LatestMain PostNational

ಮಗು ಎತ್ತಿಕೊಂಡಿದ್ದ ವ್ಯಕ್ತಿ ಮೇಲೆ ಲಾಠಿ ಚಾರ್ಜ್ ಮಾಡಿದ್ದ ಪೊಲೀಸ್ ಅಮಾನತು

ಲಕ್ನೋ: ಮಗು ಎತ್ತಿಕೊಂಡಿದ್ದ ವ್ಯಕ್ತಿ ಮೇಲೆ ಪೊಲೀಸ್ ಸಿಬ್ಬಂದಿ ಲಾಠಿ ಚಾರ್ಜ್ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪರಿಣಾಮವಾಗಿ ಉತ್ತರ ಪ್ರದೇಶ ಪೊಲೀಸ್ ಠಾಣೆಯ ಹೌಸ್ ಆಫೀಸರ್ (ಎಸ್‍ಎಚ್‍ಒ)ನನ್ನು ಅಮಾನತುಗೊಳಿಸಲಾಗಿದೆ.

ಕಾನ್ಪುರ ವ್ಯಾಪ್ತಿಯ ಇನ್ಸ್ ಪೆಕ್ಟರ್‌ ಜನರಲ್ ಪ್ರಶಾಂತ್ ಕುಮಾರ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಗುವನ್ನು ಎತ್ತಿಕೊಂಡಿದ್ದ ವ್ಯಕ್ತಿ ಮೇಲೆ ಪೊಲೀಸ್ ಸಿಬ್ಬಂದಿ ಮನಸೋಇಚ್ಛೆ ಥಳಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾವು ಇನ್ಸ್ ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ?

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ಹೊರಭಾಗದಲ್ಲಿ ಗುರುವಾರ ಈ ಘಟನೆ ನಡೆದಿದೆ. ಕಠಿಣ ಸಂದರ್ಭದಲ್ಲಿ ಜನರ ಜೊತೆ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ವೀಡಿಯೋದಲ್ಲಿ, ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಆ ವ್ಯಕ್ತಿಯನ್ನು ದೊಣ್ಣೆಗಳಿಂದ ಥಳಿಸಿದ್ದಾರೆ. ಮತ್ತೊಬ್ಬ ಪೊಲೀಸ್ ಆ ವ್ಯಕ್ತಿಯ ತೋಳಿನಲ್ಲಿದ್ದ ಮಗುವನ್ನು ಹಿಂಸಾತ್ಮಕವಾಗಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಕ್ರೌರ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಡೆದಿದ್ದೇನು?
ಗುರುವಾರ ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲಾ ಆಸ್ಪತ್ರೆಯ ಹೊರಭಾಗದಲ್ಲಿ ಫೋರ್ಥ್ ಕ್ಲಾಸ್ ನೌಕರರು ಒಪಿಡಿ(ಹೊರರೋಗಿ ವಿಭಾಗದ ಚಿಕಿತ್ಸೆ)ಗೆ ಬೀಗ ಹಾಕಿ ಧರಣಿ ನಡೆಸಲಾಗಿದೆ. ಈ ವೇಳೆ ರಜನೀಶ್ ಶುಕ್ಲಾ ನೇತೃತ್ವದಲ್ಲಿ ಪ್ರತಿಭಟನಾಕಾರರು, ವೈದ್ಯರು ಮತ್ತು ರೋಗಿಗಳನ್ನು ಒಪಿಡಿಯಿಂದ ಬಲವಂತವಾಗಿ ಹೊರಗೆ ಕರೆಯುತ್ತಿದ್ದರು. ಇದನ್ನೂ ಓದಿ: ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ

ಈ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದ ಅಕ್ಬರ್‍ಪುರ ಪೊಲೀಸರು ಉಪವಿಭಾಗಾಧಿಕಾರಿ ವಾಗೀಶ್ ಕುಮಾರ್, ಸರ್ಕಲ್ ಅಧಿಕಾರಿ ಅರುಣ್ ಕುಮಾರ್ ಮತ್ತು ಎಸ್‍ಎಚ್‍ಒ ವಿನೋದ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರತಿಭಟನಾಕಾರರ ಮನವೊಲಿಸಿ ಧರಣಿ ಕೊನೆಗೊಳಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗದಂತೆ ತಡೆಯಲು ಪ್ರಯತ್ನಿಸಿದ್ದಾರೆ. ಆಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

Leave a Reply

Your email address will not be published.

Back to top button