ಮೈಸೂರು: ಕಪಿಲಾ ನದಿಯ ಪ್ರವಾಹದಲ್ಲಿ ಇಳಿಕೆಯಾಗಿದ್ದು, ಮುಳುಗುವ ಭೀತಿಯಲ್ಲಿದ್ದ ಮೈಸೂರು ಜಿಲ್ಲೆಯ ನಂಜನಗೂಡು ಸಹಜ ಸ್ಥಿತಿಯತ್ತ ಮರಳುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಕಪಿಲಾ ನದಿ ಪ್ರವಾಹ ನಂಜನಗೂಡು ಭಾಗದ ಜನರ ಕಂಗೆಡಿಸಿತ್ತು. ಶ್ರೀಕಂಠೇಶ್ವರ ಸ್ವಾಮಿ ದೇಗುಲದವರೆಗೂ ಪ್ರವಾಹದ ನೀರು ಬಂದಿತ್ತು ಅಲ್ಲದೆ ಕಪಿಲಾನದಿ ತೀರದ ಬಹುತೇಕ ದೇಗುಲಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು.
ಊಟಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಜಲಾವೃತವಾಗಿ ಹೆದ್ದಾರಿ ಕೂಡ ಬಂದ್ ಆಗಿತ್ತು. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಈ ಭಾರೀ ಪ್ರವಾಹ ಉಂಟಾಗಿತ್ತು. ಇದೀಗ ಹೊರಹರಿವು ಇಳಿಕೆಯಾಗಿ ಕಪಿಲಾ ನದಿ ನೀರಿನ ಮಟ್ಟ ಕಡಿಮೆಯಾದ್ದರಿಂದ ಪ್ರವಾಹದ ನೀರು ಸಹ ಇಳಿ ಮುಖವಾಗಿದೆ.
ಕಳೆದ ಮೂರು ದಿನಗಳಿಂದ ಕಪಿಲಾ ನದಿ ರಭಸದಿಂದ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಂಜಗೂಡು -ಹೆಜ್ಜಿಗೆ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಸೇತುವೆ ರಸ್ತೆ ಕುಸಿದು ಬೀಳುವ ಆತಂಕ ಸ್ಥಳೀಯರಲ್ಲಿ ಎದುರಾಗಿದೆ.
ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಉಂಟಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಸೇತುವೆ ಮೇಲ್ಭಾಗದಲ್ಲಿ ಭಾರೀ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಕೊನೆ ಅವಧಿಯಲ್ಲಿ ಈ ಸೇತುವೆ ಉದ್ಘಾಟನೆ ಆಗಿತ್ತು. ಕಳಪೆ ಕಾಮಗಾರಿಯಿಂದಾಗಿಯೇ ಸೇತುವೆ ಹಾಗೂ ರಸ್ತೆಯಲ್ಲಿ ಬಿರುಕು ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಂದ್:
ಕಪಿಲಾ ನದಿಯಿಂದ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪರ್ಕ ಕಳೆದ ಎರಡು ದಿನಗಳಿಂದ ಸಂಪೂರ್ಣ ಕಡಿತಗೊಂಡಿತ್ತು. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 766 ರಸ್ತೆ ಮೇಲೆ ನೀರು ಹರಿದು ಹೋಗುತ್ತಿದ್ದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನ ಸವಾರರು ಇತರೇ ಮಾರ್ಗಗಳತ್ತ ತೆರಳಿ ಪ್ರಯಾಣ ಮುಂದುವರಿಸಿದ್ದರು. ಈ ಕುರಿತು ಪರ್ಯಾಯ ಮಾರ್ಗಗಳನ್ನು ಅಧಿಕಾರಿಗಳು ಸೂಚಿಸಿದ್ದಾರೆ.