ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾವನ್ನು ಜಗತ್ತೇ ಹಾಡಿ ಹೊಗಳುತ್ತಿರುವ ಸಂದರ್ಭದಲ್ಲಿ ಬಂಗಾಲಿ (Bengali) ಸಿನಿಮಾ ನಿರ್ದೇಶಕ ಅಭಿರೂಪ್ ಬಸು (Abhiroop Basu) ಹಾಸ್ಯಾಸ್ಪದವಾಗಿ ಟೀಕೆ ಮಾಡಿದ್ದಾರೆ. ಇದೊಂದು ಹಾಸ್ಯಾಸ್ಪದ ಸಿನಿಮಾವಾಗಿದ್ದು, ಅತ್ಯಂತ ಕಳಪೆ ರೀತಿಯ ಕಥೆಯನ್ನು ಹೊಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಅಪ್ರಮಾಣಿಕವಾಗಿ ಕಥೆಯನ್ನು ಹೆಣೆಯಲಾಗಿದೆ ಎಂದೂ ಅವರು ಬರೆದಿದ್ದಾರೆ.
ಜಗತ್ತಿನ ಜನರು ಬುದ್ದಿವಂತರು. ಅವರ ಬುದ್ದಿವಂತಿಕೆಯನ್ನೇ ಈ ಸಿನಿಮಾ ಅನುಮಾನಿಸುತ್ತದೆ ಮತ್ತು ಅಣಕಿಸುತ್ತದೆ ಎಂದಿರುವ ಅವರು, ಕಥೆಯಲ್ಲಿ ಪ್ರಾಮಾಣಿಕತೆಗಿಂತ ಗಿಮಿಕ್ ಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಎಲ್ಲರೂ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡುತ್ತಾರೆ. ನನಗೆ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಅಥವಾ ಆಸಕ್ತಿ ಉಳಿಯಲೇ ಇಲ್ಲವೆಂದು ಅವರು ದೀರ್ಘವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ
ಅಭಿರೂಪ್ ಬಸು ಅವರ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಸಾಕಷ್ಟು ಜನರು ವಿರೋಧ ವ್ಯಕ್ತ ಪಡಿಸಿದ್ದಾರೆ. ಅತ್ಯಂತ ಪ್ರತಿಭಾವಂತ ಹಿರಿಯ ನಟರು, ನಿರ್ದೇಶಕರು ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿರುವಾಗ ನಿಮ್ಮ ಕೊಳಕು ಮನಸ್ಸಿನಿಂದ ಆಚೆ ಬನ್ನಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಸಿನಿಮಾ ಗೆಲುವನ್ನು ನಿಮ್ಮಿಂದ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವೆಂದು ಕಾಮೆಂಟ್ ಮಾಡಿದ್ದಾರೆ.
ರಜನಿಕಾಂತ್, ಕಂಗನಾ ರಣಾವತ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕರು ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಅದ್ಭುತ ಸಿನಿಮಾ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ರಿಷಬ್ ಶೆಟ್ಟಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ ರಜನಿಕಾಂತ್ ಈ ಹೊತ್ತಿನಲ್ಲಿ ಬಂಗಾಲದ ಸಿನಿಮಾ ನಿರ್ದೇಶಕ ಅಭಿರೂಪ್ ಬಸು, ನೆಗೆಟಿವ್ ಕಾಮೆಂಟ್ ನೀಡಿದ್ದಾರೆ.