ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

Public TV
2 Min Read
kapata nataka pathradhari 5

ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟ ನಾಟಕ ಪಾತ್ರಧಾರಿ ಚಿತ್ರ ತೆರೆಕಂಡಿದೆ. ಶೀರ್ಷಿಕೆಯೊಂದಿಗೇ ಗಮನ ಸೆಳೆದು, ಆ ನಂತರದಲ್ಲಿ ಹಾಡುಗಳು ಮತ್ತು ಟ್ರೇಲರ್ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ್ದ ಈ ಚಿತ್ರ ನೋಡುಗರನ್ನೆಲ್ಲ ಕಾಡುವಂತೆ, ಎಲ್ಲ ವರ್ಗದ ಪ್ರೇಕ್ಷಕರೂ ಸಂಪೂರ್ಣವಾಗಿ ತೃಪ್ತರಾಗುವಂತೆ ಅಚ್ಚುಕಟ್ಟಾಗಿಯೇ ಮೂಡಿ ಬಂದಿದೆ.

Kapata Nataka Paatradhaari 1

ಯಾವ ಥರದ ನಿರೀಕ್ಷೆಗಳೆದ್ದಿದ್ದವೋ ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಮೂಡಿ ಬಂದಿರೋ ಈ ಚಿತ್ರ ಮಧ್ಯಮ ವರ್ಗದ ಹುಡುಗನೊಬ್ಬನ ಭೂಮಿಕೆಯಲ್ಲಿ ತೆರೆದುಕೊಳ್ಳುವ ಸಸ್ಪೆನ್ಸ್ ಕಥೆಯೊಂದಿಗೆ ಥ್ರಿಲ್ಲಿಂಗ್ ಜರ್ನಿ ಮಾಡಿಸುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ಇಲ್ಲಿರೋದು ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ. ಅದು ಈ ವರ್ಗದ ಬಹುತೇಕ ಯುವಕರ ಪ್ರಾತಿನಿಧಿಕ ಕಥೆಯಂತೆಯೇ ಕಾಣಿಸುತ್ತದೆ. ಅದಕ್ಕೆ ಮತ್ತೂ ಒಂದಷ್ಟು ರೋಚಕ ಅಂಶಗಳನ್ನು ಸೇರಿಸಿ ಸಿನಿಮಾ ಸ್ಪರ್ಶ ನೀಡಿರುವಲ್ಲಿಯೇ ನಿರ್ದೇಶಕ ಕ್ರಿಶ್ ಅವರ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕಾಗಿ ಪ್ರತಿ ಪಾತ್ರಗಳನ್ನು ದುಡಿಸಿಕೊಂಡಿರೋದರಲ್ಲಿಯೇ ಇಡೀ ಸಿನಿಮಾದ ನಿಜವಾದ ಶಕ್ತಿಯೂ ಅಡಗಿದೆ. ಬಾಲು ನಾಗೇಂದ್ರ ಪ್ರತಿಭಾವಂತ ನಟ ಅನ್ನೋದು ಇಲ್ಲಿನ ಕೃಷ್ಣ ಎಂಬ ಪಾತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

Kapata Nataka Paatradhaari 3

ಬಾಲು ನಾಗೇಂದ್ರ ಕೃಷ್ಣ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾಗದೆ ಸದಾ ಅಪ್ಪನಿಂದ ಉಗಿಸಿಕೊಳ್ಳುವ ಪಾತ್ರ. ಹೀಗಿರುವ ಯುವ ಕೃಷ್ಣನ ಮುಂದೆ ಅನಿವಾರ್ಯತೆಯೊಂದು ಸೃಷ್ಟಿಯಾಗುತ್ತೆ. ಅದರ ಭಾಗವಾಗಿ ಆಟೋ ಓಡಿಸಿ ಬದುಕೋ ನಿರ್ಧಾರ ತಳೆಯುತ್ತಾನೆ. ಈ ಹಾದಿ ಪ್ರೀತಿ ಪ್ರೇಮಗಳೊಂದಿಗೆ ರೊಮ್ಯಾಂಟಿಕ್ ಮೂಡಿಗೆ ಜಾರಿಸುತ್ತಲೇ ಅಲ್ಲೊಂದು ಹಾರರ್ ಸಸ್ಪೆನ್ಸ್ ಕಥನ ತೆರೆದುಕೊಳ್ಳುತ್ತೆ. ಆತನ ಆಟೋ ಹತ್ತಲೇ ಹಿಂದೆ ಮುಂದೆ ನೋಡುವಂಥಾ ನಿರ್ಮಾಣವಾಗುತ್ತೆ. ಹಾಗಾದರೆ ಆಟೋದೊಳಗಾಗೋ ಚಿತ್ರವಿಚಿತ್ರ ಅನುಭವದ ಸೂತ್ರಧಾರರ್ಯಾರು? ಅದರಲ್ಲಿ ಪಾತ್ರಧಾರಿಗಳ್ಯಾರೆಂಬುದಕ್ಕಿಲ್ಲಿ ರೋಚಕ ಉತ್ತರವೇ ಕಾದಿದೆ.

kapata nataka pathradhari 1

ನಿರ್ದೇಶಕ ಕ್ರಿಶ್ ಹಲವಾರು ಟ್ವಿಸ್ಟ್ ಗಳನ್ನು ಒಳಗೊಂಡಿರುವ ಈ ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರ್ವಹಿಸಿದ್ದಾರೆ. ಬಾಲು ನಾಗೇಂದ್ರ, ಸಂಗೀತಾ ಭಟ್ ಸೇರಿದಂತೆ ಇಡೀ ಪಾತ್ರವರ್ಗ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದೆ. ಅದು ಈ ಸಿನಿಮಾದೊಂದು ಶಕ್ತಿಯಾದರೆ, ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳೂ ಇದರಲ್ಲಿ ಭಾಗಿಯಾಗುವಂತಿವೆ. ಒಟ್ಟಾರೆಯಾಗಿ ಇದೊಂದು ಅಚ್ಚುಕಟ್ಟಾದ ವಿಭಿನ್ನ ಚಿತ್ರ. ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡಲು ಅಡ್ಡಿಯಿಲ್ಲ.

ರೇಟಿಂಗ್ 3.5 / 5

Share This Article
Leave a Comment

Leave a Reply

Your email address will not be published. Required fields are marked *