ಇಂದು ಕಾಂತಾರ (Kantara Chapter 2) ಸಿನಿಮಾದ ಮುಹೂರ್ತ ಅತ್ಯಂತ ಸರಳವಾಗಿ ನಡೆದಿದೆ. ಜೊತೆಗೆ ಸಿನಿಮಾದ ಫಸ್ಟ್ ಲುಕ್ ಮತ್ತು ಟೀಸರ್ ಕೂಡ ಚಿತ್ರತಂಡ ಬಿಡುಗಡೆ ಮಾಡಿದೆ. ಎರಡಕ್ಕೂ ನೋಡುಗರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್ (Teaser) ರಿಲೀಸ್ ಆದ ಕೆಲವೇ ಕೆಲವು ನಿಮಿಷಗಳಲ್ಲಿ ಲಕ್ಷ ಲಕ್ಷ ವಿವ್ಯೂ ಸಿಕ್ಕಿವೆ.
ಉಡುಪಿಯ ಕುಂಭಾಸಿಯಲ್ಲಿ ಚಿತ್ರದ ಮುಹೂರ್ತ (Muhurta) ನಡೆದಿದ್ದು, ಈ ಸಂದರ್ಭದಲ್ಲಿ ರಿಷಬ್ (Rishabh Shetty) ಮಾತನಾಡಿದ್ದಾರೆ. ‘ನಿರ್ಮಾಪಕ ವಿಜಯ್ ಕಿರಗೊಂದೂರು ದೊಡ್ಡ ಶಕ್ತಿ. ಇಡೀ ದೇಶದಲ್ಲಿ ಅವರು ಒಂದು ಪವರ್ ಹೌಸ್. ಕಾಂತರಾ ಈ ಮಟ್ಟಕ್ಕೆ ಹೋಗಲು ಅವರ ಬೆಂಬಲ ಬಹಳ ದೊಡ್ಡದು. ಕಾಂತಾರ ಚಿತ್ರಕ್ಕೆ ಅವರು ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ. ಇಡೀ ಚಿತ್ರಕ್ಕೆ ಅವರು ದೊಡ್ಡ ಕಾನ್ಫಿಡೆನ್ಸ್ ಅನ್ನು ತುಂಬಿದ್ದಾರೆ. ಒಂದು ಚಿತ್ರಕ್ಕೆ ನಾವು ಇಂತಿಷ್ಟು ಬಜೆಟ್ ನಿರ್ಧಾರ ಮಾಡಿರುತ್ತೇವೆ. ಅದು ಮುಂದೆ ಎಲ್ಲೋ ಹೋಗಿ ತಲುಪುತ್ತದೆ. ಕಾಂತಾರ ಮೊದಲ ಅಧ್ಯಾಯ ಕಥೆ ಅಪೇಕ್ಷೆ ಮಾಡುತ್ತದೆ ಅದಕ್ಕೆ ನಿರ್ಮಾಪಕರು ಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಮಾತನಾಡಿದ್ದಾರೆ.
ಎಂದಿನಂತೆ ಕಾಂತಾರ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಾಂತ್ರಿಕ ವರ್ಗವೇ ಕಾಂತಾರ ಅಧ್ಯಾಯ 1ರಲ್ಲಿ ಮುಂದುವರೆಯಲಿದೆ. ಅಜನೀಶ್ ಲೋಕನಾಥ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ‘ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ನಾವು ಮಾಡಿಕೊಂಡಿಲ್ಲ. ಕೆಲ ಹೊಸ ಕಲಾವಿದರು ಬರುತ್ತಾರೆ. ಮುಂದಿನ ತಿಂಗಳು ಶೂಟಿಂಗ್ ಮಾಡುವ ಆಲೋಚನೆ ಇದೆ. ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ’ ಎಂದಿದ್ದಾರೆ ರಿಷಬ್.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ 1 ಫಸ್ಟ್ ಲುಕ್ (First Look) ರಿಲಿಸ್ ಆಗಿದೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿರುವ ಚಿತ್ರದ ಫಸ್ಟ್ ಲುಕ್ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ.
ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಮೂಡಿಸುವಷ್ಟು ಕಂಡಿದ್ದಾರೆ. ಶಿವನ ಅವತಾರದ ಮತ್ತೊಂದು ರೂಪವಾಗಿ ರಿಷಬ್ ಬದಲಾಗಿದ್ದಾರೆ. ಒಂದು ಕೈಯಲ್ಲಿ ತ್ರಿಶೋಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಪೋಸ್ಟರ್ ನಾನಾ ಚರ್ಚೆಗಳನ್ನು ಹುಟ್ಟು ಹಾಕುವಂತಿದೆ.