- ವೀರು ಮಲ್ಲಣ್ಣ, ಸಿನಿಮಾ ನಿರ್ದೇಶಕ
ಕಾಂತಾರ ಸಿನಿಮಾದ ನಂತರ ಹುಟ್ಟಿಕೊಂಡ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳು ಒಂದು ಕಡೆ. ಕನ್ನಡ ಸಿನಿಮಾಗಳಲ್ಲಿನ ಪ್ರಾದೇಶಿಕತೆ ಮತ್ತು ಸೊಗಡಿನ ಚರ್ಚೆ ಒಂದು ಕಡೆ. ಮೊದಲನೆಯ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಎರಡನೆಯ ಚರ್ಚೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.. ಕನ್ನಡ ಸಿನಿಮಾಗಳಲ್ಲಿ ಇದುವರೆಗೆ ಬರೀ ಬೆಂಗಳೂರು, ಮಂಡ್ಯ, ಮೈಸೂರು, ಮಲೆನಾಡಿನ ಪ್ರಾದೇಶಿಕತೆ ಅಥವಾ ಪರಿಸರ ಅಥವಾ ಸೊಗಡು ಮಾತ್ರ ಇರುತ್ತಿತ್ತು. ಈಗ ಕರಾವಳಿಯ ಪ್ರಾದೇಶಿಕತೆ ಮತ್ತು ಸೊಗಡು ಹೆಚ್ಚೆಚ್ಚು ಪ್ರಸಿದ್ಧವಾಗುತ್ತಿದೆ ಆದರೆ “ಎಂದಿನಂತೆ ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡನ್ನು ಕನ್ನಡ ಚಿತ್ರರಂಗ ಕಡೆಗಣಿಸುತ್ತದೆ” ಎಂಬುದು. ಉತ್ತರ ಕರ್ನಾಟಕದ ಸೊಗಡನ್ನು ಹಾಸ್ಯಾಸ್ಪದವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂಬು ದೂರು ಮೊದಲಿನಿಂದಲೂ ಕೇಳುತ್ತಿದೆ, ಈಗಲೂ ಇದೆ. ಉತ್ತರ ಕರ್ನಾಟಕದಲ್ಲಿ ಒಂದು ಫಿಲ್ಮ್ ಚೇಂಬರ್ ಮಾಡಿದರೆ ಈ ಸಮಸ್ಯೆ ಸರಿಹೋಗುತ್ತದೆ, ಎಲ್ಲದಕ್ಕೂ ಬೆಂಗಳೂರಿನ ಮೇಲೆ ಅವಲಂಬಿತವಾಗುವುದರಿಂದಲೇ ಹೀಗಾಗಿದೆ, ಉತ್ತರ ಕರ್ನಾಟಕ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟಿದೆ, ಈಗ ಸಾಂಸ್ಕೃತಿಕವಾಗಿಯೂ ಕಡೆಗಣಿಸಲ್ಪಡುತ್ತಿದೆ ಎಂಬುದು ಸಾಮಾಜಿಕ ತಾಣಗಳ ಕಮೆಂಟ್ಸುಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು.
Advertisement
ವಾಸ್ತವದಲ್ಲಿ “ಫಿಲ್ಮ್ ಚೇಂಬರ್” ಮತ್ತು “ಪ್ರಾದೇಶಿಕತೆ” ಎರಡಕ್ಕೂ ಸಂಬಂಧವೇ ಇಲ್ಲ. ಸದ್ಯಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹೆಚ್ಚಾಗಿ ಸಕ್ರಿಯವಾಗಿರುವುದು ಸಿನಿಮಾದ ಹೆಸರುಗಳನ್ನು ನೋಂದಾಯಿಸಿಕೊಳ್ಳುವ ಕೆಲಸದಲ್ಲಿ ಮತ್ತು ಯಾವುದಾದರೂ ಸಮಸ್ಯೆ ಅಥವ ವಿವಾದ ಹುಟ್ಟಿಕೊಂಡಾಗ ಅದನ್ನು ಬಗೆಹರಿಸುವ ಪ್ರಯತ್ನದಲ್ಲಿ. ಸಿನಿಮಾದ ಹೆಸರು ನೋಂದಾಯಿಸಲು ಮತ್ತು ಸಿನಿಮಾದ ಸೆನ್ಸಾರ್ ಮಾಡಿಸಲು ಬೆಂಗಳೂರಿನ ಮೇಲೆ ಅವಲಂಬಿತವಾಗಬೇಕು ಹೊರತು, ಒಟ್ಟು ಸಿನಿಮಾ ಮಾಡಲು ಬೆಂಗಳೂರನ್ನು ಅವಲಂಬಿಸುವ ಅಗತ್ಯವೇ ಇಲ್ಲ. ಸೆನ್ಸಾರ್ ಮಂಡಳಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ, ಅದು ರಾಜ್ಯ ರಾಜಧಾನಿಯಲ್ಲದೇ ಬೇರೆಲ್ಲೂ ಬ್ರಾಂಚ್ ಆಫೀಸ್ ತೆರೆಯುವುದಿಲ್ಲ. ಸಿನಿಮಾ ಹೆಸರಿನ ದೃಢೀಕರಣ ಪತ್ರವಷ್ಟೇ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯ ನಡುವೆ ಇರುವ ನಂಟು. ಉಳಿದಂತೆ ಸಿನಿಮಾದ ಬೇರೆ ಎಲ್ಲ ಕೆಲಸಗಳನ್ನು ಕರ್ನಾಟಕದ ಯಾವುದೇ ಭಾಗದಲ್ಲಿ ಕುಳಿತು ಮಾಡಿಕೊಳ್ಳಬಹುದು. ತಂತ್ರಜ್ಞರು, ನಟರು ಮತ್ತು ಚಿತ್ರೀಕರಣಕ್ಕೆ ಅಗತ್ಯ ಉಪಕರಣಗಳನ್ನು ಸರಬರಾಜು ಮಾಡುವವರನ್ನು ಫೋನ್ ಮೂಲಕ ಸಂಪರ್ಕಿಸಿ, ವಿಡಿಯೋ ಕಾಲ್ ಮೂಲಕ ಭೇಟಿ ಮಾಡಿ ಮಾತನಾಡಿಕೊಂಡು, ಆನ್-ಲೈನ್ ಪೇಮೆಂಟ್ ಮಾಡಿ, contract mail confirmation ತೆಗೆದುಕೊಂಡು, physical documentationಗಳನ್ನು ಕೊರಿಯರ್ ಅಥವ speed post ಮೂಲಕ ವಿನಿಮಯ ಮಾಡಿಕೊಳ್ಳಬಹುದು.. ಇದನ್ನೂ ಓದಿ: ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
Advertisement
Advertisement
ಮಂಗಳೂರು ಸಹ ಬೆಂಗಳೂರಿನಿಂದ ಬಲುದೂರವೇ ಇದ್ದರೂ ಕನ್ನಡ ಸಿನಿಮಾದಲ್ಲಿ ಕರಾವಳಿಯ ಪ್ರಾದೇಶಿಕತೆ ಮತ್ತು ಸೊಗಡು ಪಸರಿಸಲು ಸಾಧ್ಯವಾಗುತ್ತದೆಂದರೆ, ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡು ಸಿನಿಮಾದಲ್ಲಿ ಬಳಕೆಯಾಗಲು ಬೆಂಗಳೂರು ದೂರವೆಂಬುದು ಕಾರಣ ಹೇಗಾಗುತ್ತದೆ!? ಜಿಲ್ಲೆಗೊಂದರಂತೆ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತೆರೆದರೂ ಅದು ಸಾಧ್ಯವಾಗುವುದಿಲ್ಲ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಎಲ್ಲ ಭಾಷೆಗಳ ಸಿನಿಮಾರಂಗಗಳಲ್ಲೂ ತಲಾ ಒಂದೊಂದೇ ಚಲನಚಿತ್ರ ವಾಣಿಜ್ಯ ಮಂಡಳಿಗಳಿದೆ. ಆದರೂ ಆಯಾ ಭಾಷೆಗಳ ಸಿನಿಮಾಗಳಲ್ಲಿ ಆಯಾ ಭಾಗದ ಎಲ್ಲ ಪ್ರಾದೇಶಿಕ ಸೊಗಡನ್ನು ಸಿನಿಮಾಗಳ ಮೂಲಕ ಜನರಿಗೆ ಪರಿಚಯ ಮಾಡಲಾಗಿದೆ ಮತ್ತು ಅಲ್ಲಿನ ಪ್ರೇಕ್ಷಕರಿಗೆ ಆಪ್ತವಾಗಿಸಲಾಗಿದೆ. ಅಲ್ಲಿ ಸಾಧ್ಯವಾದದ್ದು ಕನ್ನಡದಲ್ಲಿ ಯಾಕೆ ಸಾಧ್ಯವಾಗಿಲ್ಲ..?
Advertisement
ಇಚ್ಛಾಶಕ್ತಿಯ ಕೊರತೆ..!?
ಬೆಂಗಳೂರು, ಮೈಸೂರು, ಮಲೆನಾಡು ಮತ್ತು ಕರಾವಳಿ ಭಾಗಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ನಟರ, ರಂಗಭೂಮಿಯ ಹಿನ್ನೆಲೆ, ಇತಿಹಾಸ ಉತ್ತರ ಕರ್ನಾಟಕದ ಭಾಗದಲ್ಲಿದೆ. ಸಾಹಿತ್ಯಾಸಕ್ತರು, ಓದುಗರು ಮತ್ತು ಸಾಹಿತಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದೂ ಉತ್ತರ ಕರ್ನಾಟಕ ಎಂದರೆ ಸೂಳಿಮಗನ, ಅವನೌನ, ಬೋಸುಡಿಮಗನಾ, ಬಾಡ್ಕೋ, ಹಡ್ಶಿಮಗನಾ, ಹಡಾ ಎಂಬಿತ್ಯಾದಿ “ಬೈಗುಳಗಳೇ ನಮಗೆ ಭೂಷಣ, ಅವು ಬೈಗುಳಗಳಲ್ಲ ಬಹುಮಾನ” ಎಂದು ಬಿಂಬಿಸುತ್ತಾ, ಮೊದಲಿನಿಂದಲೂ ಉತ್ತರ ಕರ್ನಾಟಕ ಎಂದರೆ ಬೈಗುಳದ ಪದಗಳ ತವರು ಎಂಬ ತಪ್ಪು ಕಲ್ಪನೆಯನ್ನು ಮೂಡಿಸಲಾಗಿದೆ. ಇಂದಿನ 5G ಕಾಲದ ಉತ್ತರ ಕರ್ನಾಟಕದ Instagram, Facebook, YouTube Reels starಗಳು, double meaning short film ಶೂರರು ಉತ್ತರ ಕರ್ನಾಟಕ ಪ್ರಾದೇಶಿಕತೆ, ಪರಿಸರ ಮತ್ತು ಸೊಗಡನ್ನು ಅದೇ ರೀತಿಯಾಗಿ ಕಟ್ಟಿಕೊಡುತ್ತಿದ್ದಾರೆ. ಅದನ್ನು ಮೀರಿದ ಉತ್ತರ ಕರ್ನಾಟಕವನ್ನು ಯಾಕೆ ಕಟ್ಟಿಕೊಡುತ್ತಿಲ್ಲ? ಆ ಭಾಗದಲ್ಲಿ ಬರೆಯುವವರು ಕಡಿಮೆ ಇಲ್ಲ, ನಟಿಸುವವರು ಕಡಿಮೆ ಇಲ್ಲ, ಭೌಗೋಳಿಕವಾಗಿ ಸಾಕಷ್ಟು ವೈವಿದ್ಯತೆ ಇರುವ ಭಾಗ. ಉತ್ತರ ಕರ್ನಾಟಕ ಭಾಗದಿಂದ ಬಂದ ನಿರ್ಮಾಪಕರು, ನಟರು, ಬರಹಗಾರರು ಮತ್ತು ನಿರ್ದೇಶಕರುಗಳೂ ಸಹ ಸಿನಿಮಾದಲ್ಲಿ ಆ ಭಾಗದ ಪ್ರಾದೇಶಿಕತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಇರುವುದು ಬೇಸರದ ವಿಚಾರವೇ.
ಕರ್ನಾಟಕದ ಒಂದು ಪ್ರಾದೇಶಿಕ ಸೊಗಡು ಕರ್ನಾಟಕದ ಇತರೆ ಭಾಗದ ಜನರಿಗೆ ಅರ್ಥವಾಗುವುದಿಲ್ಲ, ಆ ಕಾರಣಕ್ಕೆ ಸಿನಿಮಾಗಳಲ್ಲಿ ಬಳಕೆ ಆಗುತ್ತಿಲ್ಲ ಎಂಬುದು ಸುಳ್ಳು. ಕನ್ನಡದ ಮಕ್ಕಳ ಕರುಳ ಬಳ್ಳಿ ಒಂದೇ, ಕನ್ನಡದವರಿಗೆ ಕನ್ನಡವೇ ಅರ್ಥವಾಗುವುದಿಲ್ಲ ಅನ್ನುವ ನೆಪವನ್ನು ಒಪ್ಪಲಾಗದು. ಕೋಲಾರ-ಮುಳಬಾಗಿಲು ಭಾಗದ ಕನ್ನಡ ಮಿಶ್ರಿತ ತೆಲುಗು ಸೊಗಡನ್ನು ಬಳಸಿಕೊಂಡು ನಿರ್ಮಿಸಿದ “ಸಿನಿಮಾಬಂಡಿ” ಎಂಬ ಹೆಸರಿನ ಸಿನಿಮಾವನ್ನು ಆ ಭಾಷೆ ಅರ್ಥವಾಗದ, ಸಬ್ ಟೈಟಲ್ ಓದಲು ಬರದ ಹಲವಾರು ಕನ್ನಡಿಗರೂ ನೋಡಿ ಮೆಚ್ಚಿದ್ದಾರೆ.. “ಅಪರೇಷನ್ ಜಾವಾ” ಎಂಬ ಸಬ್ ಟೈಟಲ್ಸ್ ಇಲ್ಲದ ಅಪ್ಪಟ ಮಲಯಾಳಂ ಸಿನಿಮಾ ಬಗ್ಗೆ ಕನ್ನಡದ ಪ್ರೇಕ್ಷಕರು ಹೊಗಳಿ ಬರೆದಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ “ಕಮರ್ಷಿಯಲ್” “ಮಾಸ್” “ಆಕ್ಷನ್” ಎನ್ನಿಸಿಕೊಳ್ಳುವ ಮಾದರಿಯ ಸಿನಿಮಾಗಳಿಗೆ ಸಿಕ್ಕುವ ಬೆಂಬಲ ಪ್ರಯೋಗಾತ್ಮಕ ಸಿನಿಮಾಗಳಿಗೆ ಸಿಕ್ಕಿದ್ದು ಕಡಿಮೆಯೇ. ಅಲ್ಲಿನ ಪ್ರಾದೇಶಿಕತೆ ಹಾಗೂ ಸೊಗಡನ್ನು ಗಂಭೀರವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡು ಸಣ್ಣ ಮಟ್ಟದ ಪ್ರಯೋಗಗಳನ್ನು ಮಾಡುತ್ತಾ ಅಲ್ಲಿನ ನಿಜವಾದ ಉತ್ತರ ಕರ್ನಾಟಕವನ್ನು ಕಟ್ಟಿಕೊಡುವ ಪ್ರಯತ್ನ ಇನ್ನು ಮುಂದಾದರೂ ಆಗಬೇಕು..
ಸಿನಿಮಾ ಕೆಲಸಗಳಿಗೆ ಬೆಂಗಳೂರನ್ನು ಅವಲಂಬಿಸುವುದು ಬೇಕಾಗಿಲ್ಲ. ರಾಯಚೂರಿಗೆ ಹೈದರಾಬಾದ್ ಸಮೀಪದಲ್ಲಿದೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಗೆ ಪುಣೆ ಹತ್ತಿರದಲ್ಲಿದೆ. ಕ್ಯಾಮರಾ ಲೆನ್ಸ್ ಇತ್ಯಾದಿ ಚಿತ್ರೀಕರಣಕ್ಕೆ ಅಗತ್ಯ ಉಪಕರಣಗಳನ್ನು ಬೆಂಗಳೂರಿನಿಂದ ತೆಗೆದುಕೊಳ್ಳುವ ಬದಲು ಪುಣೆ, ಮುಂಬೈ ಅಥವ ಹೈದರಾಬಾದಿನಿಂದ ಪಡೆದುಕೊಳ್ಳಬಹುದು. ಸಿನಿಮಾ ಚಿತ್ರೀಕರಣೋತ್ತರ ಕೆಲಸಗಳಿಗೆ ಹೆಚ್ಚಿನ ಸೌಲಭ್ಯಗಳು ಪುಣೆ, ಮುಂಬೈ ಮತ್ತು ಹೈದರಾಬಾದಿನಲ್ಲಿ ಸಿಗುತ್ತದೆ. ಬಂಡವಾಳ ಹೂಡಿಕೆ ಸಾಧ್ಯವಾದರೆ ಉತ್ತರ ಕರ್ನಾಟಕದಲ್ಲಿ Edit, Dubbing, Sound Design suit ಹಾಕಿಕೊಳ್ಳುವುದು ಸಾಧ್ಯ. Foley ಕೆಲಸಗಳನ್ನು ಮುಂಬೈ, ಹೈದರಾಬಾದ್ ಅಥವ ಪುಣೆ ಸ್ಟುಡಿಯೋಗಳಿಂದ ಮಾಡಿಸಿಕೊಳ್ಳಬಹುದು. ಕಲರ್ ಗ್ರೇಡಿಂಗ್ ಮಾಡಲು DaVinci Resolve software ಉಚಿತವಾಗಿ ಸಿಗುತ್ತದೆ, freelancing colorists ಸಿಗುತ್ತಾರೆ. ಇನ್ನು ಬೇಕಿರುವುದು ಇಚ್ಛಾಶಕ್ತಿ ಮತ್ತು ಸಿನಿಮಾ ಪ್ರೇಮಿಗಳ ಬೆಂಬಲ. ಸಾಂಸ್ಕೃತಿಕವಾಗಿ ದೃಶ್ಯಮಾಧ್ಯಮದ ಮೂಲಕ ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡನ್ನು ಪಸರಿಸುವ ಕೆಲಸ..