ಡಿ.ಪಿಕ್ಚರ್ಸ್ ಲಾಂಛನದಲ್ಲಿ ದಯಾಳ್ ಪದ್ಮನಾಭನ್ ನಿರ್ಮಿಸಿರುವ, ರವಿಕಿರಣ್ ಹಾಗೂ ಚೇತನ್ ಎಸ್.ಪಿ ಅವರ ಜಂಟಿ ನಿರ್ದೇಶನದಲ್ಲಿ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಪಟಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ‘ಕಪಟಿ’ ಸಿನಿಮಾದ (Kapati Film) ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ಸಾಥ್ ನೀಡಿದ್ದಾರೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: ಆರ್ಥಿಕ ನೆರವು ನೀಡಿದ ರಶ್ಮಿಕಾ, ಸೂರ್ಯ, ಮಮ್ಮುಟ್ಟಿ
ಇದು ನಮ್ಮ ಡಿ.ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನ್ನೆರಡನೇ ಚಿತ್ರ. ಹನ್ನೆರಡು ಚಿತ್ರಗಳಲ್ಲಿ ಹತ್ತು ಕನ್ನಡ ಹಾಗೂ ಎರಡು ತಮಿಳು ಚಿತ್ರಗಳು. 11 ಚಿತ್ರಗಳನ್ನು ನಾನೇ ನಿರ್ಮಿಸಿ, ನಿರ್ದೇಶನವನ್ನೂ ಮಾಡಿದ್ದೇನೆ. ಆದರೆ ಈ ಚಿತ್ರವನ್ನು ನಾನು ನಿರ್ಮಾಣ ಮಾತ್ರ ಮಾಡಿದ್ದೇನೆ. ರವಿಕಿರಣ್ ಹಾಗೂ ಚೇತನ್ ಎಸ್.ಪಿ ನಿರ್ದೇಶನ ಮಾಡಿದ್ದಾರೆ. ಇವರು ಹಿಂದೆ ‘ಕೋಮ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಇವರು ಬಂದು ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಡಾರ್ಕ್ ನೆಟ್ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಕನ್ನಡದಲ್ಲಿ ‘ಗುಳ್ಟು’ ಚಿತ್ರದ ನಂತರ ಈ ಜಾನರ್‌ನ ಚಿತ್ರ ಬಂದಿರಲಿಲ್ಲ. ಇನ್ನೂ ಕಂಟೆಂಟ್ ಓರಿಯಂಟೆಡ್ ಚಿತ್ರಗಳಿಂದ ಯಾವತ್ತು ಯಾರಿಗೂ ನಷ್ಟವಾಗಲ್ಲ ಎಂದು ನಂಬಿರುವವನು ನಾನು. ಆದರೆ ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ. ಅದಕ್ಕೆ ಉದಾಹರಣೆ ನನ್ನ ಚಿತ್ರಗಳು. ‘ಕಪಟಿ’ ಚಿತ್ರವನ್ನು ಇತ್ತೀಚೆಗೆ ಸ್ನೇಹಿತರ ಜೊತೆ ನೋಡಿದೆ. ಚೆನ್ನಾಗಿ ಮೂಡಿ ಬಂದಿದೆ. ಟೀಸರ್ ಬಿಡುಗಡೆ ಮಾಡಿ ಕೊಟ್ಟ ಡಾರ್ಲಿಂಗ್ ಕೃಷ್ಣಗೆ ಧನ್ಯವಾದ ಎಂದುನಿರ್ಮಾಪಕ ದಯಾಳ್ ಪದ್ಮನಾಭನ್ (Dayal Padmanabhan) ಮಾತನಾಡಿದರು.
ಸುಮಾರು ಏಳು ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರ ವಿರಳ ಎನ್ನಬಹುದಾದ ಕಥಾಹಂದರ ಹೊಂದಿರುವ ಚಿತ್ರವಿದು. ಈ ಕಥೆಯನ್ನು ದಯಾಳ್ ಅವರ ಬಳಿ ಹೇಳಿದ ತಕ್ಷಣ ಒಪ್ಪಿ ನಿರ್ಮಾಣಕ್ಕೆ ಮುಂದಾದರು. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ದೇಶಕ ರವಿಕಿರಣ್ ಹಾಗೂ ಚೇತನ್ ತಿಳಿಸಿದರು.
ನಾನು ಚಿತ್ರರಂಗವನ್ನು ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದೆ. ನಿರ್ದೇಶಕರು ಹೇಳಿದ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹು ದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ ಎಂದು ‘ಜಟ್ಟ’ ಚಿತ್ರದ ಖ್ಯಾತಿಯ ಸುಕೃತ ವಾಗ್ಲೆ (Sukrutha Wagle) ಮಾತನಾಡಿದ್ದಾರೆ.
ಪ್ರಮುಖ ಪಾತ್ರದಲ್ಲಿ ನಟಿಸಿರುವ ದೇವ್ ದೇವಯ್ಯ ಹಾಗೂ ಸಾತ್ವಿಕ್ ಕೃಷ್ಣನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ, ಅವಕಾಶ ನೀಡಿದ ನಿರ್ಮಾಪಕ ದಯಾಳ್ ಅವರಿಗೆ ಧನ್ಯವಾದ ಹೇಳಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಜೋಹನ್ ಮಾತನಾಡಿದರು.