ಬೆಂಗಳೂರು: ಶ್ರೀಲಂಕಾದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ 7 ಕನ್ನಡಿಗರ ಮೃತದೇಹ ಇಂದು ಮಧ್ಯರಾತ್ರಿ ಬೆಂಗಳೂರಿಗೆ ರವಾನೆಯಾಗುವ ಸಂಭವವಿದ್ದು, ವಿಶೇಷ ವಿಮಾನದಲ್ಲಿ ಕೊಲಂಬೋದಿಂದ ಮೃತದೇಹಗಳನ್ನು ತರಲಾಗುತ್ತಿದೆ. ಈ ಬಗ್ಗೆ ಕೊಲಂಬೋದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಇತ್ತ ಶ್ರೀಲಂಕಾದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಕಂಗಾಲಾಗಿದ್ದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡಿನತ್ತ ಆಗಮಿಸುತ್ತಿದ್ದಾರೆ. ಶ್ರೀಲಂಕಾ ಬಾಂಬ್ ಬ್ಲಾಸ್ಟ್ ನಂತರ ಘಟನೆಯಲ್ಲಿ ಮೃತರಾಗಿದ್ದ ಕನ್ನಡಿಗರ ಮೃತದೇಹದ ಗುರುತು ಹಚ್ಚಲು ಬೆಂಗಳೂರಿನ ಯುವಕರು ನೆರವಾಗಿದ್ದರು. ಇಂಡಿಗೋ ವಿಮಾನದಲ್ಲಿ ಕೊಲಂಬೋದಿಂದ ಸುಮಾರು 15 ಕ್ಕೂ ಹೆಚ್ಚು ಮಂದಿ ಕನ್ನಡಿಗರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
Advertisement
Advertisement
ಬೆಂಗಳೂರಿನ ಬಗಲಗುಂಟೆ ನಿವಾಸಿಗಳಾದ ನವೀನ್, ಪ್ರವೀಣ್, ಕಿಟ್ಟಿ ಸೇರಿ ಮೂವರು ಸ್ನೇಹಿತರು ಕೂಡ ರಾಜ್ಯಕ್ಕೆ ವಾಪಸ್ಸಾಗಿದ್ದು, ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಶಾಂಗ್ರಿಲಾ ಹೋಟೆಲ್ ಪಕ್ಕದಲ್ಲೇ ಉಳಿದುಕೊಂಡಿದ್ದ ಇವರು ಸ್ಫೋಟಕ್ಕೆ 20 ನಿಮಿಷ ಮೊದಲು ಹೊರಗೆ ತಿರುಗಾಡಲು ತೆರಳಿದ್ದರಂತೆ. ತುಸು ದೂರ ಸಾಗುತ್ತಿದ್ದಂತೆ ಡ್ರೈವರ್ ಗೆ ಕರೆ ಬಂದು ಮಾಹಿತಿ ಸಿಕ್ಕಿದ್ದು ಹಿಂದಿರುಗಿ ಬರುವಷ್ಟರಲ್ಲಿ ಎಲ್ಲೆಡೆ ಸ್ಫೋಟದ ದೃಶ್ಯ ಕಂಡು ಆತಂಕ ಮನೆ ಮಾಡಿತ್ತು ಎಂದು ಕರಾಳ ನೆನಪನ್ನು ಹಂಚಿಕೊಂಡಿದ್ದಾರೆ.
Advertisement
ಭಾರತ ರಾಯಭಾರ ಕಚೇರಿಯ ಸಹಾಯದೊಂದಿಗೆ ಮರಳಿ ಹೋಟೆಲ್ ಗೆ ಬಂದಿದ್ದು, ಘಟನೆ ಬಳಿಕ ಸಾಕಷ್ಟು ಭಯವಾಗಿತ್ತು. ಭಾರತಕ್ಕೆ ಮರಳಿದರೆ ಸಾಕು ಎನ್ನುವಂತೆ ಆಗಿತ್ತು. ಮನೆಯವರೂ ಸಾಕಷ್ಟು ಭಯಗೊಂಡಿದ್ದರು ಎಂದು ಸ್ಫೋಟದ ತೀವ್ರತೆಯ ಬಗ್ಗೆ ಮಾಹಿತಿ ನೀಡಿದರು.