ಮಂಗಳೂರು: ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ ಎಂದು ಪಂಜುರ್ಲಿ (Panjurli) ದೈವ ರಿಷಬ್ ಶೆಟ್ಟಿಗೆ (Rishab Shetty) ಅಭಯ ನೀಡಿದೆ.
ಕಾಂತಾರ ಚಾಪ್ಟರ್ 1 (Kantara: A Legend Chapter-1) ಸಿನಿಮಾ ಭರ್ಜರಿ ಯಶಸ್ವಿಯಾದ ಬೆನ್ನಲ್ಲೇ ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆಯಿತು. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ (Hombale Films) ವತಿಯಿಂದ ಹರಕೆ ನೇಮೋತ್ಸವ ಆಯೋಜನೆಗೊಂಡಿತ್ತು.
ರಿಷಬ್ ಶೆಟ್ಟಿ ಅವರನ್ನು ಅಪ್ಪಿ ಅಲಂಗಿಸಿದ ಮಡಿಲಲ್ಲಿ ಮಲಗಿದ ಪಂಜುರ್ಲಿ ದೈವ ನಿನ್ನ ಹಿಂದೆ ನಾನಿದ್ದೇನೆ ಎಂದು ಕೈ ಭಾಷೆಯಲ್ಲಿ ಸನ್ನೆ ಮಾಡುವ ಮೂಲಕ ಅಭಯ ನೀಡಿತು. ವೀಳ್ಯ ಶಕುನದ ಮೂಲಕ ನಾನು ಸಂತುಷ್ಟನಾಗಿದ್ದೇನೆ ಎಂದು ಹೇಳಿತು.
ಕೋಲಕ್ಕೂ ಮುನ್ನ ವಾರಾಹಿ ಪಂಜುರ್ಲಿಗೆ ಎಣ್ಣೆ ಬೂಳ್ಯ (ಎಣ್ಣೆ ಬೂಳ್ಯ ಅಂದ್ರೆ ತುಳುನಾಡಿನ ಸಾಂಪ್ರದಾಯಿಕ ಪೂಜೆ, ಶುಭ ಕಾರ್ಯಗಳಲ್ಲಿ ಬಳಸುವ ಒಂದು ವಿಧಿವಿಧಾನ, ಇದರಲ್ಲಿ ತೆಂಗಿನ ಎಣ್ಣೆ (ಎಣ್ಣೆ), ಐದು ಅಡಿಕೆ (ಬಚ್ಚಿರೆ), ಮತ್ತು ಒಂದು ವೀಳ್ಯದೆಲೆ (ಬಜ್ಜೆಯಿ) ಸೇರಿರುತ್ತದೆ, ಇದು ಪೂಜೆಗೆ ಮತ್ತು ಭೂತ ಕೋಲಕ್ಕೆ ಅನುಮತಿ ನೀಡುವ ಸಂಕೇತ) ನೀಡಲಾಯಿತು. ಎಣ್ಣೆ ಬೂಳ್ಯದಲ್ಲಿ ರಿಷಬ್ ಹಾಗೂ ಹೊಂಬಾಳೆ ನಿರ್ಮಾಪಕ ವಿಜಯ್ ಕಿರಗಂದೂರಿಗೆ (Vijay Kiragandur) ದೈವ ಅಭಯ ನೀಡಿತು.
ಮಧ್ಯರಾತ್ರಿವರೆಗೂ ಕೋಲ ಸೇವೆಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್, ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವು ಭಾಗಿಯಾಗಿದ್ದರು. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು. ಇದನ್ನೂ ಓದಿ: ಕ್ಷಮೆ ಕೇಳಿದರೂ ರಣವೀರ್‌ಗೆ ತಪ್ಪದ ಸಂಕಷ್ಟ
ಕಾಂತಾರ ಮೊದಲ ಸಿನಿಮಾ ಬಿಡುಗಡೆಯಾದ ಬಳಿಕವೂ ಚಿತ್ರತಂಡ ಹರಕೆಯ ಕೋಲವನ್ನು ತೀರಿಸಿತ್ತು. ಈಗ ಎರಡನೇ ಸಿನಿಮಾ ಯಶಸ್ವಿಯಾದ ನಂತರ ಮತ್ತೊಮ್ಮೆ ಹರಕೆಯನ್ನು ತೀರಿಸಿದೆ.


