ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ (Kannappa) ಸಿನಿಮಾ ಇದೀಗ ವಿಶೇಷ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ಹಿರಿಯ ನಟ ಮೋಹನ್ ಬಾಬು, ವಿಷ್ಣು ಮಂಚು (Vishnu Manchu) ಮತ್ತು ಕಣ್ಣಪ್ಪ ಸಿನಿಮಾ ತಂಡ, ಕೇದಾರನಾಥ (Kedarnath), ಬದರಿನಾಥ್ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾಗಿದ್ದಾರೆ.
Advertisement
ನಟ ಮೋಹನ್ ಬಾಬು, ಅವರ ಪುತ್ರ ವಿಷ್ಣು ಮಂಚು, ನಿರ್ಮಾಪಕ ಮುಖೇಶ್ ಕುಮಾರ್ ಮತ್ತು ನಟ ಅರ್ಪಿತ್ ರಂಕಾ ಅವರ ಜತೆಗೆ ಕೇದಾರನಾಥ, ಬದರಿನಾಥ್ ಮತ್ತು ಋಷಿಕೇಶದ ಶಿವನ ದೇವಾಲಯಗಳಿಗೆ ಭೇಟಿ ನೀಡಿ, ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಂಡರು. ಭವ್ಯವಾದ ಹಿಮಾಲಯದ ನಡುವೆ ನೆಲೆಸಿರುವ ಶಿವನಿಗೆ ಸಮರ್ಪಿತವಾದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ ತಂಡವು ಭೇಟಿ ನೀಡಿತು. ಬಳಿಕ ಬದರಿನಾಥದಲ್ಲಿ ಪ್ರಾರ್ಥನೆ ಸಲ್ಲಿಸಿ, ಋಷಿಕೇಶಕ್ಕೆ ಭೇಟಿ ನೀಡಿದರು.
Advertisement
Advertisement
ಈ ಯಾತ್ರೆಯ ಬಗ್ಗೆ ಮಾತನಾಡಿರುವ ವಿಷ್ಣು ಮಂಚು, “ಕಣ್ಣಪ್ಪ ಸಿನಿಮಾ ಬಿಡುಗಡೆಗೂ ಮುನ್ನ ಎಲ್ಲ 12 ಜ್ಯೋತಿರ್ಲಿಂಗ ಪುಣ್ಯ ಕ್ಷೇತ್ರಗಳಿಗೆ ತೆರಳುವುದು ನಮ್ಮ ಗುರಿ. ಅದರಂತೆ ಮೊದಲಿಗೆ ಕೇದಾರನಾಥನ ದರ್ಶನ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನುಳಿದ 10 ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡಲಿದ್ದೇವೆ. ಅದೇ ರೀತಿ ಶೀಘ್ರದಲ್ಲಿಯೇ ಈ ನಮ್ಮ ಸಿನಿಮಾ ರಿಲೀಸ್ ಆಗಲಿದೆ.
Advertisement
ದಿ ಲಾರ್ಡ್ ಆಫ್ ದಿ ರಿಂಗ್ಸ್‌ನಂತಹ ಮಹಾಕಾವ್ಯ ಕಥೆಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ, ದೃಶ್ಯವೈಭವದ ಮೂಲಕವೇ ಎಲ್ಲರನ್ನು ಬೆರಗುಗೊಳಿಸುತ್ತದೆ. ಹೆಸರಾಂತ ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚೌ ಅವರು ನ್ಯೂಜಿಲೆಂಡ್‌ನ ರಮಣೀಯ ಪ್ರದೇಶಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಬಾಬು ಶರತ್‌ಕುಮಾರ್, ಬ್ರಹ್ಮಾನಂದಂ ಮತ್ತು ಕಾಜಲ್ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಗಣವಿದೆ. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕಣ್ಣಪ್ಪ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಬಿಗ್‌ಬಜೆಟ್‌ನ ಈ ಸಿನಿಮಾದ ಬಹುಪಾಲು ಚಿತ್ರೀಕರಣವನ್ನು ನ್ಯೂಜಿಲೆಂಡ್‌ನಲ್ಲಿ ಶೂಟ್ ಮಾಡಲಾಗಿದೆ.