ಉಡುಪಿ: ಕಾಂತರ-1 (Kantara-1) ಚಿತ್ರದ ನೃತ್ಯ ಕಲಾವಿದರಿದ್ದ (Junior Dancers) ವಾಹನ ಪಲ್ಟಿಯಾದ ಪರಿಣಾಮ 6 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಉಡುಪಿಯಲ್ಲಿ (Udupi) ನಡೆದಿದೆ.
ಉಡುಪಿಯ ಮುದೂರಿನಲ್ಲಿ (Mudoor) ಚಿತ್ರೀಕರಣ ಮುಗಿಸಿ ಕೊಲ್ಲೂರು ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. 25 ಮಂದಿ ನೃತ್ಯ ಕಲಾವಿದರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲ್ಲೂರು ಹಾಲ್ಕಲ್ ಮಾರ್ಗದಲ್ಲಿ ಘಟನೆ ನಡೆದಿದೆ. ಗಾಯಾಳುಗಳ ಪೈಕಿ ಹಲವರಿಗೆ ಜಡ್ಕಲ್ ಮಹಾಲಕ್ಷ್ಮಿ ಕ್ಲೀನಿಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೂನಿಯರ್ ನೃತ್ಯ ಕಲಾವಿದರು ಹಾಡಿನ ಚಿತ್ರೀಕರಣಕ್ಕಾಗಿ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ. ಇನ್ನೂ ನಾಲ್ಕು ದಿನಗಳ ಕಾಲ ಚಿತ್ರೀಕರಣ ಬಾಕಿಯಿದೆ.