ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾದ ‘ವರಾಹ ರೂಪಂ’ (Varaha Roopam) ಹಾಡಿನ ಹಕ್ಕು ಸ್ವಾಮ್ಯ ಉಲ್ಲಂಘನೆ ಪ್ರಕರಣ ಹಲವು ತಿಂಗಳುಗಳಿಂದ ಕೇರಳ (Kerala) ಹೈಕೋರ್ಟಿನಲ್ಲಿ ನಡೆಯುತ್ತಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಅಪ್ ಡೇಟ್ ಸಿಕ್ಕಿದ್ದು, ದೂರು ದಾರರು ಮತ್ತು ಪ್ರತಿವಾದಿಗಳು ಸಂಧಾನ ಮಾಡಿಕೊಂಡಿರುವ ಕಾರಣದಿಂದಾಗಿ ಕೇರಳ ಹೈಕೋರ್ಟ್ ಈ ಪ್ರಕರಣವನ್ನೇ ರದ್ದು ಮಾಡಿದೆ.
ಕಾಂತಾರ ಸಿನಿಮಾ ತಂಡದ ಪರವಾಗಿ ವಾದ ಮಂಡಿಸುತ್ತಿದ್ದ ವಿಜಯ್ ವಿ ಪೌಲ್, ಸಿನಿಮಾ ಟೀಂ ಮತ್ತು ಮಾತೃಭೂಮಿ ಪಬ್ಲಿಷರ್ಸ್ ನಡುವಿನ ಸಂಧಾನವನ್ನು ಕೋರ್ಟ್ ಗಮನಕ್ಕೆ ತಂದರು. ಹಾಗಾಗಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡುವಂತೆ ಮನವಿ ಮಾಡಿಕೊಂಡರು. ಈ ಮನವಿಯನ್ನು ಪರಿಗಣಿಸಿ ಕೇರಳ ಹೈಕೋರ್ಟ್ ಪ್ರಕರಣವನ್ನು ರದ್ದು ಮಾಡಿದೆ.
ವರಾಹ ರೂಪಂ ಪ್ರಕರಣವು ಮೊದಲ ಕೆಳ ಹಂತದ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಕೇರಳದ ಥೈಕ್ಕುಡಂ ಬ್ರಿಡ್ಜ್ ನವರು ತಮ್ಮ ನವಸರಂ ಹಾಡಿನ ನಕಲು ಎಂದು ದಾವೆ ಹೂಡಿದ್ದರು. ಕೆಳ ಹಂತದ ನ್ಯಾಯಾಲಯವು ವರಾಹ ರೂಪಂ ಹಾಡನ್ನು ಚಿತ್ರಮಂದಿರ ಮತ್ತು ಓಟಿಟಿಯಲ್ಲಿ ಪ್ರಸಾರ ಮಾಡಬಾರದು ಎಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಚಿತ್ರತಂಡ ಕೇರಳ ಹೈಕೋರ್ಟ್ ಮೆಟ್ಟಿಲು ಏರಿತ್ತು. ಚಿತ್ರತಂಡದ ವಿರುದ್ಧ ತಾತ್ಕಾಲಿಕ ಆದೇಶವೊಂದು ಹೊರ ಬಿದ್ದಿತ್ತು. ತಾತ್ಕಾಲಿಕವಾಗಿ ತಡೆ ಹಿಡಿದು ಆನಂತರ ಬಳಸಿಕೊಳ್ಳಲು ಅನುಮತಿ ನೀಡಿತ್ತು. ಇದೀಗ ಎಲ್ಲವೂ ಸುಖಾಂತ್ಯವಾಗಿದೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದ ಈ ಗೀತೆ ಸಿನಿಮಾ ಗೆಲುವಿಗೆ ಭಾರೀ ಸಾಥ್ ನೀಡಿತ್ತು. ಅಲ್ಲದೇ, ಕೇಳುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಪಾರ ಸಂಖ್ಯೆಯಲ್ಲಿ ಈ ಹಾಡನ್ನು ಡೌನ್ ಲೋಡ್ ಕೂಡ ಮಾಡಿಕೊಂಡಿದ್ದರು ಕೇಳುಗರು.
Web Stories