ಗದಗ: ಜಾತ್ರೆ ಎಂದ ತಕ್ಷಣ ಬೆಂಡು, ಬೆತ್ತಾಸು, ಕಬ್ಬು, ಉತ್ತತ್ತಿ, ಬಾಳೆಹಣ್ಣು ಎಸೆದು ತೇರು ಎಳೆದು ಸಂಭ್ರಮಿಸುತ್ತಾರೆ. ಆದರೆ ಗದಗ ಜಿಲ್ಲೆಯ ಕಪೋತಗಿರಿಯಲ್ಲಿ ನಡೆಯುವ ಜಾತ್ರೆನೇ ಡಿಫರೆಂಟ್ ಆಗಿದೆ. ಅಲ್ಲಿ ದೇವರಿಗೆ ಪೇರಳೆ ಹಣ್ಣು (ಸೀಬೆ ಹಣ್ಣು) ತಿಕ್ಕುವುದೇ ಒಂದು ವೈಶಿಷ್ಟ್ಯತೆ.
ಗದಗ ಜಿಲ್ಲೆ ಡೋಣಿ ಬಳಿಯ ಕಪೋತಗಿರಿ ಗಾಳಿಗುಂಡಿ ಬಸವೇಶ್ವರ ಸನ್ನಿದಾನದಲ್ಲಿ ಶ್ರಾವಣಮಾಸದ ಮೂರನೇ ಗುರುವಾರ ದಿನ ಈ ಜಾತ್ರೆ ವೈಭವದಿಂದ ನಡೆಯುತ್ತದೆ. ಮಾಡಿದ ಪಾಪ, ಕರ್ಮಗಳು ದೂರವಾಗಲೆಂದು ಬಸವಣ್ಣನ ವಿಗ್ರಹಕ್ಕೆ ಪೇರಳೆ ಹಣ್ಣು ತಿಕ್ಕುತ್ತಾರೆ. ಇದು ಬೇಡಿದ ವರಗಳನ್ನ ನೀಡುವ ದೇವರಾಗಿರುವುದರಿಂದ, ಇಲ್ಲಿಗೆ ಭಕ್ತಿಯಿಂದ ನಡೆದುಕೊಳ್ಳುವುದರಿಂದ ಒಳ್ಳೆದಾಗುತ್ತೆ ಎಂದು ದೇವಾಲಯದ ಅರ್ಚಕ ರೇವಣ್ಣ ಸಿದ್ದಯ್ಯ ಹೇಳುತ್ತಾರೆ.
Advertisement
Advertisement
ಶ್ರಾವಣಮಾಸದಲ್ಲಿ ಕಪ್ಪತ್ತಗಿರಿಯ ಗಾಳಿಗುಂಡಿ ಬಸವಣ್ಣನ ಜಾತ್ರೆಗೆ ಜನಸಾಗರವೇ ಹರಿದು ಬರುತ್ತದೆ. ದೇವಾಲಯ ಬೆಟ್ಟದ ಮೇಲಿದ್ದರೂ ಡೋಣಿ ಗ್ರಾಮದ ಸುತ್ತಮುತ್ತಲಿನ ಹಾಗೂ ಕೊಪ್ಪಳ, ಹಾವೇರಿ, ಬಳ್ಳಾರಿ ಜಿಲ್ಲೆಯ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಗೆ ‘ಹರಕೆ ಜಾತ್ರೆ’ ಎಂತಾನೆ ಕರೆಯುತ್ತಾರೆ. ಇಲ್ಲಿ ಮದುವೆ ಆಗದವರು ಕಂಕಣ ಕಟ್ಟಿದ್ರೆ ಮದುವೆಯಾಗುತ್ತೆ, ಮಕ್ಕಳಾಗದವರು ತೊಟ್ಟಿಲು ಕಟ್ಟಿದ್ರೆ ಮಕ್ಕಳಾಗುತ್ತವೆ. ಮನೆ ಬೇಕಾದವರು ಕಲ್ಲಿನ ಮನೆ ನಿರ್ಮಿಸಿದ್ರೆ ಮನೆಗಳಾಗುತ್ತವೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ.
Advertisement
ಇಲ್ಲಿ ಯಾವುದೇ ಜಾತಿ ಮತದ ಭೇದವಿಲ್ಲದೇ ಎಲ್ಲರು ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾರೆ. ಬಂದ ಭಕ್ತರು ಪೇರಳೆಹಣ್ಣು ತಿಕ್ಕುವುದು ತುಂಬಾ ವೈಶಿಷ್ಟ್ಯತೆ ಹೊಂದಿದೆ. ಜಗತ್ತು ಇಷ್ಟೆಲ್ಲ ಮುಂದುವರಿದಿದ್ದರೂ, ಕಂಪ್ಯೂಟರ್ ಯುಗದಲ್ಲಿ ದೇವರ ಮೇಲಿನ ನಂಬಿಕೆಗಳು, ಆಚರಣೆಗಳು ಮಾತ್ರ ಮುಂದುವರಿಯುತ್ತಲೇ ಇವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv