ಬೆಂಗಳೂರು: ಸದ್ಯಕ್ಕೆ ತಣ್ಣಗಾಗಿದ್ದ ಕನಕಪುರದ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಏಸು ಪ್ರತಿಮೆ ನಿರ್ಮಾಣ ವಿವಾದಕ್ಕೆ ಮತ್ತೆ ಜೀವ ಬಂದಿದೆ. ಏಸು ಪ್ರತಿಮೆ ನಿರ್ಮಾಣ ಸಂಬಂಧ ವಿವಾದಿತ ಗೋಮಾಳ ಭೂಮಿ ವಾಪಸ್ ಬಗ್ಗೆ ನಿರ್ಧರಿಸಲು ಸರ್ಕಾರ ಈಗಾಗಲೇ ರಾಮನಗರ ಜಿಲ್ಲಾಡಳಿತದಿಂದ ವರದಿ ಕೇಳಿರೋದು ಹಳೆಯ ಸುದ್ದಿ. ಆದರೆ ರಾಮನಗರ ಜಿಲ್ಲಾಡಳಿತವು ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದ್ದ ಬಹಳ ದಿನಗಳಾಗಿದ್ದರೂ ಆ ವರದಿಯನ್ನು ಬಿಡುಗಡೆ ಮಾಡಲು ಸರ್ಕಾರ ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಸರ್ಕಾರದ ವರದಿಗೂ ಮುನ್ನವೇ ಕ್ರೈಸ್ತ ಮುಖಂಡರ ಸತ್ಯಶೋಧನಾ ಸಮಿತಿಯೊಂದು ವಿವಾದ ಸಂಬಂಧ ವರದಿ ಸಿದ್ಧಪಡಿಸಿ ಇವತ್ತು ಬಿಡುಗಡೆಗೊಳಿಸಿದೆ. ಆ ಮೂಲಕ ಸಮಿತಿಯು ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.
ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಮರಿಸ್ವಾಮಿ ಅಧ್ಯಕ್ಷತೆಯ ಈ ಸತ್ಯ ಶೋಧನಾ ಸಮಿತಿಯಲ್ಲಿ ಐದು ಮಂದಿ ಕ್ರೈಸ್ತ ಸದಸ್ಯರಿದ್ದರು. ವರದಿ ಬಂದ ಬಳಿಕವೂ ವಿಧಾನಪರಿಷತ್ ಸದಸ್ಯ ಐವಾನ್ ಡಿಜೋಜಾ ನೇತೃತ್ವದ ನಿಯೋಗವು ನಿನ್ನೆ ಕಪಾಲ ಬೆಟ್ಟಕ್ಕೆ ಭೇಟಿ ಕೊಟ್ಟು ವರದಿಯ ಸತ್ಯಾಂಶಗಳನ್ನು ಪರಿಶೀಲಿಸಿತು. ಇಂದು ಐವಾನ್ ಡಿಸೋಜಾ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವರದಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತಾಡಿದ ಐವಾನ್ ಡಿಸೋಜಾ, ಈ ವರದಿಯ ಪ್ರಕಾರ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ 2018 ರಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿತ್ತು. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ಅಂತಲೇ ಸ್ಪಷ್ಟವಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ವಿರೋಧಿಸದಂತೆ ಮನವಿ ಮಾಡಿಕೊಂಡರು.
ರಾಜಕೀಯ ದುರುದ್ದೇಶಕ್ಕಾಗಿ ಪ್ರಕರಣಕ್ಕೆ ವಿವಾದ ಬಣ್ಣ ಬಳಿಯಲಾಗಿದೆ. ವಿಷಬೀಜ ಬಿತ್ತುವ ಪ್ರಯತ್ನಗಳು ನಡೆದಿವೆ. ಗೋಮಾಳ ಭೂಮಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಇತರೇ ಸಮುದಾಯಗಳಿಗೆ ಸರ್ಕಾರ ಮೊದಲಿಂದಲೂ ಮಂಜೂರು ಮಾಡುತ್ತಾ ಬಂದಿದೆ. ಹಾಗೆಯೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಗೂ ಭೂಮಿ ಮಂಜೂರು ಮಾಡಲಾಗಿದೆ. ಹಾಗಾಗಿ ಸರ್ಕಾರ ಏಸುಪ್ರತಿಮೆ ನಿರ್ಮಿಸಲು ಅವಕಾಶ ಕೊಡಬೇಕೆಂದು ಐವಾನ್ ಡಿಸೋಜಾ ಮನವಿ ಮಾಡಿಕೊಂಡರು. ಇದೇ ವೇಳೆ ಸಕಾಧರದ ಆದೇಶ ಪ್ರತಿಯನ್ನೂ ಬಿಡುಗಡೆಗೊಳಿಸಲಾಯ್ತು.
ಕ್ರೈಸ್ತ ಮುಖಂಡರ ಸತ್ಯ ಶೋಧನಾ ಸಮಿತಿ ವರದಿಯ ಪ್ರಮುಖ ಅಂಶಗಳು ಹೀಗಿವೆ :
1. ಹಾರೋಬೆಲೆಯಲ್ಲಿ 1662ರಿಂದಲೂ ಕ್ರೈಸ್ತರ ವಾಸ ಇದೆ.
2. 26/02/2018 ರಂದು ರಾಜ್ಯ ಸರ್ಕಾರವು ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ವೆ ನಂ.283 ರಲ್ಲಿ 10 ಎಜತೆ ಗೋಮಾಳ ಜಾಗ ಮಂಜೂರು.
3. ಕಾನೂನಾತ್ಮಕವಾಗಿ ಜಮೀನು ಮಂಜೂರು. ಪಹಣಿ ಮತ್ತು ಮ್ಯೂಟೇಷನ್ ದಾಖಲೆಗಳಲ್ಲೂ ನಮೂದು.
4. ಆದೇಶ ಪ್ರತಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅಂತ ಸ್ಪಷ್ಟವಾಗಿ ಉಲ್ಲೇಖ.
5. ಹಾರೋಬೆಲೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಗೆ ಕುಡಿಯಲು ರಾಮನಗರ ಜಿ.ಪಂ.ಯಿಂದ ಬೋರ್ ವೆಲ್ ಹಾಕಿಸಿಕೊಡಲಾಗಿದೆ. ಪ್ರತಿಮೆಗಾಗಿ ಹಾಕಿಸಿದ ಬೋರ್ ವೆಲ್ ಅಲ್ಲ.
6. ಏಸುಪ್ರತಿಮೆ ನಿರ್ಮಾಣಕ್ಕೆ ಬಂದಿರುವ ಕಾರ್ಮಿಕರಿಗಾಗಿ ಕ್ರಮಬದ್ಧವಾಗಿ, ಶುಲ್ಕ ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ವಿದ್ಯುತ್ ಸಂಪರ್ಕ ಅನಧಿಕೃತ ಅನ್ನುವ ಆರೋಪ ಸುಳ್ಳು.
7. ಬೆಟ್ಟದ ಮೇಲೆ ಬೃಹತ್ ವಾಟರ್ ಟ್ಯಾಂಕ್ ಕಟ್ಟಲಾಗಿದೆ. ಆ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಪರಿಕರ, ಸಾಮಾಗ್ರಿ ತೆಗೆದುಕೊಂಡು ಹೋಗಲು ಅದರ ಗುತ್ತಿಗೆದಾರ ರಸ್ತೆ ನಿರ್ಮಿಸಿದ್ದಾನೆ. ಅದು ಏಸುಪ್ರತಿಮೆಗಾಗಿ ನಿರ್ಮಿಸಿದ ರಸ್ತೆ ಅಲ್ಲ.