ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆನಡಾದಲ್ಲಿಯೂ ಕನ್ನಡಾಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಕೆನಡಾದಲ್ಲಿರುವ ಹಲವಾರು ಕನ್ನಡಿಗರು ಸಿನಿಮಾವನ್ನು ವೀಕ್ಷಿಸಿದ್ದಾರೆ. ಅಲ್ಲದೆ ಚಿತ್ರ ತುಂಬಾ ಸುಂದರವಾಗಿ ಮೂಡಿಬಂದಿದ್ದು, ದರ್ಶನ್ ಅಭಿನಯವನ್ನು ಮೆಚ್ಚಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಅಲ್ಲಿನ ಕನ್ನಡಿಗರು ಸಿನಿಮಾದ ಪೋಸ್ಟರ್ ಹಿಡಿದು ಐ ಲವ್ ಯೂ ಡಿ ಬಾಸ್ ಎಂದು ಕುಣಿದು ಕುಪ್ಪಳಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಕೆನಡಾ ಕನ್ನಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮುನಿರತ್ನ ನಿರ್ಮಾಣದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರವಿಚಂದ್ರನ್ ಹೀಗೆ ಬಹುತಾರಾಗಣವೇ ಇದೆ. ಆಗಸ್ಟ್ 9ರ ಶುಕ್ರವಾರದಂದು ಬೆಳಗ್ಗಿನ ಜಾವ 4.30ಕ್ಕೆ ಬೆಂಗಳೂರಿನ ಕೋರಮಂಗಲದ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೊಂಡಿತು. ಅಂದು ವರಮಹಾಲಕ್ಷ್ಮಿ ಹಬ್ಬವಿದ್ದು, ಅದರ ಮಧ್ಯೆಯೂ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿ ಮಹಾಭಾರತದ ದೃಶ್ಯ ವೈಭವವನ್ನು ಕಣ್ತುಂಬಿಕೊಂಡಿದ್ದರು.
ಗುರುವಾರ ಬೆಂಗಳೂರಿನ ಮಂತ್ರಿಮಾಲ್‍ನಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆಯಿತು. ದರ್ಶನ್, ಸುಮಲತಾ ಅಂಬರೀಶ್, ರಾಕ್‍ಲೈನ್ ವೆಂಕಟೇಶ್ ಪ್ರೀಮಿಯರ್ ಶೋ ವೀಕ್ಷಿಸಿದ್ದರು. ಬಳಿಕ ಮಾತಾಡಿದ ಸುಮಲತಾ ಅಂಬರೀಶ್ ಎಲ್ಲರ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರೆ, ಎಲ್ಲರೂ ಸಿನಿಮಾ ನೋಡಿದ ಬಳಿಕ ನಾನು ಪ್ರತಿಕ್ರಿಯಿಸ್ತೇನೆ ಅಂತ ದರ್ಶನ್ ಹೇಳಿದ್ದರು.