ಹುಬ್ಬಳ್ಳಿ: ಕಠಿಣ ಪರಿಶ್ರಮದ ಮೂಲಕ ಕನ್ನಡಿಗರು ಉದ್ಯಮರಂಗದಲ್ಲಿ ಪ್ರಗತಿ ಸಾಧಿಸಬೇಕು. ಈ ಮೂಲಕ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮುಂದೆ ಬರುವಂತೆ ಮಾಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿನ ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದಲ್ಲಿ ಸ್ವಯಂ ಶಿಸ್ತು ತರುವ ಈ ಸಂಸ್ಥೆಗೆ ಎನ್‍ಎಬಿಎಲ್ ಮಾನ್ಯತೆ ದೊರೆತಿರುವುದು ಸಂತಸ ತಂದಿದೆ ಎಂದರು. ಇದನ್ನೂ ಓದಿ: ಅಹ್ಮದ್ ಪಟೇಲ್ ಸೂಚನೆ ಮೇರೆಗೆ ಮೋದಿ ವಿರುದ್ಧ ತೀಸ್ತಾ ಸೆಟಲ್ವಾಡ್ ಸಂಚು: ತನಿಖಾ ತಂಡ
ಹುಬ್ಬಳ್ಳಿಯ ಕೆಎಂಟಿಆರ್‍ಸಿ ಅತ್ಯಾಧುನಿಕ ಉಪಕರಣಗಳ ಪೂರೈಕೆಗಾಗಿ 4 ಕೋಟಿ ರೂಪಾಯಿ ಕೋರಿ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ. ಅದಕ್ಕೆ ಸರ್ಕಾರ ಹಣಕಾಸು ನೆರವು ನೀಡಲಿದೆ. ಹುಬ್ಬಳ್ಳಿ, ಧಾರವಾಡದಲ್ಲಿ ಎಫ್‍ಎಂಜಿಸಿ ಕ್ಲಸ್ಟರ್ ಸ್ಥಾಪನೆ ಮೂಲಕ ಒಂದು ಲಕ್ಷ ಉದ್ಯೋಗ ಸೃಜನೆಯಾಗಲಿವೆ. ಉತ್ತರ ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಧಾರವಾಡ ಮತ್ತು ತುಮಕೂರು ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆಗೆ ಶಾಸನಗಳ ತಿದ್ದುಪಡಿ ಅಗತ್ಯವಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ತಿದ್ದುಪಡಿಗಳನ್ನು ತರಲಾಗುವುದು. ಬರುವ ನವೆಂಬರ್ 2 ಹಾಗೂ 3 ರಂದು ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಸ್ಥಳೀಯ ಕನ್ನಡಿಗ ಉದ್ದಿಮೆದಾರರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದು ವಿನಂತಿ ಮಾಡಿಕೊಂಡರು. ಇದನ್ನೂ ಓದಿ: ಖಶೋಗಿ ಹತ್ಯೆಗೆ ಸೌದಿ ಕ್ರೌನ್ ಪ್ರಿನ್ಸ್ ಹೊಣೆಗಾರಿಕೆ: ಬೈಡನ್
ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಉದ್ಯಮದ ಎಲ್ಲ ರಂಗಗಳಲ್ಲಿ ಕನ್ನಡಿಗರು ಅಗ್ರಸ್ಥಾನದಲ್ಲಿ ಇರಬೇಕು ಎಂದು ಹೇಳಿದರು.