ಕಾಂಗ್ರೆಸ್‍ನಲ್ಲಿ ಅಧ್ಯಕ್ಷರೇ ಇಲ್ಲ – ಹೈಕಮಾಂಡ್ ವಿರುದ್ಧವೇ ಸಿಡಿದ ಹಿರಿಯ ನಾಯಕರು

Public TV
3 Min Read
ghulam nabi azad kapil sibal

– ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೇ ಗೊತ್ತಿಲ್ಲ
– ಸೋನಿಯಾ, ರಾಹುಲ್, ಪ್ರಿಯಾಂಕಾ ವಿರುದ್ಧ ಸಿಬಲ್ ಬಂಡಾಯ
– ಸಿಡಬ್ಲ್ಯೂಸಿ ಸಭೆಗೆ ಗುಲಾಂ ನಬಿ ಆಜಾದ್ ಆಗ್ರಹ

ನವದೆಹಲಿ: ಪಂಜಾಬ್‍ನಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಹಿರಿಯ ನಾಯಕರು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಹಿರಿಯ ನಾಯಕ ಕಪಿಲ್ ಸಿಬಲ್ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ. ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿವ ಮೂಲಕ ಬಹಿರಂಗವಾಗಿಯೇ ಸೋನಿಯಾ, ರಾಹುಲ್, ಪ್ರಿಯಾಂಕಾ ವಿರುದ್ಧ ಸಿಡಿದೆದ್ದಿದ್ದಾರೆ.

ಇನ್ನೊಂದು ಕಡೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಕೂಡಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆ ನಡೆಸುವಂತೆ ಜಮ್ಮು ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಆಗ್ರಹಿಸಿದ್ದಾರೆ.

ಪಕ್ಷದ ಹೈಕಮಾಂಡ್ ಹೇಳಿದ್ದಕೆಲ್ಲ ‘ಯೆಸ್’ ಎಂದು ಹೇಳುವ ವ್ಯಕ್ತಿಗಳು ನಾವಲ್ಲ. ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಮುಕ್ತವಾಗಿ ನಾವು ಅಭಿಪ್ರಾಯವನ್ನು ಹಂಚಿಕೊಳ್ಳುವ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಸಿಬಲ್ ಗುಡುಗಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಬಲ್, ಪಂಜಾಬ್ ನಲ್ಲಿ ನಡೆದ ಬೆಳವಣಿಗೆಯಿಂದ ನನಗೆ ಬಹಳ ನೋವಾಗಿದೆ. ಪಕ್ಷದಲ್ಲಿ ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಗಡಿ ರಾಜ್ಯವಾದ ಪಂಜಾಬ್‍ನಲ್ಲಿ ನಡೆದ ಘಟನೆಗಳು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‍ಐಗೆ ಲಾಭವಾಗಲಿದೆ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ಅಮರೀಂದರ್ ಸಿಂಗ್- ಬಿಜೆಪಿ ಸೇರುವ ವದಂತಿ 

Congress Rahul Gandhi 1 cwc sonia medium

ಅಸ್ಸಾಂನಲ್ಲಿ ಸುಶ್ಮಿತಾ ದೇವ್, ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉತ್ತರ ಪ್ರದೇಶದಲ್ಲಿ ಲಲಿತೇಶ್ ತ್ರಿಪಾಠಿ ಪಕ್ಷದ ತೊರೆದ ವಿಚಾರವನ್ನು ಬಹಿರಂಗವಾಗಿ ಹೇಳದ ಸಿಬಲ್, ಜಿ-23 ನಾಯಕರು ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಿಲ್ಲ. ಆದರೆ ನಾಯಕರಿಗೆ ಆಪ್ತರು ಎಂದು ಗುರುತಿಸಿಕೊಂಡವರು ಪಕ್ಷವನ್ನು ತೊರೆದಿದ್ದಾರೆ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಸೇರಿದಂತೆ ಈ ಹಿಂದೆ ನಾವು ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದಷ್ಟೇ ನಮ್ಮ ಆಗ್ರಹ ಎಂದು ತಿಳಿಸಿದರು.

ಸತತ ಎರಡು ಲೋಕಸಭೆ ಚುನಾವಣೆ ಸೋಲು, ಹಲವು ವಿಧಾನಸಭೆಗಳಲ್ಲಿ ಸೋತ ಹಿನ್ನೆಲೆಯಲ್ಲಿ 2020ರಲ್ಲಿ ಕಾಂಗ್ರೆಸ್ಸಿನ 23 ಹಿರಿಯ ನಾಯಕರು ಪಕ್ಷದಲ್ಲಿ ಸುಧಾರಣೆಗೆ ಆಗ್ರಹಿಸಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ಬಂಡಾಯ ಸಾರಿದ 23 ಮಂದಿಯ ಗುಂಪನ್ನು ಜಿ-23 ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

kpail sibal
kpail sibal

 

ಇದು ಮೊದಲಲ್ಲ:
ಪಕ್ಷದ ಹೈಕಮಾಂಡ್ ವಿರುದ್ಧವೇ ಕಪಿಲ್ ಸಿಬಲ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕುವುದು ಇದೆ ಮೊದಲಲ್ಲ. ಈ ಹಿಂದೆ 2020ರ ಆಗಸ್ಟ್‌ನಲ್ಲಿ, ನನಗೆ ಪದವಿ ಮುಖ್ಯ ಅಲ್ಲ. ದೇಶ ಮುಖ್ಯ ಎಂದು ಟ್ವೀಟ್ ಮಾಡಿದ್ದರು.

kapil sibal tweet

 

23 ನಾಯಕರು ಬರೆದ ಪತ್ರಕ್ಕೆ ರಾಹುಲ್ ಗಾಂಧಿ ಸಿಟ್ಟಾಗಿದ್ದರು. ಅಷ್ಟೇ ಅಲ್ಲದೇ ನಾಯಕರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

vlcsnap 2020 08 24 11h37m49s194

ಈ ಆರೋಪಕ್ಕೆ ಸಿಬಲ್, ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ನಾವು ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ರಾಜಸ್ಥಾನ ಹೈಕೋರ್ಟ್‍ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಬಿಜೆಪಿ ಸರ್ಕಾರವನ್ನು ಉರುಳಿಸಿ ಮಣಿಪುರದಲ್ಲಿ ಹಾಲಿ ಪಕ್ಷವನ್ನು ತರುವಲ್ಲಿ ನೆರವಾದೆ. ಆದರೂ ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ರಾಹುಲ್ ಗಾಂಧಿ ಕಪಿಲ್ ಸಿಬಲ್ ಜೊತೆ ಕರೆ ಮಾಡಿ ಮಾತನಾಡಿದ್ದರು. ಬಳಿಕ ಕಪಿಲ್ ಸಿಬಲ್ ಯೂಟರ್ನ್ ಹೊಡೆದಿದ್ದರು. ರಾಹುಲ್ ಗಾಂಧಿ ನನಗೆ ಜೊತೆ ಮಾತನಾಡಿ ನಿಮ್ಮನ್ನು ಉದ್ದೇಶಿಸಿ ಹೇಳಿಲ್ಲ ಎಂದು ಹೇಳಿದರು. ಹೀಗಾಗಿ ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿ ಮೊದಲು ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *