ಬೆಂಗಳೂರು: ಬಾಲು ನಾಗೇಂದ್ರರಂಥಾ ವಿಶಿಷ್ಟ ನಟ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆಂದ ಮೇಲೆ ಆ ಚಿತ್ರದ ಕಥೆಯೂ ಡಿಫರೆಂಟಾಗಿದೆ ಎಂದೇ ಅರ್ಥ. ಅದು ಪ್ರೇಕ್ಷಕರಿಗೂ ಕೂಡಾ ಚೆನ್ನಾಗಿಯೇ ಗೊತ್ತಿರುವಂಥಾದ್ದು. ಈಗಾಗಲೇ ಹೊರ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಈ ಸಿನಿಮಾದ ಭಿನ್ನ ಕಥೆಯ ಸುಳಿವೂ ಕೂಡಾ ಸ್ಪಷ್ಟವಾಗಿ ಜಾಹೀರಾಗಿದೆ. ಈ ಚಿತ್ರ ಇದೇ ನವೆಂಬರ್ 8ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಕಡೆಯ ಹೊತ್ತಿನಲ್ಲಿ ಈ ಥರದ ಗಾಢವಾದ ನಿರೀಕ್ಷೆ, ಕುತೂಹಲ, ಕ್ರೇಜ್‌ಗಳು ಮೇಳೈಸಿವೆಯಲ್ಲಾ? ಇದೆಲ್ಲವನ್ನೂ ಮೀರಿಸುವ ಹೂರಣ ಈ ಸಿನಿಮಾದೊಳಗಿದೆ.
ಈ ಚಿತ್ರ ಆಟೋ ಡ್ರೈವರ್ ಒಬ್ಬನ ದಿನಚರಿಯನ್ನೊಳಗೊಂಡಿರುವಂಥಾದ್ದು. ಆದರೆ ನಿರ್ದೇಶಕ ಕ್ರಿಶ್ ಈ ದಿನಚರಿಯ ಪರಿಧಿಯೊಳಗೆ ಇಡೀ ಬ್ರಹ್ಮಾಂಡವನ್ನೇ ತಂದು ನಿಲ್ಲಿಸಿದ್ದಾರೆ. ಇದರಲ್ಲಿರೋದು ಆಟೋ ಡ್ರೈವರನ ದಿನಚರಿಯೆಂಬಂತೆ ಸಿಂಪಲ್ ಕಥೆಯ ಸುಳಿವು ಕೊಟ್ಟಿದ್ದ ಚಿತ್ರತಂಡ ಟ್ರೇಲರ್ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಯಾಕೆಂದರೆ ಅದರಾಚೆಗೆ ಅಲ್ಲಿ ಅನೇಕ ಕೊಂಬೆ ಕೋವೆ, ಸಸ್ಪೆನ್ಸ್ ಥ್ರಿಲ್ಲರ್ ಅನುಭವವಾಗಿತ್ತು. ಇದೆಲ್ಲವನ್ನೂ ಮೀರಿದ ಬಿರುಸಿನ ಕಥೆ ಇಲ್ಲಿದೆ ಎಂಬ ಸ್ಪಷ್ಟ ಸೂಚನೆಯೂ ಸಿಕ್ಕಿತ್ತು.
Advertisement
Advertisement
ಇದೆಲ್ಲವನ್ನು ಹೊರತು ಪಡಿಸಿ ಚಿತ್ರತಂಡ ಕೊಂಚ ಸಸ್ಪೆನ್ಸ್ ಆಗಿಟ್ಟು, ಅಷ್ಟಾಗಿ ಎಲ್ಲಿಯೂ ಹೇಳಿಕೊಳ್ಳದ ಮತ್ತೊಂದು ಅಂಶವೂ ಈ ಚಿತ್ರದಲ್ಲಿದೆ. ಅದು ಹಾರರ್ ಶೇಡ್. ಇದು ಪ್ರತಿ ಪ್ರೇಕ್ಷಕರನ್ನೂ ಕೂಡಾ ಸುಳಿವೇ ಕೊಡದೆ ಬೆಚ್ಚಿ ಬೀಳಿಸಲಿದೆಯಂತೆ. ಇಡೀ ಕಥೆ ಗಂಭೀರವಾಗಿ, ಹಾಸ್ಯಮಯವಾಗಿ, ಉಸಿರು ಬಿಗಿ ಹಿಡಿದು ನೋಡುವಂಥಾ ಆವೇಗದೊಂದಿಗೆ ಸಾಗುತ್ತಿರುವಾಗಲೇ ಇಲ್ಲಿ ಏಕಾಏಕಿ ಹಾರರ್ ಅಂಶಗಳು ಪ್ರತ್ಯಕ್ಷವಾಗಲಿವೆಯಂತೆ. ಹಾಗೆ ಹಾರರ್ ಶೇಡ್ ತೆರೆದುಕೊಳ್ಳಲು ಕಾರಣವೇನು? ಅದರ ತೀವ್ರತೆ ಏನು ಎಂಬುದಕ್ಕೆಲ್ಲ ಇದೇ ನವೆಂಬರ್ ಎಂಟರಂದು ನಿಖರ ಉತ್ತರ ಸಿಗಲಿದೆ.