ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಏಸುಕ್ರಿಸ್ತನ ಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಾಕಷ್ಟು ವಿರೋಧಗಳ ನಡುವೆ ಇದೀಗ ಏಸುಕ್ರಿಸ್ತನ ಬೆಂಬಲಕ್ಕೂ ಕೆಲ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.
ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ 10 ಏಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯುವುದಾದರೆ, ಈ ಹಿಂದೆ ಮಠ, ಆಶ್ರಮ, ದರ್ಗಾದಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಜಾಗಗಳನ್ನು ಕೂಡ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸಮತಾ ಸೈನಿಕದಳದ ಜಿಲ್ಲಾದ್ಯಕ್ಷ ಕೋಟೆ ಕುಮಾರ್ ಆಗ್ರಹಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಟನೆ ವತಿಯಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಮೆ ನಿರ್ಮಾಣದ ವಿಚಾರವಾಗಿ ಏನೆಲ್ಲಾ ಅನುಕೂಲಗಳು ಬೇಕಿದೆ, ಜೊತೆಗೆ ಪ್ರತಿಮೆ ವಿರೋಧಿಸುವವರ ವಿರುದ್ಧ ಹೋರಾಟಕ್ಕೂ ತಾವು ಕೈ ಜೋಡಿಸುವುದಾಗಿ ತಿಳಿಸಿದರು.
ಕೆಲವರು ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವಾಗಿ ಆಧಾರಗಳೇ ಇಲ್ಲದ ಮತಾಂತರದ ಊಹಾಪೋಹದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾರೋಬೆಲೆಯಲ್ಲದೇ ಪ್ರತಿಮೆಯಾದರೆ ವಿಶ್ವದ ಜನ ಈ ಭಾಗಕ್ಕೆ ಬರುತ್ತಾರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗಲಿದೆ. ಅಲ್ಲದೇ ಈ ಭಾಗದ ರೈತರ ಜಮೀನುಗಳು ಚಿನ್ನದಂತಹ ಬೆಲೆಯನ್ನ ಪಡೆದುಕೊಳ್ಳಲಿವೆ. ಆದರೆ ಧರ್ಮದ ಹೆಸರಿನಲ್ಲಿ ಕಲಹವನ್ನುಂಟು ಮಾಡುವಂತಹ ಕೆಲಸವನ್ನು ಮತಾಂಧರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲಂಡನ್‍ನಲ್ಲಿ ವಿಶ್ವಮಾನವತೆ ಸಾರಿದ ಬಸವಣ್ಣನ ವಿಗ್ರಹವನ್ನ ಇಲ್ಲಿಂದ ತೆರಳಿ ಅಲ್ಲಿ ವಾಸ ಮಾಡುತ್ತಿರುವ ಹಿಂದೂಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಪ್ರತಿಮೆಗೆ ಮತಾಂಧರಿಂದ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದೇ ಜ.13ಕ್ಕೆ ಕನಕಪುರ ಚಲೋಗೆ ಮುಂದಾಗಿದ್ದಾರೆ, ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಸರ್ವಧರ್ಮದ ರಾಷ್ಟ್ರ ನಮ್ಮದಾಗಿದ್ದು. ಸಂವಿಧಾನದಲ್ಲೇ ಸರ್ವಧರ್ಮದ ಕಲ್ಪನೆಯನ್ನ ಹೇಳಲಾಗಿದೆ. ದೇಶದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಭೌದ್ಧರು ವಾಸಿಸುತ್ತಿದ್ದಾರೆ. ಕೆಲವರು ಸಮಾಜದ ಸ್ವಾಸ್ಥ್ಯ ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರತಿಮೆ ನಿರ್ಮಾಣದ ಜಾಗ ವಾಪಸ್ ಪಡೆಯುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದರು.