ಲಕ್ನೋ: ಸಾಮಾಜಿಕ ಜಾಲತಾಣ ಇನ್ ಸ್ಟಾದಲ್ಲಿ ಪರಿಚಯವಾಗಿ, ಈ ಪರಿಚಯವು ಪ್ರೀತಿಗೆ ತಿರುಗಿ ಡೇಟಿಂಗ್‌ಗೂ ಕರೆದಿದ್ದಾನೆ. ಈ ವೇಳೆ ಸತ್ಯ ಗೊತ್ತಾಗಿ ಯುವಕ ರೊಚ್ಚಿಗೆದ್ದ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದಲ್ಲಿ (Uttarpradesh Kanpur) ನಡೆದಿದೆ.
ಘಟನೆ ವಿವರ: 20 ವರ್ಷದ ದೀಪೇಂದ್ರ ಸಿಂಗ್ Instagram ನಲ್ಲಿ ಯುವತಿ ಎಂದು ಚಾಟ್ ಮಾಡಲು ಪ್ರಾರಂಭಿಸಿದ್ದಾನೆ. ಕ್ರಮೇಣ ಇಬ್ಬರಲ್ಲಿಯೂ ಪ್ರೀತಿ ಆರಂಭವಾಗಿದೆ. ಕೆಲ ದಿನಗಳ ಬಳಿಕ ಒಂದು ದಿನ ಆತ ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ದಾನೆ. ಅಂತೆಯೇ ಭೇಟಿಗೆ ದಿನ ಕೂಡ ನಿಗದಿ ಮಾಡಿದ್ದಾನೆ. ಅದರಂತೆ ದೀಪೇಂದ್ರ ಸಿಂಗ್ ಹೇಳಿದ ಸ್ಥಳಕ್ಕೆ ಆಕೆ ಬಂದಿದ್ದಾಳೆ. ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಯುವತಿಯಾಗಿ ಕಾಣಿಸಿಕೊಂಡಿದ್ದಾಕೆಗೆ ಹೆಚ್ಚು ವಯಸ್ಸಾದುದನ್ನು ನೋಡಿ ದೀಪೇಂದ್ರ ಆಘಾತಕ್ಕೊಳಗಾಗಿದ್ದಾನೆ. ಮೊದಲು ಆಕೆಯನ್ನು ನೋಡಿ ಕನ್ಫ್ಯೂಸ್ ಆದ ಯುವಕ, ನಂತರ ಆಕೆಯನ್ನು ವಿಚಾರಿಸಿದ್ದಾನೆ. ಈ ವೇಳೆ ಆಕೆ ತನಗೆ 45 ವರ್ಷ ಎಂದು ಬಹಿರಂಗಪಡಿಸಿದ್ದಾಳೆ.
ಪ್ರಿಯತಮೆಯ ವಯಸ್ಸು ಕೇಳಿ ಕೋಪಗೊಂಡ ದೀಪೇಂದ್ರ, ಆಕೆಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಅಲ್ಲದೇ ಆಕೆಯ ತಲೆಗೂದಲನ್ನು ಹಿಡಿದು ನೆಲಕ್ಕೆ ಹೊಡೆದಿದ್ದಾನೆ. ಹಲ್ಲೆಗೈದ ಬಳಿಕ ಆಕೆಯ ಮೊಬೈಲ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ತನಗೆ ಥಳಿಸಿದ್ದಾರೆ. ನಂತರ ನನ್ನ ಮೊಬೈಲ್ ಫೋನ್ ಕದ್ದಿದ್ದಾರೆ ಎಂದು ದೂರಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ 20 ವರ್ಷದ ಯುವಕನನ್ನು ಪೊಲೀಸರು ಕಾನ್ಪುರದಲ್ಲಿ ಬಂಧಿಸಿದ್ದಾರೆ. ತನಿಖೆಯ ವೇಳೆ, ಮಹಿಳೆಗೆ 45 ವರ್ಷ ವಯಸ್ಸಾಗಿದೆ ಎಂದು ತಿಳಿದು ಥಳಿಸಿದ್ದಾಗಿ ಪೊಲೀಸರಿಗೆ ದೀಪೇಂದ್ರ ತಿಳಿಸಿದ್ದಾನೆ.