ಕಾಂತಾರ ಸಿನಿಮಾದ ಬಗ್ಗೆ ಬರಹಗಾರ, ಚಿಂತಕ ರೋಹಿತ್ ಚಕ್ರತೀರ್ಥ ವಿಭಿನ್ನ ರೀತಿಯ ಒಳನೋಟವನ್ನು ಕಟ್ಟಿಕೊಟ್ಟಿದ್ದಾರೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಆ ಬರಹವನ್ನು ಇಲ್ಲಿ ಯಥಾವತ್ತಾಗಿ ಹಾಕಲಾಗಿದೆ.
ಒಂದೇ ಸಿನೆಮಾವನ್ನು ಒಂದು ದಿನದಲ್ಲಿ ಎರಡು ಸಲ ನಾನು ನೋಡಿದ್ದು ಇದೇ ಮೊದಲು. ಅರ್ಥವಾಗಲಿಲ್ಲ ಎಂದಲ್ಲ; ಆ ಸಿನೆಮಾವನ್ನು ಮತ್ತೊಮ್ಮೆ ಫೀಲ್ ಮಾಡಬೇಕು ಎಂದೇ ಎರಡನೇ ಸಲ ಹೋಗಿದ್ದು’ ಎಂದಿದ್ದಾನೆ ಒಬ್ಬ ಸಿನಿಮಾ ವಿಮರ್ಶಕ. ಆತ ಉತ್ತರ ಭಾರತದವನು. ಭೂತಕೋಲದ ಪರಿಕಲ್ಪನೆಯೇ ಅವನಿಗೆ ಹೊಚ್ಚಹೊಸದು. ಭೂತವಾಡುವ ಅಷ್ಟೂ ಮಾತುಗಳು ಹಿಂದಿ ಸಿನೆಮಾದಲ್ಲಿ ತುಳುವಿನಲ್ಲೇ ಬಂದಿವೆ. ‘ಅದನ್ನು ಖಂಡಿತ ಡಬ್ ಮಾಡಬಾರದು, ಅದು ತುಳುವಿನಲ್ಲೇ ಇರಬೇಕು’ ಎಂದು ಬೇರೆ ಆತ ಸಮರ್ಥನೆ ಕೊಟ್ಟ.
Advertisement
Advertisement
ಯೂಟ್ಯೂಬ್ ನೋಡಿ. ಕಾಂತಾರದ ಬಗ್ಗೆ ಹಿಂದಿ ವಿಮರ್ಶೆಗಳು ರಾಶಿರಾಶಿ ಬಂದು ಬಿದ್ದಿವೆ. ಹಾಗೆಯೇ ತೆಲುಗು, ತಮಿಳು ವಿಮರ್ಶೆಗಳೂ ದಂಡಿಯಾಗಿವೆ. ಭಾರತದ ಉದ್ದಗಲದ ಎಲ್ಲ ಪ್ರದೇಶಗಳ ಮಂದಿಯೂ ಈ ಸಿನೆಮಾವನ್ನು ಅಕ್ಷರಶಃ ಸಂಭ್ರಮಿಸುತ್ತಿದ್ದಾರೆ. ಭೂತ ಎಂದರೇನು ಕೋಲ ಎಂದರೇನು ಕಂಬಳ ಎಂದರೇನು ಎಂದು ಗೊತ್ತಿಲ್ಲದ ಯಾವುದೋ ಶಿಮ್ಲ, ಕಾನ್ಪುರಗಳ ಮಂದಿಯೂ ಇದನ್ನು ಎಂಜಾಯ್ ಮಾಡುತ್ತಿದ್ದಾರೆ, ಮತ್ತೆ ಮತ್ತೆ ಥಿಯೇಟರಿಗೆ ನುಗ್ಗುತ್ತಿದ್ದಾರೆ ಎಂದರೆ ಅವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವ ಸಂಗತಿ ಯಾವುದು? ಬಿಜಿಎಮ್ ಅದ್ಭುತವಾಗಿದೆ, ದೃಶ್ಯಗಳು ಕಾವ್ಯಾತ್ಮಕವಾಗಿವೆ, ಡೈಲಾಗುಗಳು ಲವಲವಿಕೆಯಿಂದ ಕೂಡಿವೆ, ನಟನೆ ಚೆನ್ನಾಗಿದೆ ಎಲ್ಲವೂ ನಿಜ. ಆದರೆ ಈ ಒಂದೊಂದು ಅಂಶಗಳನ್ನು ಮೆಚ್ಚಿಕೊಂಡು ಎರಡನೇ ಶೋ ಟಿಕೇಟ್ ತೆಗೆದುಕೊಳ್ಳುವವರು ಹೆಚ್ಚಿಲ್ಲ. ಎರಡು, ಮೂರು, ನಾಲ್ಕು ಸಲ ನೋಡಬೇಕು ಎಂದು ಬಯಸುತ್ತಿರುವವರೆಲ್ಲರನ್ನೂ ಸೆಳೆಯುತ್ತಿರುವುದು ಕಾಂತಾರದ (Kantara) ಕಥೆಯೇ. ಮೇಲ್ನೋಟಕ್ಕೇನೋ ಇದು ಬಂಡಾಯದ, ಸಂಘರ್ಷದ ಕತೆ. ಆದರೆ ಆಳದಲ್ಲಿ ಅದು ಭಾರತದ ಮಣ್ಣಿನ ವಾಸನೆಯನ್ನು ಮೂಗಿಗೆ ಹಿಡಿಯುವ ಕತೆ. ಸನಾತನ ಧರ್ಮದ ಬೇರುಗಳನ್ನು ಕಾಲಿಗೆ ತೊಡರಿಸುವ ಕತೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ
Advertisement
Advertisement
ಭಾರತದ ನೂರಾನಲವತ್ತು ಕೋಟಿ ಜನಸಂಖ್ಯೆಯಲ್ಲಿ 80 ಕೋಟಿಯಷ್ಟೇ ಹಿಂದುಗಳಿದ್ದಾರೆಂದಾದರೂ ಭಾವಿಸೋಣ. ಈ ಹಿಂದುಗಳಲ್ಲಿ ತಮ್ಮ ಮನೆಯ ಆಚಾರ ವಿಚಾರಗಳನ್ನೇ ಪ್ರಶ್ನಿಸುವ ಎಬಡ ಎಡಬಿಡಂಗಿಗಳ ಸಂಖ್ಯೆ ಒಂದು ಲಕ್ಷವೂ ದಾಟಲಿಕ್ಕಿಲ್ಲ. ಮಿಕ್ಕವರೆಲ್ಲ ಅದೆಷ್ಟೇ ಆಧುನಿಕರಾದರೂ, ನಗರವಾಸಿಗಳಾದರೂ, ಕುಟುಂಬಗಳಿಂದ ದೂರವಿದ್ದರೂ ಅವರೊಳಗೊಂದು ಸನಾತನರಕ್ತ ಹರಿಯುತ್ತಿದೆ. ಜನ್ಮಜನ್ಮಾಂತರಗಳಲ್ಲಿ ಸೇರಿಕೊಂಡ ಸಂಸ್ಕಾರದ ಅಷ್ಟಿಷ್ಟಾದರೂ ಅಂಶ ಅವರೆಲ್ಲರೊಳಗೂ ಇದೆ. ಕಾಶ್ಮೀರದ ಹಿಂದು ಬೇರೆಯಲ್ಲ, ಕನ್ಯಾಕುಮಾರಿಯ ಹಿಂದು ಬೇರೆಯಲ್ಲ. ಭಾರತದ ನಾಲ್ದೆಸೆಗಳಲ್ಲಿರುವ ಎಲ್ಲ ಹಿಂದು ಸಮುದಾಯಗಳಲ್ಲೂ ಸಮಾನಾಂಶಗಳಿವೆ. ಮೇಲ್ನೋಟಕ್ಕೆ ಅವು ಭಿನ್ನವಾಗಿ, ಕೆಲವೊಮ್ಮೆ ತದ್ವಿರುದ್ಧವಾಗಿ ಕಾಣಬಹುದು. ಆದರೆ ಆ ಎಲ್ಲ ಆಚರಣೆ, ಸಂಸ್ಕಾರ, ಪೂಜೆಪುನಸ್ಕಾರಗಳ ಮೂಲ ಒಂದೇ. ಭಾರತವನ್ನು ಪಠ್ಯಪುಸ್ತಕಗಳಲ್ಲಿ “ವಿವಿಧತೆಯಲ್ಲಿ ಏಕತೆ” ಎನ್ನುವುದು ರೂಢಿ. ಅದು ಶುದ್ಧಾಂಗ ತಪ್ಪು. ಭಾರತದಲ್ಲಿರುವುದು “ಏಕತೆಯಲ್ಲಿ ವಿವಿಧತೆ”. ಆ ಏಕವೇ ಸನಾತನಧರ್ಮ. ಒಂದೇ ಕಾಂಡ ಇಲ್ಲಿ ಹಲವು ರೆಂಬೆಕೊಂಬೆಗಳನ್ನು ದೇಶಾದ್ಯಂತ ಪಸರಿಸಿದೆ. ದೈವದೇವರುಗಳಲ್ಲಿ ನಂಬಿಕೆ ಇಡುವುದು ಎಂಬ ಮೂಲಾಂಶವೇ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಪ್ರಕಟವಾಗಬಹುದು. ಆದರೆ “ನಂಬಿಕೆ” ಎಂಬ ಮೂಲದ್ರವ್ಯ ಒಂದೇ. ಮತ್ತು ಈ ನಂಬಿಕೆ, ರಿಲಿಜನ್ನುಗಳು ಹೇರುವ “ಬಿಲೀಫ್”ಗಿಂತ ಸಂಪೂರ್ಣ ಭಿನ್ನವಾದದ್ದು. ಹಾಗಾಗಿಯೇ ಹಿಂದುಗಳು ದೇಶದ ವಿವಿಧ ಭಾಗಗಳಲ್ಲಿದ್ದರೂ ಕನೆಕ್ಟ್ ಆಗುತ್ತಾರೆ. ಕಾಮಾಕ್ಯಕ್ಕೆ ಹೋದರೂ ಶೃಂಗೇರಿಗೆ ಹೋದರೂ ಹಿಂದುವಿಗೆ ಕಾಣುವುದು ಶಕ್ತಿಯೇ – ಹೊರಗಿನ ರೂಪ ಭಿನ್ನವಾದ ಮಾತ್ರಕ್ಕೆ ಎರಡೂ ಬೇರೆ ಬೇರೆ ದೇವತೆಗಳೆಂಬ ನಿರ್ಣಯವನ್ನು ಹಿಂದು ಎಳೆಯಲಾರ.
ಹಿಂದು ಮೌನವಾಗಿರುತ್ತಾನೆ ನಿಜ, ಆದರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟ, ಖುಷಿ, ಸಂಭ್ರಮಗಳಿಗೆ ಸ್ಪಂದಿಸುತ್ತಾನೆ ಕೂಡ. ಹಾಗಾಗಿಯೇ ಕಾಶ್ಮೀರದ ಸೀಮಿತ ಪ್ರಾಂತ್ಯದ ಸಮಸ್ಯೆಯನ್ನು ತೋರಿಸಿದ “ಕಾಶ್ಮೀರ್ ಫೈಲ್ಸ್” ದೇಶಾದ್ಯಂತ ಜಯಭೇರಿ ಬಾರಿಸಿತು. ನೋಡಿದ ಪ್ರತಿಯೊಬ್ಬ ಹಿಂದುವಿಗೆ ಇದು ನನ್ನ ಕಥೆ, ನನ್ನದೇ ಕಥೆ… ಅನ್ನಿಸಿತು. ಕರಾವಳಿಯ ಸಣ್ಣ ಊರೊಂದರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡರೂ ಕಾಂತಾರ ದೇಶದುದ್ದಕ್ಕೆ ಧೂಳೆಬ್ಬಿಸುತ್ತಿರುವುದೂ ಇದೇ ಕಾರಣಕ್ಕೆ. ಉತ್ತರದ, ಈಶಾನ್ಯದ, ವಾಯವ್ಯದ ಹಿಂದುಗಳಿಗೆ ಆ ಭೂತ – ನಮ್ಮದಲ್ಲ ಎಂದೇನೂ ಅನ್ನಿಸಿಲ್ಲ. ತಮ್ಮ ಊರುಗಳಲ್ಲಿ ನಡೆಯುವ ಯಾವುದೋ ಆಚರಣೆಗೆ, ಸಂಪ್ರದಾಯಗಳಿಗೆ ಭೂತಕೋಲವನ್ನು ಸಮೀಕರಿಸಿಕೊಂಡು ಆ ಎಲ್ಲ ಹಿಂದುಗಳೂ ಕಾಂತಾರದ ಕಥೆಯನ್ನು ಲೋಕಲೈಸ್ ಮಾಡಿಕೊಂಡಿದ್ದಾರೆ. ಹೇಗೆ ಕಾಶ್ಮೀರದ ಪಂಡಿತನ ಕಥೆ ನಮ್ಮೆಲ್ಲರ ಕಥೆಯೂ ಆಗುತ್ತದೋ ಹಾಗೆಯೇ ನಲ್ಕೆಯವನ ಕಥೆ ಕೂಡ ನಮ್ಮೆಲ್ಲರದೂ ಆಗುತ್ತದೆ.
ಗಮನಿಸಿ: ಕಾಶ್ಮೀರ್ ಫೈಲ್ಸ್ ಆಗಲಿ ಕಾಂತಾರವಾಗಲಿ, ಒಂದು ಚಿತ್ರವನ್ನು ಅದು ಇದ್ದಂತೆಯೇ ಪ್ರೇಕ್ಷಕನ ಮುಂದಿಡುತ್ತವೆಯೇ ಹೊರತು ಉಪದೇಶಕ್ಕೆ ಹೊರಡುವುದಿಲ್ಲ. ಇರುವ ಸಂಗತಿಯನ್ನು ಸೀಳಿ ಸೀಳಿ ಸಂಶೋಧನೆಗಿಳಿಯುವುದಿಲ್ಲ. ಎಡಬಿಡಂಗಿ ವಾದಗಳನ್ನು ಸುಖಾಸುಮ್ಮನೆ ತುರುಕುವುದಿಲ್ಲ. ಈ ದೇಶದ ಮಕ್ಕಳು, ನೆಲಮೂಲ ಸಂಸ್ಕೃತಿಯ ಜನ ತಮ್ಮ ನೆಲವನ್ನು ಉಳಿಸಿಕೊಳ್ಳಬೇಕಾದರೆ ದೈವದ ಆಶೀರ್ವಾದವೊಂದು ಇರಬೇಕಾಗುತ್ತದೆ ಎಂಬ – ಹಿಂದುವನ್ನು ಬಹಳ ಸುಲಭವಾಗಿ ಕನ್ವಿನ್ಸ್ ಮಾಡುವ ಒಂದು ಎಳೆಯ ಮೇಲೆ ‘ಕಾಂತಾರ’ದ ಇಡೀ ಕತೆ ನಿಂತಿದೆ. ಕಾಶ್ಮೀರ್ ಫೈಲ್ಸ್ ಕೂಡ ನೆಲಕ್ಕೆ ಸಂಬಂಧಪಟ್ಟ ಕತೆಯೇ. ಆದರೆ ಅಲ್ಲಿಯ (ಕಾಶ್ಮೀರದ) ಹಿಂದು, ದೈವವನ್ನು ಮರೆತಿದ್ದಾನೆ. ಒಂದಾನೊಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಮಾರ್ತಾಂಡನ ದೇವಸ್ಥಾನವಾಗಲೀ ಶಾರದಾಪೀಠವಾಗಲೀ ಕಾಶ್ಮೀರದಲ್ಲಿ ೧೯೯೦ರ ಸಮಯದಲ್ಲಿ ಶಕ್ತಿಪೀಠಗಳಾಗಿ ಉಳಿದಿರಲಿಲ್ಲ. ರಾಕ್ಷಸರು ನುಗ್ಗಿಬಂದಾಗ ದೈವದ ಮೊರೆಹೋಗಬೇಕೆಂದು ಕಾಶ್ಮೀರದ ಹಿಂದುವಿಗೆ ಅನ್ನಿಸಲೇ ಇಲ್ಲ. ರಾತ್ರೋರಾತ್ರಿ ಅವರೆಲ್ಲರೂ ತಮ್ಮ ಮನೆಮಠಗಳನ್ನೆಲ್ಲ ತೊರೆದು ದಿಕ್ಕಾಪಾಲಾಗಿ ಚದುರಬೇಕಾಯಿತು. ‘ಕಾಶ್ಮೀರ್ ಫೈಲ್ಸ್’ ಸಮಸ್ಯೆಯ ಬಗ್ಗೆ ಮಾತಾಡಿತು; ‘ಕಾಂತಾರ’ ಆ ಸಮಸ್ಯೆಗೆ ಉತ್ತರ ಪಡೆಯುವ ದಾರಿಯನ್ನು ತೋರಿಸುತ್ತಿದೆ. ಈ ಎರಡೂ ಚಿತ್ರಗಳು ಹಿಂದುವಿನ ಭಾವಕೋಶದ ತಂತಿಯನ್ನು ಮೀಟಲು ಸಾಧ್ಯವಾದದ್ದಕ್ಕೇ ಜಯಭೇರಿ ಹೊಡೆದಿವೆ.
ವೈದಿಕ, ಅವೈದಿಕ, ಆರ್ಯ, ದ್ರಾವಿಡ, ಬ್ರಾಹ್ಮಣ, (Brahmin) ಶೂದ್ರ, ಮಾರ್ಗ, ದೇಸಿ ಎಂಬ ತಲೆಬುಡವಿಲ್ಲದ ಚರ್ಚೆಗಳನ್ನು ಎಡಬಿಡಂಗಿಗಳು ಬೆಳೆಸುತ್ತ ಹೋದಷ್ಟೂ ಹಿಂದೂಧರ್ಮದ ಅತ್ಯಂತ ಮೂಲಭೂತ ತತ್ತ್ವಗಳನ್ನು ಶೋಧಿಸುವ ‘ಕಾಂತಾರ’ದಂಥ ಸಿನೆಮಗಳು ಯಶಸ್ಸಿನ ಓಟದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತವೆ. ಏಕೆಂದರೆ ‘ಕಾಂತಾರ’ವನ್ನು ಮರಳಿ ಮರಳಿ ನೋಡಲು ನುಗ್ಗುತ್ತಿರುವ ಪ್ರೇಕ್ಷಕನ ಉತ್ಸಾಹವೆಂಬುದು – ಹಿಂದುತ್ವವನ್ನು ಒಡೆಯಲು ಹವಣಿಸುತ್ತಿರುವ ಭಂಜಕಶಕ್ತಿಗಳಿಗೆ ಕೊಡುತ್ತಿರುವ ಪರೋಕ್ಷ ಬೆತ್ತದೇಟು ಕೂಡ.