ಕಾಂತಾರ ಚಾಪ್ಟರ್-1 ಸಿನಿಮಾ ಮೂಲಕ ದೇಶಾದ್ಯಂತ ಖ್ಯಾತಿ ಪಡೆದಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ಇಂದು (ಡಿ.10) ಹುಟ್ಟುಹಬ್ಬದ ಸಂಭ್ರಮ. 28ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರುಕ್ಮಿಣಿ ವಸಂತ್ ಕಾಂತಾರ-1 ಸಿನಿಮಾ ನಂತರ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಹೊಂಬಾಳೆ ಸಂಸ್ಥೆ ಜಾಲತಾಣದಲ್ಲಿ ಪೋಸ್ಟ್ ಹಾಕಿ ರುಕ್ಮಿಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.
2019ರಲ್ಲಿ ತೆರೆಕಂಡ ಬಿರ್‌ಬಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರುಕ್ಮಿಣಿ ವಸಂತ್ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಅವಕಾಶಗಳನ್ನ ಗಿಟ್ಟಿಸಿಕೊಂಡಿದ್ದಾರೆ. ಅದರಲ್ಲೂ ಈ ವರ್ಷ ತೆರೆಕಂಡ ಕಾಂತಾರ ಚಾಪ್ಟರ್-1 ಸಿನಿಮಾ ಮೂಲಕ ಕನಕಾವತಿಯಾಗಿ ಮತ್ತಷ್ಟು ಖ್ಯಾತಿಯನ್ನ ಗಳಿಸಿದ್ದಾರೆ ರುಕ್ಮಿಣಿ.
ಅಂದಹಾಗೆ ರಾಕಿಂಗ್‌ಸ್ಟಾರ್ ಯಶ್ ಅವರ ಕನಸಿನ ಪ್ರಾಜೆಕ್ಟ್ ಟಾಕ್ಸಿಕ್ ಸಿನಿಮಾದಲ್ಲೂ ನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ನಟ ಶ್ರೀಮುರಳಿ ಅಭಿನಯದ `ಬಘೀರ’, ರಕ್ಷಿತ್ ಶೆಟ್ಟಿ ಜೊತೆಗೆ `ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಅದ್ಭುತವಾಗಿ ಪರ್ಫಾಮೆನ್ಸ್ ನೀಡಿದ್ದಾರೆ. ಶಿವರಾಜ್‌ಕುಮಾರ್ ಅವರ ಜೊತೆಗೆ `ಭೈರತಿ ರಣಗಲ್’ ಸಿನಿಮಾದಲ್ಲಿ ಕೂಡಾ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ, ಇಷ್ಟೇ ಅಲ್ಲದೇ ಮಣಿರತ್ನಂ ಅವರ ಸಿನಿಮಾದಲ್ಲೂ ನಟಿ ರುಕ್ಮಿಣಿ ವಸಂತ್ ನಟಿಸಲಿದ್ದಾರಂತೆ.



