

ಕುಂದಾಪುರ ತಾಲೂಕಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರೈ ಆಯ್ಕೆಯನ್ನು ವಿರೋಧ ಮಾಡೋದು ಸರಿಯಲ್ಲ. ಕೋಟತಟ್ಟು ಗ್ರಾ.ಪಂ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಕೊಡುವ ಪ್ರಶಸ್ತಿ ಇದು. ಕಳೆದ 13 ವರ್ಷಗಳಿಂದ ಕೊಡುತ್ತಿರುವ ಪ್ರಶಸ್ತಿ ಈ ಬಾರಿ ನಟ ಪ್ರಕಾಶ್ ರೈಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ರು.

ಪ್ರಕಾಶ್ ರೈ ಈ ಪ್ರಶಸ್ತಿಗೆ ನಿಜವಾಗಿಯೂ ಅರ್ಹರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವೈಯುಕ್ತಿಕ ಹೇಳಿಕೆಗೂ ಪ್ರಶಸ್ತಿಗೂ ಸಂಬಂಧವಿಲ್ಲ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಅವರು ಹೇಳಿದ್ರು.

ಪ್ರಶಸ್ತಿ ಆಯ್ಕೆಗೆ ಐದು ಮಂದಿ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಆಯ್ಕೆ ಮಂಡಳಿ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸಾಧಕರಿಗೆ ನೀಡುತ್ತಾ ಬಂದಂತೆಯೇ ಈ ಬಾರಿ ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ. ಕಾರಂತರ ಹೆಸರಿಗೆ ಚ್ಯುತಿ ಬರಬಾರದು. ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ರಾಜಕೀಯ ಬೇಡ ಅಂದ್ರು.

ಈ ಹಿಂದೆ ಕಾರಂತ ಪ್ರಶಸ್ತಿಗೆ ಪಾತ್ರರಾದವರು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪತ್ರಕರ್ತ ರವಿ ಬೆಳಗೆರೆ, ಸಾಹಿತಿ ಜಯಂತ್ ಕಾಯ್ಕಿಣಿ, ದಿ. ರಾಮಚಂದ್ರ ಚಿಟ್ಟಾಣಿ, ಡಾ. ಬಿ.ಎಮ್ ಹೆಗ್ಡೆ, ಸಾಲುಮರದ ತಿಮ್ಮಕ್ಕ, ಡಾ. ಎಂ ಮೋಹನ್ ಆಳ್ವ, ನಾಟಕಕಾರ ಸದಾನಂದ ಸುವರ್ಣ, ಬಿ. ಜಯಶ್ರೀ, ಗಿರೀಶ್ ಕಾಸರವಳ್ಳಿ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಕೆ.ಆರ್ ಹಂದೆ ಇವರುಗಳಿಗೆ ಕಾರಂತ ಹುಟ್ಟೂರ ಸನ್ಮಾನ ಲಭಿಸಿತ್ತು. ಈ ಬಾರಿ ನಟ ಪ್ರಕಾಶ್ ರೈ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.

 

Advertisement
Advertisement