ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ನಿರ್ಮಾಣಗೊಂಡಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರ ಅಧಿಕೃತವಾಗಿ ಲೋಕಾರ್ಪಣೆಯಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಜೊತೆಯಾಗಿ ಬೆಳಗ್ಗೆ 9.55ಕ್ಕೆ ಅಬುಧಾಬಿಗೆ ಹೊರಟ ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಹಸಿರು ಬಾವುಟ ತೋರಿಸಿ ಅಧಿಕೃತವಾಗಿ ಚಾಲನೆ ನೀಡಿದರು.
Advertisement
Advertisement
ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಾಗುವ ಮೂಲಕ ದೇಶದಲ್ಲಿ 4 ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ. ಈಗಾಗಲೇ ತಿರುವಂತಪುರಂ, ಕೋಳಿಕ್ಕೋಡ್, ಕೊಚ್ಚಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.
Advertisement
ಕಣ್ಣೂರು ನಗರದಿಂದ 16 ಕಿ.ಮೀ ದೂರದಲ್ಲಿರುವ ಮಟ್ಟನ್ನೂರಿನ 2,062 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. 3,050 ಮೀಟರ್ ಉದ್ದದ ರನ್ ವೇ ಹೊಂದಿದ್ದು ಮುಂದಿನ ದಿನಗಳಲ್ಲಿ 3,400 ಮೀಟರ್ ವರೆಗೆ ರನ್ವೇ ವಿಸ್ತರಣೆಯಾಗಲಿದೆ.
Advertisement
ಉದ್ಘಾಟನಾ ದಿನದಿಂದಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಕಣ್ಣೂರಿನಿಂದ ಆರಂಭವಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ವಿದೇಶ ಸೇವೆ ಹಾಗೂ ಗೋ ಏರ್ ಸರ್ವೀಸ್ ಸಿಗಲಿದೆ. ಏರ್ ಇಂಡಿಯಾ ಕಂಪನಿ ರಿಯಾದ್ ಮತ್ತು ದೋಹಾ ನಡುವೆ ವಿಮಾನ ಸೇವೆ ನೀಡುವುದಾಗಿ ಹೇಳಿದೆ.
ಕೇಂದ್ರ ಅನುಮತಿ ನೀಡದ ಕಾರಣ ಮೊದಲ ಹಂತದಲ್ಲಿ ವಿದೇಶಿ ಕಂಪನಿಗಳ ವಿಮಾನಗಳು ಕಣ್ಣೂರಿಗೆ ಬರುತ್ತಿಲ್ಲ. ಬೆಂಗಳೂರಿಗೆ ವಾರಕ್ಕೆ 6 ಬಾರಿ, ಹೈದರಾಬಾದಿಗೆ 4 ಬಾರಿ, ಚೆನ್ನೈಗೆ 3 ಸಲ ಸೇವೆ ನೀಡುವುದಾಗಿ ಗೋ ಏರ್ ಹೇಳಿಕೊಂಡಿದೆ.
ಕೊಡಗಿಗೆ ಹೇಗೆ ಲಾಭ?
ಮಡಿಕೇರಿಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ 300 ಕಿ.ಮೀ ದೂರದಲ್ಲಿದ್ದು ಬಸ್ಸಿನಲ್ಲಿ ಏಳುವರೆ ಗಂಟೆ ಸಮಯ ಬೇಕು. ಸಮೀಪದಲ್ಲಿರುವ ಮಂಗಳೂರು ವಿಮಾನ ನಿಲ್ದಾಣಕ್ಕೆ 140 ಕಿ.ಮೀ ದೂರವಿದ್ದು 4 ಗಂಟೆ ಸಮಯ ಬೇಕು. ಆದರೆ ಕಣ್ಣೂರು ವಿಮಾನ ನಿಲ್ದಾಣ 85 ಕಿ.ಮೀ ದೂರದಲ್ಲಿದ್ದು, ಎರಡು ಗಂಟೆಯಲ್ಲಿ ತಲುಪಬಹುದು. ಕೇರಳ ಮತ್ತು ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಭವಿಷ್ಯದಲ್ಲಿ ಈ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv